ADVERTISEMENT

ಭೋರ್ಗರೆಯುತ್ತಿದೆ ಭರಚುಕ್ಕಿ ಜಲಪಾತ; ಪ್ರವಾಸಿಗರಿಗಿಲ್ಲ ಕಣ್ತುಂಬಿಕೊಳ್ಳುವ ಅವಕಾಶ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 12:55 IST
Last Updated 6 ಆಗಸ್ಟ್ 2020, 12:55 IST
ಭೋರ್ಗರೆಯುತ್ತಿರುವ ಭರಚುಕ್ಕಿ ಜಲಪಾತ -ಪ್ರಜಾವಾಣಿ ಚಿತ್ರ: ಅವಿನ್‌ ಪ್ರಕಾಶ್‌ ವಿ.
ಭೋರ್ಗರೆಯುತ್ತಿರುವ ಭರಚುಕ್ಕಿ ಜಲಪಾತ -ಪ್ರಜಾವಾಣಿ ಚಿತ್ರ: ಅವಿನ್‌ ಪ್ರಕಾಶ್‌ ವಿ.   

ಕೊಳ್ಳೇಗಾಲ: ಕೊಡಗು ಸೇರಿದಂತೆ ವಿವಿಧ ಕಡೆಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ತಾಲ್ಲೂಕಿನ ಸುಪ್ರಸಿದ್ದ ಭರಚುಕ್ಕಿ ಮೈದುಂಬಿ ಭೋರ್ಗರೆಯುತ್ತಿದೆ.

ಕಬಿನಿ ಹಾಗೂ ಕೆಆರ್‌ಎಸ್‌ ಜಲಾಶಯಗಳ ಹೊರ ಹರಿವು ಹೆಚ್ಚಾಗಿರುವುದರಿಂದ ಮೂರ್ನಾಲ್ಕು ದಿನಗಳಿಂದೀಚೆಗೆ ಜಲಪಾತದಲ್ಲಿ ಧುಮ್ಮಿಕ್ಕುವ ನೀರಿನ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ನೀರಿಲ್ಲದೆ ಸೊರಗಿದ್ದ ಜಲಪಾತಕ್ಕೆ ಜೀವಕಳೆ ಬಂದಿದೆ.

ಹಸಿರ ಸಿರಿಯ ನಡುವೆಕೊರಕಲು ಬಂಡೆಗಳ ಮೂಲಕ, ಹಲವು ಕವಲುಗಳಾಗಿ ಪ್ರಪಾತಕ್ಕೆ ಜಿಗಿಯುತ್ತಿರುವ ನೀರು ದೂರದಿಂದ ಹಾಲ್ನೊರೆಯಂತೆ ಭಾಸವಾಗುತ್ತಿದೆ.

ADVERTISEMENT

ಇನ್ನು ಒಂದೆರಡು ದಿನಗಳಲ್ಲಿ ಕಾವೇರಿ ನೀರಿನ ಮಟ್ಟ ಇನ್ನಷ್ಟು ಹೆಚ್ಚಲಿದ್ದು, ಆಗ ಜಲಪಾತದ ರುದ್ರರಮಣೀಯ ದೃಶ್ಯ ಇನ್ನಷ್ಟು ಹೆಚ್ಚುವುದು ಖಚಿತ.

ಪ್ರವಾಸಿಗರಿಗೆ ಪ್ರವೇಶವಿಲ್ಲ:ಕೋವಿಡ್‌ ಕಾರಣಕ್ಕೆ ಜಲಪಾತಕ್ಕೆ ಪ್ರವಾಸಿಗರ ಪ್ರವೇಶಕ್ಕೆ ಇನ್ನೂ ಅವಕಾಶ ನೀಡಿಲ್ಲ. ಜಿಲ್ಲಾಡಳಿತ ಪ್ರೇಕ್ಷಣೀಯ ಸ್ಥಳಗಳನ್ನು ತೆರೆಯಲು ಅನುಮತಿ ನೀಡಿದ್ದರೂ, ಅರಣ್ಯ ಇಲಾಖೆ ಇನ್ನೂ ಪ್ರವಾಸಿಗರನ್ನು ಬಿಡುತ್ತಿಲ್ಲ.

ಪ್ರವಾಸಿಗರು ಬರುವುದಕ್ಕೆ ಅವಕಾಶ ನೀಡಬಾರದು ಎಂದು ಶಿವನಸಮುದ್ರ ಹಾಗೂ ಸ್ಥಳೀಯ ಜನರು ಕೂಡ ಒತ್ತಾಯಿಸುತ್ತಿದ್ದಾರೆ.

‘ನಮ್ಮ ಇಲಾಖೆಯಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ಪ್ರಧಾನ ಅರಣ್ಯಸಂರಕ್ಷಣಾಧಿಕಾರಿ ಅವರಿಂದ ಅನುಮತಿ ಪಡೆದು ಬಳಿಕ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಕೊಡುತ್ತೇವೆ’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕುಂಡಲು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.