ADVERTISEMENT

ಬ್ರೈಲ್ ಲಿಪಿ ಮತದಾರ ಗುರುತಿನ ಚೀಟಿ ವಿತರಣೆ

ಕಿರುಚಿತ್ರ ಪ್ರದರ್ಶನ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಪ್ರದಾನ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 14:40 IST
Last Updated 25 ಜನವರಿ 2019, 14:40 IST
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಬಿರೇಂದ್ರಸಿಂಗ್‌ ಠಾಕೂರ್‌, ಕಾಶೀನಾಥ ಪಾಟೀಲ, ಶಿವಕುಮಾರ ಶೀಲವಂತ, ರುದ್ರೇಶ ಗಾಳಿ, ಮಹಾಂತೇಶ ಬೀಳಗಿ, ಗೌತಮ ಅರಳಿ, ಕೀರ್ತಿ ಚಾಲಕ್‌ ಇದ್ದರು
ಬೀದರ್‌ನ ಜಿಲ್ಲಾ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಬಿರೇಂದ್ರಸಿಂಗ್‌ ಠಾಕೂರ್‌, ಕಾಶೀನಾಥ ಪಾಟೀಲ, ಶಿವಕುಮಾರ ಶೀಲವಂತ, ರುದ್ರೇಶ ಗಾಳಿ, ಮಹಾಂತೇಶ ಬೀಳಗಿ, ಗೌತಮ ಅರಳಿ, ಕೀರ್ತಿ ಚಾಲಕ್‌ ಇದ್ದರು   

ಬೀದರ್‌: ಯುವ ಮತದಾರರನ್ನು ಮತದಾನದತ್ತ ಸೆಳೆಯುವ ಭಾಗವಾಗಿ ರಾಷ್ಟ್ರೀಯ ಮತದಾರರ ದಿನವನ್ನು ನಗರದಲ್ಲಿ ಶುಕ್ರವಾರ ಭಿನ್ನವಾಗಿ ಆಚರಿಸಲಾಯಿತು.

ಜಾಥಾ, ಪ್ರತಿಜ್ಞಾ ವಿಧಿ ಬೋಧನೆ, ಗುರುತಿನ ಚೀಟಿ ವಿತರಣೆ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಯುವಕರಿಂದಲೇ ಉದ್ಘಾಟಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಂತೇಶ ಬೀಳಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದರು.

ADVERTISEMENT

ನಂತರ ಮಾತನಾಡಿದ ಅವರು, ‘18 ವರ್ಷ ಪೂರ್ಣಗೊಂಡವರು ಹತ್ತಿರದ ಬಿಎಲ್‍ಒಗಳನ್ನು ಸಂಪರ್ಕಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಬೇಕು. ಮತದಾನವು ದೇಶದ ಏಳಿಗೆಗಾಗಿ ಸಂವಿಧಾನ ನಮಗೆ ನೀಡಿದ ಪ್ರಮುಖ ಅಸ್ತ್ರವಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು’ ಎಂದು ತಿಳಿಸಿದರು.

ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡ ಜಿಲ್ಲೆಯ ಯುವ ಮತದಾರರಿಗೆ ಸಾಂಕೇತಿಕವಾಗಿ ಮತದಾರರ ಗುರುತಿನ ಚೀಟಿ ಹಾಗೂ ಬ್ಯಾಡ್ಜ್‌ಗಳನ್ನು ವಿತರಿಸಲಾಯಿತು.

ರಾಷ್ಟ್ರೀಯ ಮತದಾರರ ದಿನಾಚರಣೆಯ ನಿಮಿತ್ತ ಜಿಲ್ಲಾ ಸ್ವೀಪ್ ಸಮಿತಿಯಿಂದ ಆಯೋಜಿಸಿದ್ದ ನಿಬಂಧ, ರಸಪ್ರಶ್ನೆ ಮತ್ತಿತರ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಅಂಗವಿಕಲರು ತಮ್ಮ ಗುರುತಿನ ಚೀಟಿಯನ್ನು ಗುರುತಿಸುವಂತಾಗಲು ವಿನೂತನವಾಗಿ ತಯಾರಿಸಲಾದ ಬ್ರೈಲ್ ಗುರುತಿನ ಚೀಟಿಗಳನ್ನು ಸಾಂಕೇತಿಕವಾಗಿ ವಿತರಿಸಲಾಯಿತು. ಮತದಾನದ ಮಹತ್ವವನ್ನು ತಿಳಿಸುವ ಕಿರುಚಿತ್ರ ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ವಿದ್ಯಾರ್ಥಿಗಳು ಮತದಾನದ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ಸ್ವೀಪ್ ಸಮಿತಿಯ ಜಿಲ್ಲಾ ಸಂಯೋಜಕ ಡಾ.ಗೌತಮ ಅರಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಉಪ ವಿಭಾಗಾಧಿಕಾರಿ ಶಿವಕುಮಾರ ಶೀಲವಂತ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ, ಬೀದರ್‌ ತಹಶೀಲ್ದಾರ್‌ ಕೀರ್ತಿ ಚಾಲಕ್ ಉಪಸ್ಥಿತರಿದ್ದರು. ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯ ಚನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.