ADVERTISEMENT

ಮುಸ್ಲಿಂ ಸಮುದಾಯ ಹಿತಕ್ಕಾಗಿ ಟಿಕೆಟ್: ಜಮೀರ್ ಆರೋಪಕ್ಕೆ ಶಾಸಕ ಕಾಶೆಂಪೂರ ತಿರುಗೇಟು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 3:57 IST
Last Updated 2 ಏಪ್ರಿಲ್ 2021, 3:57 IST
ಬಂಡೆಪ್ಪ ಕಾಶೆಂಪೂರ
ಬಂಡೆಪ್ಪ ಕಾಶೆಂಪೂರ   

ಬಸವಕಲ್ಯಾಣ: ‘ಮುಸ್ಲಿಮರ ಹಿತ ಕಾಪಾಡುವುದಕ್ಕಾಗಿ ಹಾಗೂ ಅವರಿಗೂ ರಾಜಕೀಯದಲ್ಲಿ ಪ್ರಾಧಾನ್ಯತೆ ದೊರಕಿಸುವ ಉದ್ದೇಶದಿಂದ ಉಪ ಚುನಾವಣೆಯ ಜೆಡಿಎಸ್ ಟಿಕೆಟ್ ಈ ಸಮುದಾಯದವರಿಗೆ ನೀಡಲಾಗಿದೆ. ಹಣ ಪಡೆದು ಯಾವುದೋ ಪಕ್ಷಕ್ಕೆ ಸಹಕರಿಸುವುದಕ್ಕಾಗಿ ಹೀಗೆ ಮಾಡಲಾಗಿದೆ ಎಂದು ಶಾಸಕ ಜಮೀರ್ ಅಹ್ಮದ್ ಟೀಕಿಸಿದ್ದರಲ್ಲಿ ಹುರುಳಿಲ್ಲ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ ತಿರುಗೇಟು ನೀಡಿದರು.

ಗುರುವಾರ ಇಲ್ಲಿ ನಡೆದ ಜೆಡಿಎಸ್‌ ಪಕ್ಷದ ಪ್ರಚಾರ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಬಸವಾದಿ ಶರಣರ ನಾಡಾದ ಇಲ್ಲಿನ 14 ಚುನಾವಣೆಗಳಲ್ಲಿ 7 ಸಲ ಜನತಾ ಪರಿವಾರದ ಶಾಸಕರಾಗಿದ್ದರು. ಮತ್ತೊಮ್ಮೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂಬ ಉದ್ದೇಶದಿಂದ ಈ ಕ್ಷೇತ್ರಕ್ಕೆ ಮಹತ್ವ ನೀಡಿದ್ದೇವೆ. ಇತರೆಡೆ ಉಪ ಚುನಾವಣೆ ಇದ್ದರೂ ಇದೊಂದೇ ಕ್ಷೇತ್ರದಲ್ಲಿ ಅಭ್ಯರ್ಥಿ ಕಣಕ್ಕಿಳಿಸಿದ್ದೇವೆ. ನಮ್ಮ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ ಅನ್ಯ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಮಲ್ಲಿಕಾರ್ಜುನ ಖೂಬಾ ಬಿಜೆಪಿಯಲ್ಲಿದ್ದವರು. ಅವರು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ ಆ ಪಕ್ಷಕ್ಕೆ ಹಾನಿಯಿದೆ ಹೊರತು ನಮಗಲ್ಲ’ ಎಂದರು.

ADVERTISEMENT

‘ಬಿಜೆಪಿ ಕೇಂದ್ರ ಹಾಗೂ ರಾಜ್ಯದ ಚುಕ್ಕಾಣಿ ಹಿಡಿದು ಏನಾದರೂ ಮಹತ್ವದನ್ನು ಸಾಧಿಸಬಹುದು ಎಂದು ಬಯಸಿದ್ದೇವು. ಆದರೆ ಯಾವುದೇ ಜನಪರ ಯೋಜನೆ ಜಾರಿಗೊಳಿಸಿಲ್ಲ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಈ ತಾಲ್ಲೂಕಿನ ₹90 ಕೋಟಿ ಸಾಲಮನ್ನಾ ಮಾಡಲಾಗಿದ್ದು, 19,000 ರೈತರಿಗೆ ಲಾಭವಾಗಿದೆ’ ಎಂದರು.

ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಸೋಲಪುರೆ, ಶಬ್ಬೀರಪಾಶಾ ಮುಜಾವರ್, ಜಿ.ಪಂ ಸದಸ್ಯ ಆನಂದ ಪಾಟೀಲ, ತುಕಾರಾಮ ಮಲ್ಲಪ್ಪ, ರಾಜೀವ ಸುಗೂರೆ, ಆಕಾಶ ಖಂಡಾಳೆ, ಸುಶೀಲ ಆವಸ್ಥಿ, ಶರಣಪ್ಪ ಪರೆಪ್ಪ, ಸಂದೀಪ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.