ADVERTISEMENT

ಕೊಂಬಿನ ತರಕಾರಿ ಬೆಲೆ ಸ್ಥಿರ: ನುಗ್ಗೆಕಾಯಿ ಬೆಲೆ ಕೆ.ಜಿಗೆ ₹30

ಚಂದ್ರಕಾಂತ ಮಸಾನಿ
Published 8 ಏಪ್ರಿಲ್ 2022, 22:30 IST
Last Updated 8 ಏಪ್ರಿಲ್ 2022, 22:30 IST
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ/ ಚಿತ್ರ: ಗುರುಪಾದಪ್ಪ ಸಿರ್ಸಿ
ಬೀದರ್‌ನ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ/ ಚಿತ್ರ: ಗುರುಪಾದಪ್ಪ ಸಿರ್ಸಿ   

ಬೀದರ್: ವಿಪರೀತ ಬಿಸಿಲು ಇರುವ ಕಾರಣ ಜನ ಮಾರುಕಟ್ಟೆಗೆ ಬರಲು ಹಿಂಜರಿಯುತ್ತಿದ್ದಾರೆ. ಕೆಲ ತರಕಾರಿ ಬೆಲೆಯಲ್ಲಿ ಮಾತ್ರ ಹೆಚ್ಚಳವಾಗಿದ್ದು, ಬಹುತೇಕ ತರಕಾರಿ ಬೆಲೆ ಕುಸಿದಿದೆ. ಗ್ರಾಹಕರು ನಿತ್ಯ ಸೇವಿಸುವ ತರಕಾರಿಗಳ ಬೆಲೆ ಸ್ಥಿರವಾಗಿದೆ. ಹೀಗಾಗಿ ಗ್ರಾಹಕರು ಒಂದಿಷ್ಟು ನೆಮ್ಮದಿಯಿಂದ ಇರುವಂತಾಗಿದೆ.

ನಗರದ ತರಕಾರಿ ಮಾರುಕಟ್ಟೆಯಲ್ಲಿ ಆಲೂಗಡ್ಡೆ, ಎಲೆಕೋಸು, ಗಜ್ಜರಿ, ಡೊಣ ಮೆಣಸಿನಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಏರಿಕೆಯಾಗಿದೆ. ಬೀನ್ಸ್‌, ಸಬ್ಬಸಗಿ ಹಾಗೂ ಮೆಂತೆ ಸೊಪ್ಪು ₹ 2 ಸಾವಿರ ಹೆಚ್ಚಾಗಿದೆ.

ಚಳಿಗಾಲದಲ್ಲಿ ಪ್ರತಿ ಕೆ.ಜಿಗೆ ಒಂದು ಸಾವಿರ ರೂಪಾಯಿ ವರೆಗೂ ಮಾರಾಟವಾಗಿದ್ದ ನುಗ್ಗೆಕಾಯಿ ಬೆಲೆ ₹ 30ಗೆ ಕುಸಿದಿದೆ. ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 5 ಸಾವಿರ ಕಡಿಮೆಯಾಗಿದೆ. ಬೇಸಿಗೆಯಲ್ಲಿ ನುಗ್ಗೆಕಾಯಿ ದೇಹಕ್ಕೆ ಉಷ್ಣ ಎನ್ನುವ ಕಾರಣ ಗ್ರಾಹಕರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಆವಕವಾದ ಕಾರಣ ಸಹಜವಾಗಿಯೇ ಬೆಲೆ ಕುಸಿದಿದೆ.

ADVERTISEMENT

ಬೆಂಡೆಕಾಯಿ ಬೆಲೆ ಪ್ರತಿಕ್ವಿಂಟಲ್‌ಗೆ ₹ 3 ಸಾವಿರ, ಕರಿಬೇವು ₹ 4 ಸಾವಿರ, ಮೆಣಸಿನಕಾಯಿ ₹ 2 ಸಾವಿರ ಕಡಿಮೆಯಾಗಿದೆ. ಬೆಳ್ಳುಳ್ಳಿ, ಬೀಟ್‌ರೂಟ್‌, ಚವಳೆಕಾಯಿ, ಪಾಲಕ್‌ ಬೆಲೆ ಸಹ ₹ 1 ಸಾವಿರ ಇಳಿಕೆಯಾಗಿದೆ.

ಗ್ರಾಹಕರ ಸಾರ್ವಕಾಲಿಕ ಅಚ್ಚುಮೆಚ್ಚಿನ ತರಕಾರಿಗಳಾದ ಹಿರೇಕಾಯಿ, ಬದನೆಕಾಯಿ, ಹೂಕೋಸು, ಈರುಳ್ಳಿ, ಕೊತಂಬರಿ, ಟೊಮೆಟೊ ಹಾಗೂ ತೊಂಡೆಕಾಯಿ ಬೆಲೆ ಸ್ಥಿರವಾಗಿದೆ.

‘ಬಿಸಿಲಿನ ತಾಪ ಹೆಚ್ಚಿದೆ. ನೀರಾವರಿ ಪ್ರದೇಶದಲ್ಲಿ ಬೆಳೆದ ತರಕಾರಿ ಮಾರುಕಟ್ಟೆಗೆ ಬರುತ್ತಿದೆ. ಸೊಪ್ಪಿನ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಮಾರುಕಟ್ಟೆಗೆ ಅಪಾರ ಪ್ರಮಾಣದಲ್ಲಿ ತರಕಾರಿ ಬರುತ್ತಿದ್ದರೂ ಬಿಸಿಲಿನ ಝಳಕ್ಕೆ ಬೇಗ ಬಾಡುತ್ತಿದೆ. ಬಾಡಿದ ನಂತರ ಬೇಡಿಕೆ ಕಡಿಮೆಯಾಗುತ್ತಿದೆ. ಹೀಗಾಗಿ ವ್ಯಾಪಾರಸ್ಥರು ಸಹ ಕಡಿಮೆ ಪ್ರಮಾಣದಲ್ಲಿ ತರಕಾರಿ ತರಿಸಿಕೊಳ್ಳುತ್ತಿದ್ದಾರೆ ಎಂದು ತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳ ಹೇಳುತ್ತಾರೆ.

ಹೈದರಾಬಾದ್‌ನಿಂದ ಹಿರೇಕಾಯಿ, ಡೊಣ ಮೆಣಸಿನಕಾಯಿ, ಬದನೆಕಾಯಿ, ತೊಂಡೆಕಾಯಿ, ಚವಳೆಕಾಯಿ, ಗಜ್ಜರಿ, ಬೀಟ್‌ರೂಟ್‌ ಬೀದರ್‌ ತರಕಾರಿ ಮಾರುಕಟ್ಟೆಗೆ ಆವಕವಾಗಿದೆ. ಸೋಲಾಪುರದಿಂದ ಈರುಳ್ಳಿ ಹಾಗೂ ಬೆಳ್ಳುಳ್ಳಿ ಬಂದಿದೆ. ಭಾಲ್ಕಿ, ಚಿಟಗುಪ್ಪ ಹಾಗೂ ಹುಮನಾಬಾದ್ ತಾಲ್ಲೂಕಿನಿಂದ ಬದನೆಕಾಯಿ, ಹೂಕೋಸು, ಎಲೆಕೋಸು ಹಾಗೂ ಕರಿಬೇವು ಬಂದಿದೆ.

ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
ತರಕಾರಿ ಮಾರುಕಟ್ಟೆ ಬೆಲೆ

ಈರುಳ್ಳಿ 10-20, 10-20
ಮೆಣಸಿನಕಾಯಿ 100-120,80-100
ಆಲೂಗಡ್ಡೆ 10-20,20-30
ಎಲೆಕೋಸು 20-30,20-30
ಬೆಳ್ಳುಳ್ಳಿ 40-50,30-40
ಗಜ್ಜರಿ 30-40,40-50
ಬೀನ್ಸ್‌ 60-80,80-100
ಬದನೆಕಾಯಿ 20-30, 20-30
ಮೆಂತೆ ಸೊಪ್ಪು 50-60,60-80
ಹೂಕೋಸು 30-40, 30-40
ಸಬ್ಬಸಗಿ 50-60,60-80
ಬೀಟ್‌ರೂಟ್‌ 30-40,20-30
ತೊಂಡೆಕಾಯಿ 50-60,50-60
ಕರಿಬೇವು 60-80,30-40
ಕೊತಂಬರಿ 10-20,10-20
ಟೊಮೆಟೊ 10-20,5-10
ಪಾಲಕ್‌ 30-40,20-30
ಬೆಂಡೆಕಾಯಿ 60-80,40-50
ಹಿರೇಕಾಯಿ 50-60,50-60
ನುಗ್ಗೆಕಾಯಿ 60-80,20-30
ಡೊಣ ಮೆಣಸಿನಕಾಯಿ 40-50,50-60
ಚವಳೆಕಾಯಿ 50-60,40-50

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.