ADVERTISEMENT

ಜಿಲ್ಲೆಯಾದ್ಯಂತ ವಿಜಯದಶಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2019, 10:37 IST
Last Updated 9 ಅಕ್ಟೋಬರ್ 2019, 10:37 IST
ವಿಜಯದಶಮಿ ನಿಮಿತ್ತ ಬೀದರ್‌ನಲ್ಲಿ ಮಂಗಳವಾರ ಜನ ಬನ್ನಿ ಖರೀದಿಸಿದರು
ವಿಜಯದಶಮಿ ನಿಮಿತ್ತ ಬೀದರ್‌ನಲ್ಲಿ ಮಂಗಳವಾರ ಜನ ಬನ್ನಿ ಖರೀದಿಸಿದರು   

ಬೀದರ್: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ವಿಜಯದಶಮಿ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ನಗರದಲ್ಲಿ ಶ್ರೀ ರಾಮಲೀಲಾ ಉತ್ಸವ ಸಮಿತಿಯು ವಿಜಯದಶಮಿಯನ್ನು ರಾವಣ ಪ್ರತಿಕೃತಿ ದಹನದೊಂದಿಗೆ ವಿಶಿಷ್ಟವಾಗಿ ಆಚರಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಜನ ಸಾಂಪ್ರದಾಯಿಕವಾಗಿ ಆಚರಿಸಿದರು. ದೇವಿ ಮಂದಿರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು.

ಜಿಲ್ಲೆಯ ಮನೆ ಮನೆಗಳಲ್ಲೂ ಹಬ್ಬದ ಸಂತಸ ಮನೆ ಮಾಡಿತ್ತು. ಮಕ್ಕಳು, ಯುವಕರು, ಹಿರಿಯರು ಹೊಸ ಬಟ್ಟೆ ಧರಿಸಿ ಸಂಭ್ರಮಿಸಿದರು.

ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಜನ ಬಾಜಾ ಭಜಂತ್ರಿಯೊಂದಿಗೆ ಸಂಜೆ ಹೊಲಗಳಿಗೆ ತೆರಳಿ ಬನ್ನಿ ತಂದರು. ಬಳಿಕ ಮನೆಯ ಜಗಲಿ ಮೇಲೆ ಸ್ಥಾಪಿಸಿದ ಘಟ್ಟದಲ್ಲಿ ಬೆಳೆದ ಸಸಿಗಳನ್ನು ದೇವಸ್ಥಾನಕ್ಕೆ ಒಯ್ದು ದೇವರಿಗೆ ಸಮರ್ಪಿಸಿದರು.

ನಂತರ ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ಹಿರಿಯರಿಗೆ ಕೊಟ್ಟು ಹಬ್ಬದ ಶುಭ ಕೋರಿದರು. ಮಕ್ಕಳು ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ಹೋಗಿ ಬನ್ನಿ ಕೊಟ್ಟರು. ಅನೇಕರು ಮನೆಗೆ ಬಂದವರಿಗೆ ಹಾಲು, ಸಿಹಿ ಖಾದ್ಯಗಳನ್ನು ನೀಡಿ ಉಪಚರಿಸಿದರು. ಕೋಡಬಳೆ, ಕರ್ಚಿಕಾಯಿ, ಕಡಕುಣಿ ಹಬ್ಬದ ವಿಶೇಷ ಖಾದ್ಯವಾಗಿದ್ದವು.

ಖರೀದಿ ಭರಾಟೆ: ವಿಜಯದಶಮಿ ಹಬ್ಬದ ದಿನ ಕೂಡ ನಗರದ ಬಟ್ಟೆ ಅಂಗಡಿಗಳಲ್ಲಿ ಖರೀದಿ ಭರಾಟೆ ಕಂಡು ಬಂದಿತು. ಈ ಬಾರಿ ನಗರದಲ್ಲಿ ಹಬ್ಬದ ಸಂದರ್ಭದಲ್ಲಿಯೇ ಅನೇಕ ಹೊಸ ಬಟ್ಟೆ ಅಂಗಡಿಗಳು ತೆರೆದುಕೊಂಡಿವೆ. ಗ್ರಾಹಕರನ್ನು ಸೆಳೆಯಲು ಅಂಗಡಿಯವರು ವಿಭಿನ್ನ ಕಸರತ್ತು ನಡೆಸಿದರು.

ಕೆಲ ಅಂಗಡಿಯವರು ಬಟ್ಟೆ ಮೇಲೆ ಶೇ 50 ರವರೆಗೆ ರಿಯಾಯಿತಿ ಪ್ರಕಟಿಸಿದರೆ, ಇನ್ನು ಕೆಲವರು ಖರೀದಿ ಮೇಲೆ ವಿವಿಧ ಕೊಡುಗೆ ನೀಡಿದರು.

‘ಜಿಲ್ಲೆಯಲ್ಲಿ ಬರಗಾಲ ಇದ್ದರೂ ಹಬ್ಬದ ಸಂಭ್ರಮಕ್ಕೆ ಯಾವುದೇ ಕೊರತೆ ಇರಲಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಟ್ಟೆಗಳ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಆದರೆ, ವ್ಯಾಪಾರ ಚೆನ್ನಾಗಿದೆ’ ಎಂದು ಬಟ್ಟೆ ಅಂಗಡಿ ಮಾಲೀಕ ಬಸವರಾಜ ತಿಳಿಸಿದರು.

ಆಯುಧ ಪೂಜೆ: ವಿಜಯದಶಮಿ ಮುನ್ನಾದಿನವಾದ ಸೋಮವಾರ ಜನ ಮನೆಗಳಲ್ಲಿ ಆಯುಧ, ವಾಹನಗಳನ್ನು ತೊಳೆದು, ಹೂವುಗಳಿಂದ ಸಿಂಗರಿಸಿ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.