ADVERTISEMENT

ಮಹದೇಶ್ವರ ಬೆಟ್ಟ | ಭೀಮನ ಅಮಾವಾಸ್ಯೆ: ಮಾದಪ್ಪನ ಸನ್ನಿಧಿಯಲ್ಲಿ ಭಕ್ತ ಸಾಗರ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:21 IST
Last Updated 25 ಜುಲೈ 2025, 2:21 IST
ಅಮಾವಾಸ್ಯೆಯ ಪ್ರಯುಕ್ತ ಗುರುವಾರ ಸಂಜೆ ದೇವಾಲಯದಲ್ಲಿ ಸೇರಿದ್ದ ಭಕ್ತ ಗಣ
ಅಮಾವಾಸ್ಯೆಯ ಪ್ರಯುಕ್ತ ಗುರುವಾರ ಸಂಜೆ ದೇವಾಲಯದಲ್ಲಿ ಸೇರಿದ್ದ ಭಕ್ತ ಗಣ   

ಮಹದೇಶ್ವರ ಬೆಟ್ಟ: ಭೀಮನ ಅಮಾವಾಸ್ಯೆ ಪ್ರಯುಕ್ತ ಮಾದಪ್ಪನ ಸನ್ನಿಧಿಗೆ ಗುರುವಾರ ಭಕ್ತ ಸಾಗರ ಹರಿದುಬಂದಿತು.

ನಸುಕಿನಲ್ಲಿ ಮಾದೇಶ್ವರ ಸ್ವಾಮಿಗೆ ಬೇಡಗಂಪಣ ಸರದಿ ಅರ್ಚಕರಿಂದ ಮಹಾ ಮಂಗಳಾರತಿ, ಬಿಲ್ವಾರ್ಚನೆ, ಪುಷ್ಪಾರ್ಚನೆ, ಗಂಧಾಭಿಷೇಕ, ಕ್ಷೀರಾಭಿಷೇಕ, ಕುಂಕುಮಾಭಿಷೇಕ ನೆರವೇರಿತು. ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.

ಪವಾಢ ಪುರುಷನನ್ನು ಕಾಣಲು ರಾಜ್ಯವಲ್ಲದೆ ನೆರೆ ರಾಜ್ಯ ತಮಿಳುನಾಡಿನಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬಂದಿದ್ದರು. ತುಂತುರು ಮಳೆಯಲ್ಲೇ ಉರುಳು ಸೇವೆ, ಪಂಜಿನ ಸೇವೆ, ಧೂಪದ ಸೇವೆ, ರುಧ್ರಾಕ್ಷಿ ಮಂಟಪ, ಬಸವ ವಾಹನ, ಹುಲಿವಾಹನ, ಬೆಳ್ಳಿ ರಥೋತ್ಸವ ಹಾಗೂ ಚಿನ್ನದ ರಥೋತ್ಸವಗಳು ನಡೆದವು.

ADVERTISEMENT

ಮಾದೇಶ್ವರ ಸ್ವಾಮಿಗೆ ಕುಂಭಾಭಿಷೇಕ:

ಮಲೆ ಮಹದೇಶ್ವರ ಸ್ವಾಮಿಗೆ ಶ್ರಾವಣ ಮಾಸದ ಮೊದಲ ದಿನ ಶುಕ್ರವಾರ ಬೇಡಗಂಪಣ ಸಮುದಾಯದವರಿಂದ ಕುಂಭಾಬಿಷೇಕ ನೆರವೇರಲಿದೆ.

ಅಮಾವಾಸ್ಯೆ ಮುಗಿದ ಮೊದಲನೇ ದಿನ ಬೇಡಗಂಪಣ ಸಮುದಾಯದ 101 ಶಿಶು ಮಕ್ಕಳು ಉಪವಾಸವಿದ್ದು, 101 ಚಿಕ್ಕ ಬಿಂದಿಗೆಗಳಿಂದ ನಂದಾವನದಲ್ಲಿರುವ ಮಜ್ಜನದ ಬಾವಿಯಿಂದ ಜಲ ತುಂಬಿಸಿ, ಅದರ ಜೊತೆಯಲ್ಲಿ 101 ಎಳನೀರನ್ನು ಇರಿಸಿ, ಮಂತ್ರಘೋಷ, ಛತ್ರಿಚಾಮರ, ಮಂಗಳವಾದ್ಯಗಳ ಸಮೇತವಾಗಿ ತರಲಿದ್ದಾರೆ. ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದ ನಂತರ ದೇವಾಲಯದ ಒಳ ಆವರಣದಲ್ಲಿ ಜಲ ತುಂಬಿದ ಬಿಂದಿಗೆಗಳನ್ನು ಇರಿಸಿ, ವಿವಿಧ ಪೂಜೆ ನೆರವೇರಿಸಿದ ಬಳಿಕ ಮಾದೇಶ್ವರ ಸ್ವಾಮಿಗೆ ಕುಂಭಾಬಿಷೇಕ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.