ಹುಲಸೂರ: ಪಟ್ಟಣದ ಪಶುವೈದ್ಯಕೀಯ ಆಸ್ಪತ್ರೆ ಹೊಸ ಕಟ್ಟಡ ಕಾಮಗಾರಿಯು ನಿರ್ಮಾಣ ಹಂತದಲ್ಲಿದ್ದು, ಒಂದು ವರ್ಷದಿಂದ ನನೆಗುದಿಗೆ ಬಿದ್ದಿದೆ. ಹಾಲಿ ಇರುವ ಕಿರಿದಾದ ಕಟ್ಟಡವು ಮೂಲ ಸೌಕರ್ಯ ವಂಚಿತವಾಗಿದ್ದು, ರೈತರು ತೊಂದರೆ ಅನುಭವಿಸುವಂತಾಗಿದೆ.
17 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹುಲಸೂರ ಪಟ್ಟಣವು ತಾಲ್ಲೂಕ ಕೇಂದ್ರವಾಗಿದೆ. ಸಮೀಪದ ಗಡಿಗೌಡಗಾಂವ , ದಾಪಕಾ, ದೇವಣಾಳ, ಹಾಲಹಳ್ಳಿ, ಅಂತರ ಭಾರತಿ ತಾಂಡಾ, ಗೋವರ್ಧನ ತಾಂಡಾ ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳು ಪಶುವೈದ್ಯಕೀಯ ಆಸ್ಪತ್ರೆ ಕೇಂದ್ರಕ್ಕೆ ಒಳಪಟ್ಟಿವೆ. ಆಸ್ಪತ್ರೆಗೆ ಬರುವ ಹಾಗೂ ದಾಖಲಾಗುವ ಜಾನುವಾರುಗಳ ಸಂಖ್ಯೆ ಹೆಚ್ಚಾಗಿ, ಮೂಲ ಸೌಕರ್ಯಗಳ ಸಮಸ್ಯೆ ತೀವ್ರಗೊಂಡಿದೆ.
2022-2023ನೇ ಆರ್‌ಐಡಿಎಫ್ ಯೋಜನೆಯಡಿ ₹50.95 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಪಶುವೈದ್ಯಕೀಯ ಆಸ್ಪತ್ರೆ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಹೆಬಿಟೇಟ್ ಸೆಂಟರ್ ಬೆಂಗಳೂರು ಅವರಿಗೆ ಈ ಟೆಂಡರ್ ನೀಡಲಾಗಿತ್ತು. 2023ರ ಸಪ್ಟೆಂಬರ್ ತಿಂಗಳಲ್ಲಿ ಶಾಸಕ ಶರಣು ಸಲಗರ ಅವರು ಹೊಸ ಕಟ್ಟಡ ನಿರ್ಮಿಸಲು ಚಾಲನೆ ನೀಡಿದ್ದರು. ಕೆಲ ದಿನಗಳ ಕಾಲ ಕಟ್ಟಡ ಕಾಮಗಾರಿ ಆರಂಭಗೊಂಡಿತು. ನಂತರದಲ್ಲಿ ಗುತ್ತಿದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಅರ್ಧಕ್ಕೆ ನಿಂತಿದೆ.
ಆಸ್ಪತ್ರೆಯಲ್ಲಿ ಸಾಕಷ್ಟು ಜಾಗವಿದೆ. ಸರಿಯಾದ ನಿರ್ವಹಣೆ ಇಲ್ಲ. ಹಳೆ ಕಟ್ಟಡ ತೆರವುಗೊಳಿಸಿ ಸಮರ್ಪಕವಾಗಿ ಬಳಸಿಕೊಂಡಿಲ್ಲ. ಪಟ್ಟಣದಲ್ಲಿ ಪಶು ಚಿಕಿತ್ಸೆ ಕಟ್ಟಡ ನಿರ್ಮಿಸಿದ ಕಾರಣ ಮಳೆ ಬಂದರೆ ಸಾಕು ಆಸ್ಪತ್ರೆಯ ಆವರಣದಲ್ಲಿ ನೀರು ಸಂಗ್ರಹವಾಗಿ ಕರೆ ಅಂಗಳದಂತೆ ಆಗುತ್ತದೆ. ಇನ್ನು ಹಳೆಯ ಕಟ್ಟಡದಲ್ಲಿ ಚಿಕಿತ್ಸೆಗಾಗಿ ಜಾನುವಾರು ಕರೆ ತಂದರೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಎಂದು ರೈತರ ದೂರುತ್ತಾರೆ.
ದನಕರುಗಳಿಗೆ ಚಿಕಿತ್ಸೆ ನೀಡಿದ ನಂತರ ಔಷಧ ಹೊರಗಡೆ ತರುವಂತೆ ಚೀಟಿಯನ್ನು ವೈದ್ಯರು ನೀಡುತ್ತಾರೆ. ಔಷಧ ಕೊರತೆ ಇದೆ. ಮೇಕೆ ಹಾಗೂ ಕುರಿಗಳಿಗೆ ಸಮರ್ಪಕವಾಗಿ ಔಷಧ ಸಿಗುತ್ತಿಲ್ಲ. ಇದರ ಬಗ್ಗೆ ಗಮನಹರಿಸಬೇಕು ಕಡ್ಡಾಯವಾಗಿ ತೊಟ್ಟಿ ನಿರ್ಮಿಸಿ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಖಾಸಗಿ ವಾಹನಗಳನ್ನು ತಂದು ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸುತ್ತಾರೆ. ಇದನ್ನು ತಡೆಯಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಅಬ್ರಾರ ಸೌದಾಗರ.
’ಅರ್ಧಕ್ಕೆ ನಿಂತಿರುವ ಆಸ್ಪತ್ರೆ ಕಟ್ಟಡ ಪೂರ್ಣಗೊಳಿಸುವಂತೆ ಅಧಿಕಾರಿ, ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಈಗಲಾದರೂ ಸಂಬಂಧಿಸಿದವರು ಕಟ್ಟಡ ಕಾಮಗಾರಿ ವಿಳಂಬ ಧೋರಣೆ ಅನುಸರಿಸುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಒತ್ತಾಯಿಸಿ ಕಾಮಗಾರಿ ಪೂರ್ಣಗೊಳಿಸಿ ಬಡ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ದೊರಕಿಸಿಕೊಡಬೇಕು’ ಎಂದು ರೈತರು ಒತ್ತಾಯಿಸುತ್ತಾರೆ.
ಹೆಬಿಟೇಟ್ ಸೆಂಟರ್ ಬೆಂಗಳೂರು ಅವರಿಗೆ ಈ ಟೆಂಡರ ನೀಡಲಾಗಿತ್ತು ಈಗಾಗಲೆ ಪ್ರಥಮ ಕಂತಿನಿಂದ ನೆಂಟಲವರೆಗೆ ಕಾಮಗಾರಿಯಾಗಿದ್ದು ದ್ವಿತೀಯ ಕಂತು ಬಿಡುಗಡೆಯಾಗಿದ್ದು ಸಂಬಂಧಪಟ್ಟ ಇಂಜಿನಿಯರ್ ಅವರಿಗೆ ಮಾತನಾಡಿ ಕಟ್ಟಡ ಕಾಮಗಾರಿ ಆರಂಭ ಮಾಡಲು ತಿಳಿಸಲಾಗುವುದು.ಡಾ. ನರಸಪ್ಪಾ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.