ADVERTISEMENT

ಜನವರಿಯಲ್ಲಿ ವೀರಲೋಕ ಪುಸ್ತಕ ಸಂತೆ

ಪುಸ್ತಕ ಸಂಸ್ಕ್ರತಿ ಉಳಿಸಿ ಬೆಳೆಸಲು ಪುಸ್ತಕ ಸಂತೆ; ಗುರುಬಸವ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 6:43 IST
Last Updated 30 ಡಿಸೆಂಬರ್ 2025, 6:43 IST
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ಬೀದರ್‌ನಲ್ಲಿ ಪುಸ್ತಕ ಸಂತೆಯ ಪೂರ್ವಭಾವಿ ಸಭೆ ಜರುಗಿತು
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರ ನೇತೃತ್ವದಲ್ಲಿ ಬೀದರ್‌ನಲ್ಲಿ ಪುಸ್ತಕ ಸಂತೆಯ ಪೂರ್ವಭಾವಿ ಸಭೆ ಜರುಗಿತು   

ಬೀದರ್‌: ಬರುವ ಜನವರಿ 24ರಿಂದ 26ರ ವರೆಗೆ ನಗರದಲ್ಲಿ ವೀರಲೋಕ ಪುಸ್ತಕ ಸಂತೆ ಆಯೋಜಿಸಲು ತೀರ್ಮಾನಿಸಲಾಗಿದೆ.

ಇಲ್ಲಿನ ವಿದ್ಯಾ ನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದ ಆವರಣದಲ್ಲಿ ನಡೆದ ಪುಸ್ತಕ ಸಂತೆಯ ಪೂರ್ವಭಾವಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಪುಸ್ತಕ ಸಂಸ್ಕ್ರತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ಪುಸ್ತಕ ಸಂತೆ ಆಯೋಜಿಸಲಿದೆ. ಪ್ರತಿಯೊಬ್ಬರೂ ಈ ಸಂತೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

ADVERTISEMENT

ಬೆಂಗಳೂರಿನ ಪುಸ್ತಕ ಸಂತೆಯಲ್ಲಿ ಭಾಗವಹಿಸಿ ಅಲ್ಲಿನ ಅಚ್ಚುಕಟ್ಟುತನ ಮತ್ತು ಯಶಸ್ಸನ್ನು ಕಣ್ತುಂಬಿಕೊಂಡಿದ್ದೇನೆ. ಬೆಂಗಳೂರಿನ ಪುಸ್ತಕ ಸಂತೆಯನ್ನೂ ಮೀರಿಸುವಂತಹ ಸಂತೆಯನ್ನು ನಮ್ಮಲ್ಲಿ ಆಯೋಜಿಸಲು ತೀರ್ಮಾನಿಸಿದ್ದೇವೆ. ಅದಕ್ಕೆ ಮಠದ ಭಕ್ತಾದಿಗಳು ಮತ್ತು ಸಮಸ್ತ ಕನ್ನಡಾಭಿಮಾನಿಗಳು ಪುಸ್ತಕ ಸಂತೆಯ ಆಯೋಜನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.

ಬೀದರ್‌ನಲ್ಲಿ ನಡೆಯಲಿರುವ ಪುಸ್ತಕ ಸಂತೆಯ ರೂವಾರಿ ಗುರುನಾಥ ರಾಜಗೀರ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬೀದರ್‌ ಮತ್ತು ಕಲ್ಯಾಣ ಕರ್ನಾಟಕ ಭಾಗದ ಪ್ರಕಾಶಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಮಾಡಬೇಕು. ಸಂತೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಲೇಖಕರಿಗೆ ತಮ್ಮ ಪುಸ್ತಕಗಳನ್ನು ಬಿಡುಗಡೆಗೊಳಿಸುವ ಉದ್ದೇಶವಿದ್ದರೆ ವೀರಲೋಕ ಪುಸ್ತಕ ಸಂತೆಯಲ್ಲಿ ವೇದಿಕೆ ಮತ್ತು ಅತಿಥಿಗಳನ್ನು ಒದಗಿಸುವುದಾಗಿ ತಿಳಿಸಿದರು.

ವೀರಲೋಕ ಪುಸ್ತಕ ಸಂತೆಯಲ್ಲಿ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟದ ಜೊತೆಗೆ ಮೂರು ದಿನವೂ ವಿವಧ ಗೋಷ್ಠಿಗಳು, ಸಂವಾದಗಳು, ಸಂಜೆ ವೇಳೆ ವಚನ ಗಾಯನ, ಭಾವಗೀತೆ, ಜಾನಪದ ಗೀತೆ ಮತ್ತು ಗಜಲ್ ಗೀತ ಗಾಯನವಿರುತ್ತದೆ. ಜೊತೆಗೆ ಸುಮಾರು 30ಕ್ಕೂ ಹೆಚ್ಚು ವೇದಿಕೆ ಕಾರ್ಯಕ್ರಮಗಳಿರುತ್ತವೆ ಎಂದು ವಿವರಿಸಿದರು.

ಕಸಾಪ ಜಿಲ್ಲಾಧ್ಯಕ್ಷ‌ ಸುರೇಶ ಚನಶೆಟ್ಟಿ ಮಾತನಾಡಿ, ಬೀದರ್‌ನಲ್ಲಿ ನಡೆಯಲಿರುವ ವೀರಲೋಕ ಪುಸ್ತಕ ಸಂತೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸುಮಾರು ನೂರಕ್ಕೂ ಹೆಚ್ಚು ಲೇಖಕರು ಪಾಲ್ಗೊಳ್ಳುವರು. ಓದುಗರೊಂದಿಗೆ ಸಂವಾದಕ್ಕೂ ಅವಕಾಶ ಇದೆ ಎಂದರು.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ, ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ವನ್ಯಜೀವಿ ಮಂಡಳಿ ಸದಸ್ಯ ವಿನಯ್‌ ಕುಮಾರ್‌ ಮಾಳಗೆ, ಬಸವರಾಜ ಧನ್ನೂರ, ಜೈರಾಜ ಖಂಡ್ರೆ, ರೇವಣಸಿದ್ದಪ್ಪ ಜಲಾದೆ, ಕಲ್ಯಾಣರಾವ ಪಾಟೀಲ, ಶರತ ಅಭಿಮಾನ, ಮಹೇಶ ಗೋರನಾಳಕರ, ಗುರುನಾಥ ಅಕ್ಕಣ್ಣ, ವಿಜಯಕುಮಾರ ಗೌರೆ, ಲೋಕೇಶ ಉಡಬಾಳೆ, ಎಸ್.ಎಸ್. ಹೊಡಮನಿ, ಉಮಾಕಾಂತ ಮೀಸೆ, ಯೋಗೇಂದ್ರ ಯದಲಾಪೂರೆ ಮತ್ತಿತರರು ಪಾಲ್ಗೊಂಡಿದ್ದರು.

ರಾಜ್ಯದಲ್ಲಿ ಪುಸ್ತಕ ಸಂತೆ ಉಂಟುಮಾಡಿರುವ ಸಂಚಲನ ತುಂಬಾ ದೊಡ್ಡದು. ಅಂತಹ ಸಂಚಲನ ಬೀದರ್‌ ಜಿಲ್ಲೆಯಲ್ಲಿ ಸೃಷ್ಟಿಯಾಗಬೇಕಿದೆ.
ಸಂತೋಷ ಹಾನಗಲ್‌, ಕಾರ್ಯದರ್ಶಿ ಕನ್ನಡ ಪುಸ್ತಕ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.