
ಚಾಮರಾಜನಗರ: ಜಿಲ್ಲೆಯಾದ್ಯಂತ ಶನಿವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಥಳೀಯ ಆಡಳಿತ, ಸರ್ಕಾರಿ ಕಚೇರಿ, ಸಂಘ ಸಂಸ್ಥೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅಂಬೇಡ್ಕರ್ ಸ್ಮರಣೆ ಕಾರ್ಯಕ್ರಮಗಳು ನಡೆದವು.
ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಅಂಬೇಡ್ಕರ್ ರವರ 69ನೇ ಪರಿನಿರ್ವಾಣ ದಿನ ಕಾರ್ಯಕ್ರಮ ನಡೆಯಿತು. ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಸೇರಿದಂತೆ ಹಲವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ನಂತರ ಜೆ.ಹೆಚ್.ಪಟೇಲ್ ಸಭಾಂಗಣದಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೊಂಬತ್ತಿ ಬೆಳಗಿದರು. ಬಳಿಕ ಬುದ್ಧ ವಂದನೆ ಸಲ್ಲಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ತಹಶೀಲ್ದಾರ್ ಗಿರಿಜಾ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮುನಿರಾಜು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.
ಅಂಬೇಡ್ಕರ್ ಕೊಡುಗೆ ಅಪಾರ: ಚಾಮರಾಜನಗರ ತಾಲ್ಲೂಕಿನ ಯಡಬೆಟ್ಟದಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೋಧನಾ ಆಸ್ಪತ್ರೆಯಲ್ಲಿ ಸಿಮ್ಸ್ ಹಾಗೂ ಜಿಲ್ಲಾ ಆಸ್ಪತ್ರೆ ವತಿಯಿಂದ ಅಂಬೇಡ್ಕರ್ ಪರಿನಿರ್ವಾಣ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿಮ್ಸ್ ಡೀನ್ ಹಾಗೂ ನಿರ್ದೇಶಕ ಡಾ.ಹೆಚ್.ಜಿ ಮಂಜುನಾಥ್ ಮಾತನಾಡಿ ಶಿಕ್ಷಣ, ಸಂಘಟನೆ, ಹೋರಾಟದ ಮಹತ್ವ ತಿಳಿಸಿದ ಅಂಬೇಡ್ಕರ್ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಪೂರಕವಾದ ಸಂವಿಧಾನ ರಚಿಸಿ ನೀಡಿದ್ದಾರೆ. ಅಂಬೇಡ್ಕರ್ ವ್ಯಕ್ತಿತ್ವ ವಿಶ್ವಕ್ಕೆ ಮಾದರಿಯಾಗಿದ್ದು ಸದಾ ಅವರ ಸ್ಮರಣೆ ಅಗತ್ಯ ಎಂದರು.
ಕೀಲು ಮತ್ತು ಮೂಳೆ ರೋಗ ತಜ್ಞ ಡಾ.ಮಾರುತಿ, ಡಾ.ಯೋಗೇಶ್, ಡಾ.ಎಜಾಜುಲ್ಲಾ ಖಾನ್, ಡಾ.ದೇವೇಂದ್ರ, ಡಾ.ಶಿವಸ್ವಾಮಿ, ನರ್ಸಿಂಗ್ ಅಧೀಕ್ಷಕಿ ಜಮುನಾ, ಕೃಷ್ಣಮೂರ್ತಿ, ಮಹೇಶ್, ಶ್ರೀನಿವಾಸ್, ಪರಶಿವಮೂರ್ತಿ, ಸುನೀಲ್, ಪ್ರಶಾಂತ್, ಹೇಮಂತ್ ಸೇರಿದಂತೆ ಹಲವರು ಇದ್ದರು.
ಅಂಬೇಡ್ಕರ್ ಚಿಂತನೆ ಚಿರಸ್ಮರಣೀಯ:
ಚಾಮರಾಜನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ನ್ಯಾಯಾಧೀಶೆ ಪ್ರಭಾವತಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಬಳಿಕ ಮಾತನಾಡಿ, ಬೌದ್ಧ ಧರ್ಮದಲ್ಲಿ 'ಪರಿನಿರ್ವಾಣ' ಎಂದರೆ ತೀರಿಹೋದ ನಂತರ ನಿರ್ವಾಣವಾಗುವುದು ಎಂಬ ಅರ್ಥವಿದೆ. ಬಾಬಾ ಸಾಹೇಬರು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರಿಂದ ಅವರ ಪರಿನಿರ್ವಾಣ ದಿನ ಆಚರಿಸಲಾಗುತ್ತದೆ. ವಿಶ್ವಜ್ಞಾನಿ ಅಂಬೇಡ್ಕರ್ ಜ್ಞಾನ ಸಂಪತ್ತಿನಿಂದ ವಿಶ್ವವೇ ಗುರುತಿಸುವಂತಹ ವ್ಯಕ್ತಿಯಾಗಿ ಬೆಳೆದಿದ್ದರು ಎಂದರು.
ಜಿಲ್ಲಾ ವಕೀಲರ ಸಂಘದ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ಮಾತನಾಡಿ, ವಿಶ್ಬದಲ್ಲಿ ಎಲ್ಲೆಡೆ ಮಾನ್ಯಗೊಳ್ಳುವ ವ್ಯಕ್ತಿಯಾಗಿರುವ ಅಂಬೇಡ್ಕರ್ ಅವರ ತತ್ವ ಆರ್ದಶವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಕೀಲರು ಅಂಬೇಡ್ಕರ್ ಭಾವಚಿತ್ರದ ಮುಂಭಾಗ ಮೊಂಬತ್ತಿ ಹಚ್ಚಿ, ಪುಷ್ಪನಮನ ಸಲ್ಲಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಈಶ್ವರ್, ಕೃಷ್ಣ, ಸಿ.ಡಿ.ಪ್ರಕಾಶ್, ಆರ್.ಸುನೀಲ್, ಸ್ಮಿತಾ ನಾಗಲಾಪುರ, ಪ್ರತಿಭಾ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮರಿಯಾಲದಹುಂಡಿ ಶಿವರಾಮ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.