ADVERTISEMENT

ಎಸ್‌ಟಿಗೆ ಸೇರ್ಪಡೆ: ಬೆಟ್ಟ ಕುರುಬರ ಸಂತಸ

ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮೂರು ಹಾಡಿಗಳಲ್ಲಿ 90 ಕುಟುಂಬಗಳ ವಾಸ

ಸೂರ್ಯನಾರಾಯಣ ವಿ
Published 15 ಸೆಪ್ಟೆಂಬರ್ 2022, 22:15 IST
Last Updated 15 ಸೆಪ್ಟೆಂಬರ್ 2022, 22:15 IST
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿರುವ ಬೆಟ್ಟ ಕುರುಬರ ಕಾಲೊನಿ
ಗುಂಡ್ಲುಪೇಟೆ ತಾಲ್ಲೂಕಿನ ಮೇಲುಕಾಮನಹಳ್ಳಿಯಲ್ಲಿರುವ ಬೆಟ್ಟ ಕುರುಬರ ಕಾಲೊನಿ   

ಚಾಮರಾಜನಗರ: ಬೆಟ್ಟ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದಕ್ಕೆ ಜಿಲ್ಲೆಯ ಬುಡಕಟ್ಟು ಸಮುದಾಯದವರು ಅದರಲ್ಲೂ ವಿಶೇಷವಾಗಿ ಬೆಟ್ಟ ಕುರುಬರು ಸಂತಸ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ, ಕೊಡಗು ಹಾಗೂ ಮೈಸೂರು ಜಿಲ್ಲೆಗಳಕಾಡಂಚಿನ ಪ್ರದೇಶಗಳಲ್ಲಿ ವಾಸವಿರುವ ಬೆಟ್ಟ ಕುರುಬ ಸಮುದಾಯದ ಜನರನ್ನು ಇದುವರೆಗೆ, ಜಾತಿ ಪ್ರಮಾಣ ಪತ್ರದಲ್ಲಿ ‘ಕಾಡು ಕುರುಬ’ ಎಂದು ಉಲ್ಲೇಖಿಸಲಾಗಿತ್ತು.

ಪರಿಶಿಷ್ಟ ಪಂಗಡಗಳಿಗೆ ಸೇರಿರುವ ಜಾತಿಗಳ ಪಟ್ಟಿಗೆ ‘ಬೆಟ್ಟ ಕುರುಬ’ ಜಾತಿಯನ್ನು ಸೇರ್ಪಡೆಗೊಳಿಸಬೇಕು ಎಂದು ಮೂರು ದಶಕಗಳಿಂದ ಸಮುದಾಯದವರು ಹೋರಾಟ ಮಾಡಿಕೊಂಡು ಬಂದಿದ್ದರು.

ADVERTISEMENT

ಜಿಲ್ಲೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮಾತ್ರ ಬೆಟ್ಟ ಕುರುಬರು ವಾಸವಿದ್ದಾರೆ. ಬಂಡೀಪುರ ಅರಣ್ಯದಲ್ಲಿದ್ದ ಇವರನ್ನು ಮೂರ್ನಾಲ್ಕು ದಶಕಗಳ ಹಿಂದೆ ಒಕ್ಕಲೆಬ್ಬಿಸಲಾಗಿತ್ತು. ಕಾಡಂಚಿನ ‍ಪ್ರದೇಶದಲ್ಲಿ ಕಾಲೊನಿಗಳನ್ನು ನಿರ್ಮಿಸಿಅವರಿಗೆ ಪುನರ್ವಸತಿ ಕಲ್ಪಿಸಲಾಗಿತ್ತು.

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಮೂರು ಕಡೆ ಅವರ ಕಾಲೊನಿಗಳಿವೆ. 90 ಕುಟುಂಬಗಳು ವಾಸ ಇವೆ. ಕಾರೆಮಾಳ ಹಾಡಿಯಲ್ಲಿ 15, ಮೇಲುಕಾಮನಹಳ್ಳಿ ಕಾಲೊನಿಯಲ್ಲಿ 40 ಹಾಗೂ ಮದ್ದೂರು ಕಾಲೊನಿಯಲ್ಲಿ 37 ಕುಟುಂಬಗಳು ಇವೆ. 400ರಷ್ಟು ಜನಸಂಖ್ಯೆ ಇದೆ.

‘ನಮ್ಮ ತಾತಂದಿರ ಕಾಲದಲ್ಲಿ ಜಾತಿ ಪ್ರಮಾಣ ಪತ್ರದಲ್ಲಿ ಬೆಟ್ಟ ಕುರುಬ ಎಂದೇ ಬರೆಯಲಾಗುತ್ತಿತ್ತು. ನಂತರ ಈ ಪದವನ್ನು ತೆಗೆದು ಹಾಕಲಾಯಿತು. ಕಾಡು ಕುರುಬ ಎಂದು ಉಲ್ಲೇಖಿಸಲಾಗುತ್ತಿತ್ತು. ಇದರಿಂದ ನಮ್ಮ ಮೂಲ ಗುರುತು ಹೋಗಿತ್ತು. ಬೆಟ್ಟ ಕುರುಬ ಎಂದೇ ಜಾತಿ ದಾಖಲಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೆವು. ರಾಜ್ಯ ಸರ್ಕಾರ ಮಾಡಿರುವ ಶಿಫಾರಸಿಗೆ ಕೇಂದ್ರ ಸರ್ಕಾರ ಒಪ್ಪಿರುವುದರಿಂದ ಖುಷಿಯಾಗಿದೆ’ ಎಂದು ಬೆಟ್ಟ ಕುರುಬ ಸಮುದಾಯದ ಮುಖಂಡ, ಮೇಲುಕಾಮನಹಳ್ಳಿ ಕಾಲೊನಿಯ ಮಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾವು ಕಾಡಿನ ಮೂಲ ನಿವಾಸಿಗಳು. ನಮ್ಮ ಹಾಗೂ ಕಾಡು ಕುರುಬ ಸಂಸ್ಕೃತಿ, ಜೀವನ ಶೈಲಿಗಳು ಬೇರೆ ಬೇರೆಯೇ. ಹಾಗಿದ್ದರೂ ನಮ್ಮನ್ನು ಸರ್ಕಾರಿ ದಾಖಲೆಗಳಲ್ಲಿ ಕಾಡು ಕುರುಬ ಎಂದು ಗುರುತಿಸಲಾಗುತ್ತಿತ್ತು. ಪರಿಶಿಷ್ಟ ವರ್ಗಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ, ಬುಡಕಟ್ಟು ಸಂಘಟನೆಗಳು, ನಮ್ಮ ಸಮುದಾಯದ ಸಂಘಟನೆ ಸರ್ಕಾರಕ್ಕೆ ಹಲವು ವರ್ಷಗಳಿಂದ ಒತ್ತಾಯ ಮಾಡುತ್ತಲೇ ಬಂದಿದ್ದವು. ಈಗ ಕೇಂದ್ರ ಸರ್ಕಾರ ಮಾಡಿರುವ ನಿರ್ಧಾರ ಸ್ವಾಗತಾರ್ಹ’ ಎಂದು ಮದ್ದೂರು ಕಾಲೊನಿಯ ಮುಖಂಡ ಕುಮಾರ್‌ ಅಭಿಪ್ರಾಯ ಪಟ್ಟರು.

ಸ್ವಾಗತಾರ್ಹ ನಿರ್ಧಾರ: ಮಾದೇಗೌಡ

‘ಬೆಟ್ಟ ಕುರುಬರು ಕಾಡಿನ ಮೂಲ ನಿವಾಸಿಗಳು. ಜೇನು ಕುರುಬರು, ಬೆಟ್ಟ ಕುರುಬರು ಹಾಗೂ ಕಾಡು ಕುರುಬರ ಭಾಷೆ, ಸಂಸ್ಕೃತಿ, ಆಚಾರ ವಿಚಾರದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಬುಟ್ಟಿ ಹೆಣೆಯುವುದು ಬೆಟ್ಟ ಕುರುಬ ಸಮುದಾಯದ ಮೂಲ ಕಸುಬು. ಜೇನು ಕುರುಬರ ಪ್ರಧಾನ ಉದ್ಯೋಗ ಜೇನು ಸಂಗ್ರಹ. ಕಾಡು ಕುರುಬರು ಪ‍ಶು ಸಂಗೋಪನೆ ಹಾಗೂ ಕೃಷಿಯಲ್ಲಿ ತೊಡಗಿಕೊಂಡಿರುತ್ತಾರೆ’ ಎಂದು ಜಿಲ್ಲಾ ಸೋಲಿಗ ಬುಡಕಟ್ಟು ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಟ್ಟ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂಬ ಕೂಗು ಹಲವು ದಶಕಗಳಿಂದ ಕೇಳಿ ಬರುತ್ತಿತ್ತು. ರಾಜ್ಯ ಸರ್ಕಾರ ಇವರ ಕುಲ ಶಾಸ್ತ್ರ ಅಧ್ಯಯನಕ್ಕೆ ಆದೇಶಿಸಿತ್ತು. ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಎರಡೂವರೆ ವರ್ಷಗಳ ಹಿಂದೆ ಸರ್ಕಾರವು, ಬೆಟ್ಟ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಈಗ ಕೇಂದ್ರ ಸಚಿವ ಸಂಪುಟ ಅದಕ್ಕೆ ಅನುಮೋದನೆ ನೀಡಿರುವುದು ಅತ್ಯಂತ ಸ್ವಾಗತಾರ್ಹ ನಿರ್ಧಾರ’ ಎಂದು ಅವರು ಹೇಳಿದರು.

ಕಾಡು ಕುರುಬ ಎಂದು ದಾಖಲೆಯಲ್ಲಿದ್ದರೂ, ಪರಿಶಿಷ್ಟ ವರ್ಗಗಳಿಗೆ ಸಿಗುತ್ತಿದ್ದ, ಪೌಷ್ಟಿಕ ಆಹಾರ ಸೇರಿದಂತೆ ಎಲ್ಲ ಸೌಲಭ್ಯಗಳೂ ಬೆಟ್ಟ ಕುರುಬರಿಗೆ ಸಿಗುತ್ತಿತ್ತು.
ಮಂಜುಳಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಅಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.