ADVERTISEMENT

ಬೀದರ್‌: ಏರುಮುಖದತ್ತ ಎಚ್‌ಐವಿ ಪೀಡಿತರ ಸಂಖ್ಯೆ

ಬೀದರ್‌, ಹುಮನಾಬಾದ್‌, ಬಸವಕಲ್ಯಾಣದಲ್ಲಿ ಹೆಚ್ಚು ಪ್ರಕರಣ ಬೆಳಕಿಗೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಡಿಸೆಂಬರ್ 2024, 5:13 IST
Last Updated 1 ಡಿಸೆಂಬರ್ 2024, 5:13 IST
<div class="paragraphs"><p>ಎಚ್‌ಐವಿ&nbsp;</p></div>

ಎಚ್‌ಐವಿ 

   

ಬೀದರ್‌: ಸತತ ಜನಜಾಗೃತಿ ಕಾರ್ಯಕ್ರಮಗಳ ನಡುವೆಯೂ ಬೀದರ್‌ ಜಿಲ್ಲೆಯಲ್ಲಿ ಎಚ್‌ಐವಿ ಪೀಡಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಲೇ ಇದೆ.

ಅದರಲ್ಲೂ ಜಿಲ್ಲೆಯ ಜಿಲ್ಲಾ ಕೇಂದ್ರ ಬೀದರ್‌, ಹುಮನಾಬಾದ್‌ ಹಾಗೂ ಬಸವಕಲ್ಯಾಣದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಬೀದರ್‌ ಜಿಲ್ಲಾ ಕೇಂದ್ರ ಸ್ಥಾನ ಇರುವುದರಿಂದ ಸಹಜವಾಗಿಯೇ ಹೆಚ್ಚಿನ ಚಟುವಟಿಕೆಗಳು ನಡೆಯುತ್ತಿರುತ್ತವೆ. ಜನ ಬಂದು ಹೋಗುವುದು ಇದ್ದೇ ಇದೆ. ಇನ್ನು, ಹುಮನಾಬಾದ್‌ ಹಾಗೂ ಬಸವಕಲ್ಯಾಣ ನಗರಗಳು, ಮುಂಬೈ–ಹೈದರಾಬಾದ್‌ ರಾಷ್ಟ್ರೀಯ ಹೆದ್ದಾರಿ ಮೇಲೆ ಇರುವುದರಿಂದ ಪ್ರಕರಣಗಳು ಹೆಚ್ಚಾಗಲು ಪ್ರಮುಖ ಕಾರಣ ಎನ್ನುತ್ತಾರೆ ಅಧಿಕಾರಿಗಳು.

ADVERTISEMENT

ಬಸವಕಲ್ಯಾಣದಲ್ಲಿ ಲಾರಿ ಉದ್ಯಮ ದೊಡ್ಡ ಪ್ರಮಾಣದಲ್ಲಿದೆ. ದೇಶದ ವಿವಿಧ ಭಾಗಗಳಿಂದ ಸರಕು ಸಾಗಣೆ ಲಾರಿಗಳು ಇಲ್ಲಿಗೆ ಬಂದು ಹೋಗುತ್ತವೆ. ಇನ್ನು, ಲಾರಿಗಳ ‘ಬಾಡಿ’ ತಯಾರಿಸುವ ಕೆಲಸವೂ ಇಲ್ಲಿ ನಡೆಯುತ್ತದೆ. ಹೀಗಾಗಿಯೇ ಹೆಚ್ಚಿನ ಚಲನವಲನ ಇದೆ.

ಹೆಚ್ಚು ಪರೀಕ್ಷೆ, ಹೆಚ್ಚು ಪ್ರಕರಣ: 2020–21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 35,730 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 2023–24ನೇ ಸಾಲಿನಲ್ಲಿ 96,737, 2024ನೇ ಸಾಲಿನ ಅಕ್ಟೋಬರ್‌ವರೆಗೆ 61,385 ಜನರ ಪರೀಕ್ಷೆ ಮಾಡಲಾಗಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪರೀಕ್ಷೆ ನಡೆಸುತ್ತಿರುವುದರಿಂದ ಎಚ್‌ಐವಿ ಪೀಡಿತರನ್ನು ಗುರುತಿಸಿ ಅವರಿಗೆ ಉಪಾಚಾರ ಮಾಡಲಾಗುತ್ತಿದೆ.

ಇನ್ನು 2019ರಿಂದ 2024ನೇ ಸಾಲಿನ ಅಕ್ಟೋಬರ್‌ವರೆಗೆ ಬೀದರ್‌ ತಾಲ್ಲೂಕಿನಲ್ಲಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ ಬೀದರ್‌ನಲ್ಲಿ 930 ಎಚ್‌ಐವಿ ಪೀಡಿತರನ್ನು ಗುರುತಿಸಲಾಗಿದೆ. ಹುಮನಾಬಾದ್‌ ಹಾಗೂ ಬಸವಕಲ್ಯಾಣ ನಂತರದ ಸ್ಥಾನದಲ್ಲಿವೆ. ಹುಮನಾಬಾದ್‌ನಲ್ಲಿ 211 ಹಾಗೂ ಕಲ್ಯಾಣದಲ್ಲಿ 205 ಪ್ರಕರಣಗಳು ವರದಿಯಾಗಿವೆ. ಭಾಲ್ಕಿಯಲ್ಲಿ ಅತಿ ಕಡಿಮೆ 91 ಪ್ರಕರಣಗಳು ಬೆಳಕಿಗೆ ಬಂದಿವೆ. 2002ರಿಂದ 2024ರಲ್ಲಿ ಒಟ್ಟು 480 ಮಕ್ಕಳನ್ನು ಗುರುತಿಸಿ, ಅವರಿಗೆ ಚಿಕಿತ್ಸೆ ನೀಡಿದ್ದರಿಂದ 449 ಮಕ್ಕಳು ಗುಣಮುಖರಾಗಿದ್ದಾರೆ. ಇನ್ನು, ಕಳೆದ ಐದು ವರ್ಷಗಳಲ್ಲಿ 71 ಗರ್ಭಿಣಿಯರಿಗೂ ಎಚ್‌ಐವಿ ಸೋಂಕು ತಗುಲಿದ್ದು, ಅವರಿಗೆ ವಿಶೇಷ ಉಪಚಾರ ಮಾಡಲಾಗುತ್ತಿದೆ. ಸೋಂಕು ಅವರಿಗೆ ಹುಟ್ಟುವ ಮಗುವಿಗೆ ಹರಡದಿರಲಿ ಎನ್ನುವುದು ಇದರ ಹಿಂದಿನ ಉದ್ದೇಶ.

‘ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಹೆಚ್ಚಿನ ಎಚ್‌ಐವಿ ಪ್ರಕರಣಗಳಲ್ಲಿ ಸ್ಥಳೀಯರಿಗಿಂತ ಹೊರಗಿನವರು ಹೆಚ್ಚಾಗಿರುವುದು ಕಂಡು ಬಂದಿದೆ. ಅದರಲ್ಲೂ ವಲಸೆ ಕೂಲಿ ಕಾರ್ಮಿಕರು, ಚಾಲಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅನಿಲ್‌ಕುಮಾರ್‌ ಚಿಂತಾಮಣಿ.

‘ಎಚ್‌ಐವಿ ಏಡ್ಸ್‌ ಕುರಿತು ಸಾಕಷ್ಟು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜೊತೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದ ಸಹಜವಾಗಿಯೇ ಪ್ರಕರಣಗಳು ವರದಿಯಾಗುತ್ತಿವೆ. ಎಚ್‌ಐವಿ ಪೀಡಿತರನ್ನು ಗುರುತಿಸಿ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದೆ ಹೇಳಿಕೊಳ್ಳಲು ಹೆದರುತ್ತಿದ್ದರು. ಈಗ ಅನೇಕರು ಮುಂದೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

‘ಎಚ್‌ಐವಿ ಪೀಡಿತರಿಗೆಂದೇ ಬ್ರಿಮ್ಸ್‌ನಲ್ಲಿ ಎಆರ್‌ಟಿ ಕೇಂದ್ರವಿದ್ದು, ಉಚಿತ ಚಿಕಿತ್ಸಾ ಸೌಲಭ್ಯ ಇದೆ. ಎಂಟು ಲಿಂಕ್‌ ಎಆರ್‌ಟಿ ಕೇಂದ್ರಗಳೂ ಇವೆ. ಮಹಿಳಾ ಲೈಂಗಿಕ ಕಾರ್ಯಕರ್ತೆಯರು, ಲೈಂಗಿಕ ಅಲ್ಪಸಂಖ್ಯಾತರ ನೆರವಿನೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ. ವಲಸೆ ಕಾರ್ಮಿಕರು, ಚಾಲಕರು ಬಂದು ಹೋಗುವ ಸ್ಥಳಗಳಲ್ಲಿ ಕಾರ್ಯಕ್ರಮ ಹಾಗೂ ಪರೀಕ್ಷೆ ನಡೆಸಲಾಗುತ್ತಿದೆ’ ಎಂದು ಡಾ. ಅನಿಲ್‌ಕುಮಾರ್ ಚಿಂತಾಮಣಿ ತಿಳಿಸಿದ್ದಾರೆ.

ಡಿ.3ಕ್ಕೆ ಕಾರ್ಯಕ್ರಮ

ಡಿಸೆಂಬರ್‌ 1ರ ವಿಶ್ವ ಏಡ್ಸ್‌ ದಿನಾಚರಣೆ ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ಡಿ. 3ರಂದು ಬೆಳಿಗ್ಗೆ 10.30ಕ್ಕೆ ಬೀದರ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಅನಿಲ್‌ಕುಮಾರ್‌ ಚಿಂತಾಮಣಿ ತಿಳಿಸಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ ಯಾವುದೇ ತರಹದ ರೆಡ್‌ ಲೈಟ್‌ ಏರಿಯಾಗಳಿಲ್ಲ. ವಲಸೆ ಕಾರ್ಮಿಕರಲ್ಲೇ ಎಚ್‌ಐವಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ.
-ಡಾ. ಅನಿಲ್‌ಕುಮಾರ್‌ ಚಿಂತಾಮಣಿ ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.