ಬಸವಕಲ್ಯಾಣ: ನಗರದ ತ್ರಿಪುರಾಂತದಲ್ಲಿನ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರದಲ್ಲಿ ಕೊಳಚೆ ನೀರು ಸಂಗ್ರಹ ಆಗುತ್ತಿರುವ ಕಾರಣ ವಿದ್ಯಾರ್ಥಿಗಳು ಸಂಕಟಪಡುತ್ತಿದ್ದಾರೆ. ಚರಂಡಿ ವ್ಯವಸ್ಥೆ ಇಲ್ಲದ್ದರಿಂದ ಪೈಪ್ ಮೂಲಕ ಟ್ಯಾಂಕ್‌ನಲ್ಲಿ ಈ ನೀರು ತುಂಬಿ ಬೇರೆ ಕಡೆ ಸಾಗಿಸುವ ಪರಿಸ್ಥಿತಿ ಇದೆ.
ನಗರದಲ್ಲಿನ ಏಕೈಕ ಪಿಎಂಶ್ರೀ ಶಾಲೆ ಇದಾಗಿದೆ. ಸುತ್ತಲಿನಲ್ಲಿ ದಲಿತರು, ಹಿಂದುಳಿದವರ ಮನೆಗಳಿರುವುದರಿಂದ ಸಹಜವಾಗಿ ಇವರ ಮಕ್ಕಳೇ ಇಲ್ಲಿ ಓದುತ್ತಾರೆ. ಮುಖ್ಯ ರಸ್ತೆಯ ಪಕ್ಕದಲ್ಲಿಯೇ ಹಾಗೂ ಪ್ರಮುಖ ವೃತ್ತದಲ್ಲಿ ಈ ಸ್ಥಳವಿರುವುದರಿಂದ ಇಲ್ಲಿಂದ ಸಾಗುವ ಎಲ್ಲರ ಕಣ್ಣಿಗೂ ಇಲ್ಲಿನ ಅವ್ಯವಸ್ಥೆ ಕಾಣುತ್ತದೆ. ಆದರೂ, ಇದುವರೆಗೆ ಯಾರೂ ಸುಧಾರಣಾ ಕಾರ್ಯಕ್ಕೆ ಪ್ರಯತ್ನಿಸಿಲ್ಲ.
ಶಾಲೆ ಸುತ್ತಲಿನ ಓಣಿಯ ಮನೆ ಬಳಕೆ ನೀರು ಹಾಗೂ ಮಳೆ ನೀರು ಇಲ್ಲಿ ಬಂದು ಸಂಗ್ರಹಗೊಳ್ಳುತ್ತದೆ. ಕೆಲವೊಂದು ಸಲ ಪಾಚಿಗಟ್ಟಿ ದುರ್ವಾಸನೆ ಬೀರುತ್ತದೆ. ಈ ನೀರಿನೊಂದಿಗೆ ಮಳೆ ನೀರು ಕೂಡಿಕೊಂಡಾಗ ರಸ್ತೆ ಕಾಣದೆ ಕೆಲ ಸಲ ಮಕ್ಕಳು ತಗ್ಗಿನಲ್ಲಿ ಬಿದ್ದಿದ್ದಾರೆ. ಹೀಗೆ ಅಪಾಯ ಸಂಭವಿಸಿದ್ದರೂ ಯಾರೂ ಈ ಕಡೆ ಗಮನಹರಿಸಿಲ್ಲ. ಹೆಚ್ಚಾದ ನೀರು ರಸ್ತೆ ಮೇಲೂ ಹರಿಯುತ್ತದೆ. ಹೀಗಾಗಿ ವಾಹನ ಸಂಚಾರಕ್ಕೂ ಅಡೆತಡೆ ಆಗುತ್ತದೆ.
ಪಶ್ಚಿಮಾಭಿಮುಖವಾದ ಶಾಲೆ ಪ್ರವೇಶ ದ್ವಾರದಲ್ಲಿ ದೂರದಿಂದಲೇ ಕಾಣುವಂತೆ ವೃತ್ತಾಕಾರದ ನಾಮಫಲಕ ಅಳವಡಿಸಲಾಗಿದೆ. ಕೊಠಡಿಗಳಿಗೆ ಸುಣ್ಣ–ಬಣ್ಣ ಹಚ್ಚಲಾಗಿದೆ. ಆದರೆ, ಪ್ರವೇಶ ದ್ವಾರದ ಎದುರಲ್ಲಿ ಮೂರು ಅಡಿ ಜಾಗ ಬಿಟ್ಟರೆ ಅದರ ಆಚೆ ಈಚೆ ಮಾತ್ರ ಕಪ್ಪನೆಯ ಕಲ್ಮಷಯುಕ್ತ ನೀರು ಯಾವಾಗಲೂ ಸಂಗ್ರಹಗೊಂಡಿರುತ್ತದೆ. ಇದರಿಂದ ಶಾಲೆ ಅಂದಗೆಡುವ ಜೊತೆಯಲ್ಲಿಯೇ ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಆಗುತ್ತಿದೆ.
ಶಾಲೆ ಎದುರಲ್ಲಿ ಕೊಳವೆಗಳನ್ನು ಅಳವಡಿಸಿ ನೀರು ಮುಂದಕ್ಕೆ ಸಾಗುವಂತೆ ಮಾಡಬೇಕು. ಚರಂಡಿ ನಿರ್ಮಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು, ಪಾಲಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಬಂಧಿಸಿದವರಿಗೆ ಮನವಿಪತ್ರ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ.
Highlights - ತ್ರಿಪುರಾಂತ ಭೀಮನಗರದಲ್ಲಿರುವ ಶಾಲೆ ಮುಖ್ಯ ರಸ್ತೆಗೆ ಹತ್ತಿಕೊಂಡಿಯೇ ಇದೆ ಪೈಪ್‌ನಿಂದ ನೀರು ತೆಗೆಯುವ ಪರಿಸ್ಥಿತಿ
Quote - ನಾನೂ ಈ ಬಗ್ಗೆ ಸಂಬಂಧಿತರೊಂದಿಗೆ ಕೆಲವು ಸಲ ಚರ್ಚಿಸಿದ್ದೇನೆ. ಶಾಲೆಯ ಮುಖ್ಯಶಿಕ್ಷಕರಿಂದಲೂ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಕ್ರಮ ತೆಗೆದುಕೊಳ್ಳಲಾಗಿಲ್ಲ ಸಿದ್ದವೀರಯ್ಯ ರುದನೂರು ಕ್ಷೇತ್ರ ಶಿಕ್ಷಣಾಧಿಕಾರಿ
Quote - ಶಾಲೆ ಎದುರು ಇಂಥ ಪರಿಸ್ಥಿತಿ ಇದ್ದರೂ ಸಂಬಂಧಿತರು ನೋಡಿಯೂ ನೋಡದಂತಿರುವುದು ಸರಿಯಲ್ಲ. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸಲಾಗುವುದು ಅಶೋಕ ಢಗಳೆ ಜಿಲ್ಲಾಧ್ಯಕ್ಷ ದಲಿತ ಜಾಗೃತಿ ವೇದಿಕೆ
Quote - ಅನೇಕ ವರ್ಷಗಳಿಂದ ಇಲ್ಲಿ ನೀರು ಸಂಗ್ರಹಗೊಳ್ಳುತ್ತಿದ್ದರೂ ಲೋಕೋಪಯೋಗಿ ಇಲಾಖೆ ಹಾಗೂ ನಗರಸಭೆಯವರು ಕಣ್ಣುಮುಚ್ಚಿ ಕುಳಿತಿರುವುದೇಕೆ ತಿಳಿಯುತ್ತಿಲ್ಲ ಸಂಜೀವಕುಮಾರ ಖೇಲೆ ಸಾಮಾಜಿಕ ಕಾರ್ಯಕರ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.