ADVERTISEMENT

ರೇಷ್ಮೆ ಕೃಷಿ ಒಲವು ಬಿಡದ ಶೇಖರ್ ಮೂರ್ತಿ

ಯಡಿಯೂರು ಗ್ರಾಮದಲ್ಲಿ 20 ವರ್ಷಗಳಿಂದ ಕೃಷಿ, ಪ್ರತಿ ತಿಂಗಳು ಹಣ ಸಂಪಾದನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 16:33 IST
Last Updated 25 ಡಿಸೆಂಬರ್ 2019, 16:33 IST
ಹಿಪ್ಪು ನೇರಳೆ ತೋಟದಲ್ಲಿ ಕೃಷಿಕ ಶೇಖರ್ ಮೂರ್ತಿ
ಹಿಪ್ಪು ನೇರಳೆ ತೋಟದಲ್ಲಿ ಕೃಷಿಕ ಶೇಖರ್ ಮೂರ್ತಿ   

ಸಂತೇಮರಹಳ್ಳಿ: ಎರಡು ದಶಕಗಳ ಹಿಂದಿನವರೆಗೂ ಜಿಲ್ಲೆಯಲ್ಲಿ ಬಹುತೇಕ ಮನೆಗಳ ಜೀವನಾಡಿಯಾಗಿದ್ದ ರೇಷ್ಮೆ ಕೃಷಿ ಇಂದು ಅವಸಾನದ ಅಂಚಿಗೆ ತಲುಪಿದೆ. ಆದರೆ, ಇಂದಿಗೂ ಹಿಪ್ಪು ನೇರಳೆ– ರೇಷ್ಮೆ ಕೃಷಿಯನ್ನು ಜಿಲ್ಲೆಯಲ್ಲಿ ಮುಂದುವರಿಸಿಕೊಂಡು ಹೋಗುತ್ತಿರುವ ಬೆರಳೆಣಿಕೆ ರೈತರಲ್ಲಿ ಇಲ್ಲಿಗೆ ಸಮೀಪದ ಯಡಿಯೂರು ಗ್ರಾಮದ ಶೇಖರ್‌ ಮೂರ್ತಿ ಪ್ರಮುಖರು.

ಇವರು ಬಿಎಸ್ಸಿ ಪದವಿಧರರು. ಪದವಿ ಮುಗಿದ ನಂತರ ದೇವನೂರು ಗ್ರಾಮದಲ್ಲಿ ಸಹಕಾರಿ ಸಂಘವೊಂದರಲ್ಲಿ ನೌಕರಿಗೆ ಸೇರಿದರು. ಕೃಷಿ ಬಗ್ಗೆ ವಿಶೇಷ ಒಲವಿದ್ದ ಮೂರ್ತಿ ಅವರಿಗೆ ಯಡಿಯೂರು ಗ್ರಾಮದಲ್ಲಿದ್ದ ‌10 ಎಕರೆ ಜಮೀನಿನಲ್ಲಿ ಏನಾದರೂ ಮಾಡಬೇಕು ಎಂಬ ಹಂಬಲ ಕಾಡುತ್ತಿತ್ತು. ನೌಕರಿಗೆ ರಾಜೀನಾಮೆ ಸಲ್ಲಿಸಿದ ಅವರು, ನೇರವಾಗಿ ವ್ಯವಸಾಯಕ್ಕೆ ಧುಮುಕಿದರು. ಆಯ್ದುಕೊಂಡದ್ದು ರೇಷ್ಮೆ ಕೃಷಿ. ಇಂದಿಗೂ ಅದನ್ನು ಮುಂದುವರಿಸಿದ್ದಾರೆ.

10 ಎಕರೆ ಜಮೀನಿನಲ್ಲಿ 5 ಎಕರೆ ವಿಸ್ತೀರ್ಣದಲ್ಲಿ ಹಿಪ್ಪುನೇರಳೆ ಹಾಕಿದ್ದಾರೆ. ಜಮೀನಿನಲ್ಲಿ ಕೊಳವೆಬಾವಿ ಕೊರೆಸಿದ್ದಾರೆ. ಕೃಷಿ ಹೊಂಡ ನಿರ್ಮಿಸಿ, ಹನಿ ನೀರಾವರಿ ಮೂಲಕ ಹಿಪ್ಪುನೇರಳೆ ಗಿಡಗಳಿಗೆ ನೀರು ಹಾಯಿಸುತ್ತಿದ್ದಾರೆ. ಪ್ರತಿ ತಿಂಗಳು ಹಿಪ್ಪುನೇರಳೆ ಸೊಪ್ಪು ಬರುವುದರಿಂದ ತಪ್ಪದೇ ರೇಷ್ಮೆಕೃಷಿ ನಡೆಸುತ್ತಿದ್ದಾರೆ.

ADVERTISEMENT

ಜಮೀನಿನಲ್ಲಿ 45X35 ವಿಸ್ತೀರ್ಣದಲ್ಲಿ ರೇಷ್ಮೆಹುಳು ಸಾಕಾಣಿಕೆಗೆ ಮನೆ ನಿರ್ಮಿಸಿಕೊಂಡಿದ್ದಾರೆ. ಇದಕ್ಕೆ ಬೇಕಾದ ಮರದ ಮೇಜು, ಪರದೆ ಹಾಗೂ ಪ್ಲಾಸ್ಟಿಕ್ ಚಂದ್ರಿಕೆಗಳನ್ನು ತಯಾರು ಮಾಡಿಕೊಂಡಿದ್ದಾರೆ. ತಿ.ನರಸೀಪುರ ತಾಲ್ಲೂಕಿನ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಮೊಟ್ಟೆಯಿಂದ ಹೊರಬಂದಿರುವ 200 ರೇಷ್ಮೆಹುಳು ಮರಿಗಳನ್ನು ₹ 4,400 ನೀಡಿ 2ನೇ ಹಂತದ ನಂತರ ತಂದು ಸಾಕಾಣಿಕೆ ಮಾಡುತ್ತಾರೆ.

ಪ್ರತಿದಿನ ಸೊಪ್ಪು ಹಾಕಿ 16ನೇ ದಿನಕ್ಕೆ ಹುಳು ಹಣ್ಣಾಗುತ್ತವೆ. ರೇಷ್ಮೆ ಹುಳುಗಳನ್ನು ಸಾಕುವ ಮರದ ಮೇಜಿನ ಮೇಲೆ ಪ್ಲಾಸ್ಟಿಕ್ ಚಂದ್ರಿಕೆ ಇಟ್ಟು 4ನೇ ದಿನದ ನಂತರ ನೋಡಿದಾಗ ಹುಳುಗಳು ರೇಷ್ಮೆಗೂಡು ಕಟ್ಟಿರುತ್ತವೆ. ಈ ಗೂಡುಗಳನ್ನು ಬಿಡಿಸಿಕೊಂಡು ರಾಮನಗರ ಜಿಲ್ಲೆಯಲ್ಲಿರುವ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಪ್ರತಿ ಕೆಜಿಗೆ ₹ 400ರಿಂದ ₹ 500ರ ವರೆಗೆ, 150 ಕೆಜಿ ರೇಷ್ಮೆಗೂಡುಗಳನ್ನು ಮಾರಾಟ ಮಾಡಿ ಬರುತ್ತಾರೆ.

‘ಕೂಲಿ ಆಳು, ಇತರ ವೆಚ್ಚ ಸೇರಿ ₹ 10 ಸಾವಿರದವರೆಗೆ ಖರ್ಚಾಗುತ್ತದೆ. ಪ್ರತಿ ತಿಂಗಳು ಗೂಡು ಮಾರಾಟ ಮಾಡಿದಾಗ ಖರ್ಚು ಕಳೆದು ₹ 40 ಸಾವಿರದಿಂದ ₹ 50 ಸಾವಿರದವರೆಗೆ ಉಳಿತಾಯವಾಗುತ್ತದೆ. ವರ್ಷದಲ್ಲಿ 10 ಬೆಳೆಗಳನ್ನು ಬೆಳೆಯುತ್ತೇನೆ’ ಎಂದು ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೇಷ್ಮೆ ಕೃಷಿಯಿಂದ ಉತ್ತಮ ಬದುಕು ಕಟ್ಟಿಕೊಂಡಿದ್ದೇನೆ. ಪ್ರತಿ ತಿಂಗಳು ಹಣ ಕಾಣುವ ಈ ಕಸುಬನ್ನು ನನ್ನ ನಂತರವೂ ಮುಂದುವರಿಸಿಕೊಂಡು ಹೋಗುವಂತೆ ಮಕ್ಕಳಿಗೆ ಹೇಳುತ್ತಲೇ ಇರುತ್ತೇನೆ’ ಎಂದು ಅವರು ಹೇಳಿದರು.

ರೇಷ್ಮೆ ಹುಳು ಸಾಕಣೆಗೆ ಮಾದರಿ

ರೇಷ್ಮೆ ಕೃಷಿ ಅಧಿಕಾರಿಗಳು ಆಗಾಗ್ಗೆ ಶೇಖರ್ ಅವರ ರೇಷ್ಮೆ ಹುಳು ಬೆಳೆಯುವ ಕೇಂದ್ರಕ್ಕೆ ಭೇಟಿ ನೀಡಿ ಆಧುನಿಕತೆಗೆ ತಕ್ಕಂತೆ ರೇಷ್ಮೆಗೂಡು ಬೆಳೆಯಲು ಮಾಹಿತಿ ನೀಡುತ್ತಾರೆ. ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಂದಲೂ ರೇಷ್ಮೆ ತರಬೇತಿ ವಿದ್ಯಾರ್ಥಿಗಳು ಇಲ್ಲಿಗೆ ಭೇಟಿ ನೀಡಿ ಪ್ರಾಯೋಗಿಕವಾಗಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

ಜಿಲ್ಲೆಯಲ್ಲಿಯೇ ಮಾದರಿಯಾಗಿ ರೇಷ್ಮೆ ಹುಳು ಸಾಕಾಣಿಕೆ ಮಾಡುವ ಅವರ ರೇಷ್ಮೆಕೃಷಿಯನ್ನು ಮೆಚ್ಚಿ ಜಿಲ್ಲಾಡಳಿತ ಕಳೆದ ವರ್ಷ ಚಾಮರಾಜನಗರದಲ್ಲಿ ನಡೆದ ರೈತ ದಿನಾಚರಣೆಯಲ್ಲಿ ಅವರನ್ನು ಸನ್ಮಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.