ADVERTISEMENT

ಬೀದರ್‌ | ಪಶು ವಿ.ವಿ. ಘಟಿಕೋತ್ಸವ: ರೈತನ ಮಗಳಿಗೆ 15 ಚಿನ್ನದ ಪದಕ

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ನಾಗೇನಹಳ್ಳಿಯ ರವೀನಾ ಸಾಧನೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 21 ಮಾರ್ಚ್ 2025, 23:30 IST
Last Updated 21 ಮಾರ್ಚ್ 2025, 23:30 IST
ರವೀನಾ ಕೆ.ಎಸ್‌.
ರವೀನಾ ಕೆ.ಎಸ್‌.   

ಬೀದರ್‌: ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ನಾಗೇನಹಳ್ಳಿ ಗ್ರಾಮದ ರೈತನ ಮಗಳಾದ ರವೀನಾ ಅವರು ‘ಬ್ಯಾಚುಲರ್‌ ಆಫ್‌ ವೆಟರ್ನರಿ ಸೈನ್ಸ್‌ ಅಂಡ್‌ ಅನಿಮಲ್‌ ಹಸ್ಬೆಂಡ್ರಿ’ (ಬಿವಿಎಸ್‌ಸಿ ಅಂಡ್‌ ಎಎಚ್‌) ಸ್ನಾತಕ ಪದವಿಯಲ್ಲಿ 15 ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.

ಇಲ್ಲಿನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಬೆಂಗಳೂರಿನ ಪಶು ವಿ.ವಿ. ಕಾಲೇಜಿನ ವಿದ್ಯಾರ್ಥಿನಿ ರವೀನಾ, 2022–23ನೇ ಸಾಲಿನಲ್ಲಿ ಈ ಸಾಧನೆ ತೋರಿದ್ದಾರೆ.

ಪಶು ವಿ.ವಿ.ಯ 20 ವರ್ಷಗಳ ಇತಿಹಾಸದಲ್ಲಿ ಒಬ್ಬ ವಿದ್ಯಾರ್ಥಿ 16 ಚಿನ್ನದ ಪದಕ, ಇಬ್ಬರು 15 ಚಿನ್ನದ ಪದಕಗಳಿಗೆ ಪಾತ್ರರಾಗಿದ್ದಾರೆ. ಆ ಸಾಲಿಗೆ ಈಗ ರವೀನಾ ಹೊಸ ಸೇರ್ಪಡೆ.

ADVERTISEMENT

ರವೀನಾ ಅವರ ತಂದೆ ಕುಮಾರ ಕೃಷಿಕರು. ಎರಡು ಎಕರೆ ಜಮೀನಿನಲ್ಲಿ ಕಷ್ಟಪಟ್ಟು ಉಳುಮೆ ಮಾಡಿ, ಅದರಲ್ಲಿ ಬಂದ ಆದಾಯದಿಂದ ಇರುವ ಒಬ್ಬ ಮಗಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ತಂದೆಯ ನಿರೀಕ್ಷೆಗೆ ತಕ್ಕಂತೆ ಓದುವುದರ ಮೂಲಕ ಮಗಳು ಚಿನ್ನದ ಪದಕಗಳಿಗೆ ಕೊರಳೊಡ್ಡಲಿದ್ದಾರೆ.

ರವೀನಾ ಅವರು ಪಿಯುನಲ್ಲಿ ಓದುತ್ತಿರುವಾಗ ಅವರ ತಾಯಿ ಸಾಕಮ್ಮ ನಿಧನ ಹೊಂದಿದ್ದರು. ಮಗಳಿಗೆ ತಾಯಿಯ ಕೊರತೆ ಕಾಡದಂತೆ ನೋಡಿಕೊಂಡಿದ್ದರು. ತಂದೆ ಹಾಗೂ ಸಹೋದರ ಸಂಬಂಧಿಗಳು ಬೆಂಬಲವಾಗಿ ನಿಂತಿದ್ದರಿಂದ ಅವರ ಉನ್ನತ ಶಿಕ್ಷಣಕ್ಕೆ ಯಾವುದೇ ತೊಡಕಾಗಲಿಲ್ಲ.

‘ನಾನು ಸೇರಿದ ಕೋರ್ಸ್‌ ಐದೂವರೆ ವರ್ಷಗಳದ್ದು. ಕೋವಿಡ್‌ನಿಂದಾಗಿ ಆರು ವರ್ಷಕ್ಕೆ ವಿಸ್ತರಣೆಯಾಗಿತ್ತು. ಕೋವಿಡ್‌ನಿಂದ ಎರಡನೇ ಮತ್ತು ಮೂರನೇ ವರ್ಷ ಬಹಳ ಕಠಿಣ ಸಮಯ ಅಂತ ಹೇಳಬಹುದು. ಆದರೆ, ಧೃತಿಗೆಡದೇ ಓದಿದೆ. ಆನಂತರ ಎಲ್ಲ ಸಹಜವಾದ ನಂತರ ನಿತ್ಯ ತರಗತಿಗಳಿಗೆ ಹಾಜರಾಗಿ, ಅಂದಿನ ಪಾಠ ಅಂದೇ ಓದು ಮುಗಿಸುತ್ತಿದ್ದೆ. ಪರೀಕ್ಷೆ ಸುಲಭವಾಗಿ ಎದುರಿಸಲು ಇದು ಸಹಾಯವಾಯಿತು’ ಎಂದು ರವೀನಾ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ವೆಟರ್ನರಿ ಸೈನ್ಸ್‌ ಕೋರ್ಸ್‌, ಕೃಷಿ ಹಾಗೂ ಪ್ರಾಣಿಗಳಿಗೆ ಸಂಬಂಧಿಸಿರುವ ಕಾರಣ ಇದನ್ನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡೆ. ನಮಗೆ ಯಾವುದರಲ್ಲಿ ಇಷ್ಟವಿರುತ್ತೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು. ನನ್ನ ಓದಿಗೆ ಯಾವುದೇ ತೊಡಕಾಗದಂತೆ ತಂದೆ ನೋಡಿಕೊಂಡರು’ ಎಂದು ನೆನೆದರು.

ರವೀನಾ ಅವರ ಸಹಪಾಠಿ ಬೆಂಗಳೂರಿನ ಜೆ.ಪಿ. ನಗರದ ಆದಿತ್ಯ ಚಿದಾನಂದ ಈಶ್ವರಲ ಅವರು 9 ಚಿನ್ನದ ಪದಕಗಳಿಗೆ ಪಾತ್ರರಾಗಿದ್ದಾರೆ. ಇದೇ ಕೋರ್ಸ್‌ನಲ್ಲಿ ಯಾದಗಿರಿ ಜಿಲ್ಲೆ ನಾರಾಯಣಪುರದ ಭಾಗ್ಯಶ್ರೀ ಹಾಗೂ ಶಿವಮೊಗ್ಗದ ವಿಶ್ವಾಸ ಬಿ. ಅವರು ತಲಾ ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.

ಹೆಚ್ಚಿನವರಿಗೆ ಮೆಡಿಕಲ್‌ ಎಂಜಿನಿಯರಿಂಗ್‌ ಅಂದ್ರೆ ಇಷ್ಟ. ನನಗೆ ಮೊದಲಿನಿಂದಲೂ ಪ್ರಾಣಿಗಳೆಂದರೆ ಇಷ್ಟ. ಹೀಗಾಗಿ ವೆಟರ್ನರಿ ಸೈನ್ಸ್‌ ಆಯ್ಕೆ ಮಾಡಿಕೊಂಡೆ
–ರವೀನಾ ಕೆ.ಎಸ್‌. ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ
25ಕ್ಕೆ ಪಶು ವಿ.ವಿ. ಘಟಿಕೋತ್ಸವ
ಬೀದರ್‌ನಲ್ಲಿರುವ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವ ಮಾ. 25ರಂದು ಬೆಳಿಗ್ಗೆ 11ಕ್ಕೆ ಜರುಗಲಿದೆ. ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು 2022–23ನೇ ಸಾಲಿನ 16 ಸ್ನಾತಕ ಪದವೀಧರರಿಗೆ 53 ಚಿನ್ನದ ಪದಕ, ಸ್ನಾತಕೋತ್ತರ ಪದವಿ ಪೂರೈಸಿದ 21 ವಿದ್ಯಾರ್ಥಿಗಳಿಗೆ 34 ಚಿನ್ನದ ಪದಕ, ಡಾಕ್ಟರೇಟ್‌ ಪದವಿ ಮುಗಿಸಿರುವ 7 ವಿದ್ಯಾರ್ಥಿಗಳಿಗೆ ತಲಾ ಒಂದು ಚಿನ್ನದ ಪದಕ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರಿದ ಇಬ್ಬರಿಗೆ ತಲಾ ಒಂದು ಚಿನ್ನದ ಪದಕ, ಪದವಿ ಪ್ರದಾನ ಮಾಡಲಿದ್ದಾರೆ. ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆ ನಿರ್ದೇಶಕ ಡಾ. ನವೀನಕುಮಾರ ಘಟಿಕೋತ್ಸವ ಭಾಷಣ ಮಾಡುವರು. ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌ ಆಗಮಿಸುವರು ಎಂದು ವಿ.ವಿ. ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಶುಕ್ರವಾರ ತಿಳಿಸಿದರು.
ದಕ್ಷೀತ್‌ ಪಿ.ಎಲ್‌.
ಪಿಜಿಯಲ್ಲಿ ದಕ್ಷೀತ್‌ಗೆ 6 ಚಿನ್ನದ ಪದಕ
ಚಿತ್ರದುರ್ಗದ ಚಳ್ಳಕೆರೆಯ ಚಿಕ್ಕೇನಹಳ್ಳಿ ಗ್ರಾಮದ ದಕ್ಷೀತ್‌ ಪಿ.ಎಲ್‌. ಅವರು ಎಂವಿಎಸ್‌ಸಿ ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಇವರು ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದು, 2022–23ನೇ ಸಾಲಿನಲ್ಲಿ ಈ ಸಾಧನೆ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಪಶು ವಿ.ವಿ.ಯಲ್ಲೇ ಪಿಎಚ್‌.ಡಿ ಅಧ್ಯಯನ ಮಾಡುತ್ತಿದ್ದಾರೆ. ‘ಪೋಷಕರ ಬೆಂಬಲ, ನಾನು ಮನಸ್ಸಿಟ್ಟು ಓದಿದ ಕಾರಣ ಉತ್ತಮ ಫಲಿತಾಂಶ ಬಂದಿದೆ. ಈ ಕೋರ್ಸ್‌ ಇಷ್ಟಪಟ್ಟು ಆಯ್ಕೆ ಮಾಡಿಕೊಂಡಿದ್ದೆ. ಪಶು ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ಭವಿಷ್ಯದ ದಿನಗಳಲ್ಲಿ ಸಾಕಷ್ಟು ಬೆಲೆ ಇದೆ’ ಎಂದು ದಕ್ಷೀತ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.