ಕಮಲನಗರ: ತಾಲ್ಲೂಕಿನ ಚಿಮ್ಮೇಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಧನಸಿಂಗನಾಯಕ ತಾಂಡಾದಲ್ಲಿ ಕೊಡ ನೀರಿಗಾಗಿ ನೀರೆಯರು ಪರದಾಟ ನಡೆಸಬೇಕಾದ ಅನಿವಾರ್ಯತೆ ಇದೆ.
ಸುಮಾರು 200ಕ್ಕೂ ಹೆಚ್ಚು ಜನಸಂಖ್ಯೆ ಹಾಗೂ ಒಬ್ಬ ಗ್ರಾ.ಪಂ ಸದಸ್ಯನನ್ನು ಹೊಂದಿರುವ ತಾಂಡಾದಲ್ಲಿ ಜೆಜೆಎಂ ಯೋಜನೆಯಡಿಯಲ್ಲಿ ನಲ್ಲಿಗಳನ್ನು ಅಳವಡಿಸಲಾಗಿದೆ. ರೂಪಲಾನಾಯಕ ತಾಂಡಾದ ತೆರೆದ ಬಾವಿಯಿಂದ ಜೆಜೆಎಂ ನಲ್ಲಿಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ತೆರೆದ ಬಾವಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಮೂರು ದಿವಸಕ್ಕೆ ಒಮ್ಮೆ ನೀರು ಬರುತ್ತಿದೆ. ಅದೂ ಒಂದೆರಡು ಕೊಡ ಮಾತ್ರ ಬರುತ್ತಿದೆ. ‘ಇದು ದಿನಬಳಕೆಗೆ ಸಾಕಾಗುತ್ತಿಲ್ಲ’ ಎಂಬುದು ಮಹಿಳೆಯರ ಗೋಳಾಗಿದೆ.
‘ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದಂತೆ ನೀರಿನ ಸಮಸ್ಯೆ ಕೂಡಾ ಹೆಚ್ಚಳವಾಗುತ್ತಿದೆ. ಹೀಗಾಗಿ ನೀರಿಗಾಗಿ ಅಲೆದಾಟ ನಡೆಸಬೇಕಾದ ಅನಿವಾರ್ಯತೆ ಇದೆ. ತಾಂಡಾದಲ್ಲಿಯ ಸರ್ಕಾರಿ ಶಾಲೆಯ ಆವರಣದಲ್ಲಿರುವ ಕೊಳವೆ ಬಾವಿಯ ನೀರು ಕೂಡಾ ಕಡಿಮೆಯಾಗಿದೆ. ಕೇವಲ ಅರ್ಧ ಗಂಟೆ ನೀರು ಮಾತ್ರ ಬರುತ್ತಿದೆ. ಮನೆಯ ಕೆಲಸವನ್ನೆಲ್ಲ ಬಿಟ್ಟು ಗಂಟೆಗಟ್ಟಲೇ ಬಿಸಿಲಿನಲ್ಲಿ ನಿಂತರೂ ನೀರು ಸಾಕಾಗುತ್ತಿಲ್ಲ. ಕೊಡ ನೀರಿಗಾಗಿ ದಿನಾಲೂ ಜಗಳವಾಗಿಕೊಳ್ಳಬೇಕಾಗುತ್ತಿದೆ’ ಎಂದು ಅಳಲು ತೊಡಿಕೊಂಡಿದ್ದಾರೆ.
‘ತಾಂಡಾದಿಂದ ಕಿಲೋಮೀಟರ್‌ಗಟ್ಟಲೇ ದೂರದಲ್ಲಿರುವ ಹೊಲದಿಂದ ನೀರು ತರಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದ ಚಿಕ್ಕ ಮಕ್ಕಳು, ಮಹಿಳೆಯರು, ವೃದ್ಧರು ಇಲ್ಲಿಂದ ಸುಡು ಬಿಸಿಲಿನಲ್ಲಿ ನೀರು ತರಲು ಹರಸಾಹಸ ಪಡಬೇಕಾಗಿದೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಇತ್ತ ಗಮನ ಹರಿಸಿ ತಾಂಡಾದಲ್ಲಿ ಹೊಸದಾಗಿ ಕೊಳವೆ ಬಾವಿ ಕೊರೆಯಿಸಿ ಶಾಶ್ವತ ನೀರಿನ ಪರಿಹಾರ ಪಡೆಯಬೇಕು’ ಎಂದು ಗ್ರಾಮದ ಲಕ್ಷ್ಮೀಬಾಯಿ ವಾಮನ, ಸರೂಬಾಯಿ ಬಾಬು, ಅನೀತಾ ಸಂತೋಷ, ಗುಣಾಬಾಯಿ ರಾಜಾರಾಮ, ಕಮಲಾಬಾಯಿ ಶಿವಾಜಿ, ಕಲ್ಲುಬಾಯಿ ತಾನಾಜಿ, ಸುನೀತಾ ರವಿ, ಕವಿತಾ ಅರುಣ ಒತ್ತಾಯಿಸಿದ್ದಾರೆ.
ಧನಸಿಂಗ ನಾಯಕ ತಾಂಡಾದಲ್ಲಿ ಸುಮಾರು ಎರಡು ತಿಂಗಳಿಂದ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕೂಡಲೇ ಪಂಚಾಯತಿ ಅಧಿಕಾರಿ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕುಗೋಪಾಲ ಜಾಧವ ಗ್ರಾಮಸ್ಥ
ತಾಂಡಾದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡಲು ಹಾಗೂ ಹೆಚ್ಚಿನ ಸಮಸ್ಯೆ ಇದ್ದಲ್ಲಿ ಟ್ಯಾಂಕರ ವ್ಯವಸ್ಥೆ ಮಾಡಿಸಲು ಪಿಡಿಒ ಅವರಿಗೆ ತಿಳಿಸಿ ಕೂಡಲೇ ನೀರಿನ ಸಮಸ್ಯೆ ಬಗೆಹರಿಸಲಾಗುವುದುಮಾಣಿಕರಾವ ಪಾಟೀಲ್ ತಾ.ಪಂ. ಇಒ
20 ಗ್ರಾಮಗಳಲ್ಲಿ ನೀರಿನ ಸಮಸ್ಯೆ
ತಾಲ್ಲೂಕಿನ 18 ಗ್ರಾಮ ಪಂಚಾಯತಿ ಹಾಗೂ 54 ಗ್ರಾಮಗಳ ಪೈಕಿ 20 ಗ್ರಾಮಗಳಲ್ಲಿ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ. ಈಗಾಗಲೇ ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ 8 ಟ್ಯಾಂಕರ್ ಹಾಗೂ 12 ಖಾಸಗಿ ಕೊಳವೆ ಬಾವಿ ತೆರೆದ ಬಾವಿ ಬಾಡಿಗೆ ರೂಪದಲ್ಲಿ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.