ADVERTISEMENT

ಬೀದರ್‌: ಅಶ್ವಿನಿಗೆ 11, ರಾಮಕುಮಾರ್‌ಗೆ 8 ಚಿನ್ನ

ಆ.31ಕ್ಕೆ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 12:47 IST
Last Updated 29 ಆಗಸ್ಟ್ 2018, 12:47 IST
ಅಶ್ವಿನಿ
ಅಶ್ವಿನಿ   

ಬೀದರ್‌: ಇಲ್ಲಿಯ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಆಗಸ್ಟ್‌ 31 ರಂದು ನಡೆಯಲಿದ್ದು, ಹಾಸನದ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಅಶೋಕ 11 ಹಾಗೂ ಬೀದರ್‌ನ ಪಶು ವೈದ್ಯಕೀಯ ಕಾಲೇಜಿನ ರಾಮಕುಮಾರ್ 8 ಚಿನ್ನದ ಪದಕ ಪಡೆಯಲಿದ್ದಾರೆ.

‘ಘಟಿಕೋತ್ಸವದಲ್ಲಿ 309 ಸ್ನಾತಕ ಪದವೀಧರರು, 109 ಸ್ನಾತಕೋತ್ತರ ಹಾಗೂ 29 ಡಾಕ್ಟರೇಟ್ ಪದವೀಧರರು ಸೇರಿ 447 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುವುದು. ಇವರಲ್ಲಿ 34 ಪದವೀಧರರು 66 ಚಿನ್ನದ ಪದಕಗಳಿಗೆ ಭಾಜನರಾಗಿದ್ದಾರೆ’ ಎಂದು ಕುಲಪತಿ ಎಚ್‌.ಡಿ.ನಾರಾಯಣಸ್ವಾಮಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಸ್ನಾತಕ ಪದವಿಯ ಹೈನು ತಂತ್ರಜ್ಞಾನದಲ್ಲಿ ಬೆಂಗಳೂರಿನ ಹೈನು ವಿಜ್ಞಾನ ಮಹಾವಿದ್ಯಾಲಯದ ಬಸವಪ್ರಭು ಎಚ್.ಎನ್. 5 , ಮಂಗಳೂರಿನ ಮೀನುಗಾರಿಕೆ ಕಾಲೇಜಿನ ಗೋಪಿಕಾ ರಾಧಾಕೃಷ್ಣನ್ 3 , ಬೆಂಗಳೂರಿನ ಪಶು ವೈದ್ಯಕೀಯ ಕಾಲೇಜಿನ ವಾಣಿ ಎ. ಹಾಗೂ ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ ಶ್ರೀಶಾರಾವ್ ಎಸ್. ತಲಾ 2 ಚಿನ್ನದ ಪದಕ ಪಡೆಯಲಿದ್ದಾರೆ’ ಎಂದು ಹೇಳಿದರು.

ADVERTISEMENT

‘ಸ್ನಾತಕೋತ್ತರ ಪದವಿಯಲ್ಲಿ ಬೀದರ್ ಪಶು ವೈದ್ಯಕೀಯ ಕಾಲೇಜಿನ ಸೂಕ್ಷ್ಮಾಣುಜೀವಿ ಶಾಸ್ತ್ರ ವಿಭಾಗದ ರಮೇಶ ಕಂಕನವಾಡಿ ಹಾಗೂ ಪಶು ವೈದ್ಯಕೀಯ ಶಸ್ತ್ರಚಿಕಿತ್ಸೆ ಮತ್ತು ಕ್ಷ-ಕಿರಣ ವಿಭಾಗದ ನಿಖಿತ್ ಎಂ.ಎಸ್ ತಲಾ ಮೂರು ಚಿನ್ನದ ಪದಕ ಸ್ವೀಕರಿಸಲಿದ್ದಾರೆ’ ಎಂದು ಹೇಳಿದರು.

ಘಟಿಕೋತ್ಸವಕ್ಕೆ ಉಪ ರಾಷ್ಟ್ರಪತಿ

ಇಲ್ಲಿಯ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ 10ನೇ ಘಟಿಕೋತ್ಸವದಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ, ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶೆಂಪುರ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.