ADVERTISEMENT

ಚಾಮರಾಜನಗರ | ಬೋಧಗಯಾ ಮಹಾ ವಿಹಾರ ಆಡಳಿತ ಬೌದ್ಧರಿಗೆ ಸಿಗಲಿ: ವಿನಯಾಚಾರ್ಯ ಬಂತೇಜಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 7:03 IST
Last Updated 6 ಜನವರಿ 2026, 7:03 IST
ಚಾಮರಾಜನಗರದ ಹೊರವಲಯದ ಯಡಬೆಟ್ಟದಲ್ಲಿರುವ ನಳಂದ ಬೌದ್ಧ ವಿಶ್ವವಿದ್ಯಾನಿಲಯ ಧ್ಯಾನ ಮತ್ತು ಅಧ್ಯಯನ ಕೇಂದ್ರದಲ್ಲಿ ಭಾನುವಾರ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ಮಾತೆ ಸಾವಿತ್ರಿ ಬಾಪುಲೆ ಜನ್ಮ ದಿನಾಚರಣೆ ಆಚರಿಸಲಾಯಿತು
ಚಾಮರಾಜನಗರದ ಹೊರವಲಯದ ಯಡಬೆಟ್ಟದಲ್ಲಿರುವ ನಳಂದ ಬೌದ್ಧ ವಿಶ್ವವಿದ್ಯಾನಿಲಯ ಧ್ಯಾನ ಮತ್ತು ಅಧ್ಯಯನ ಕೇಂದ್ರದಲ್ಲಿ ಭಾನುವಾರ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ಮಾತೆ ಸಾವಿತ್ರಿ ಬಾಪುಲೆ ಜನ್ಮ ದಿನಾಚರಣೆ ಆಚರಿಸಲಾಯಿತು   

ಚಾಮರಾಜನಗರ: ಬಿಹಾರದಲ್ಲಿರುವ ಬೌದ್ಧರ ಪವಿತ್ರ ಸ್ಥಳ ಬೋಧಗಯಾ ಮಹಾ ವಿಹಾರದ ಸಂಪೂರ್ಣ ಆಡಳಿತವನ್ನು ಬೌದ್ಧರಿಗೆ ಒಪ್ಪಿಸಬೇಕು ಹಾಗೂ ಬಿ.ಟಿ ಆಕ್ಟ್-1949 ರದ್ದುಗೊಳಿಸಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟಕ್ಕೆ ಬೌದ್ಧ ಉಪಾಸಕರು, ಅಂಬೇಡ್ಕರ್ ಅನುಯಾಯಿಗಳು ಕೈಜೋಡಿಸಬೇಕು ಎಂದು ಬಿಹಾರದ ವಿನಯಾಚಾರ್ಯ ಬಂತೇಜಿ ಮನವಿ ಮಾಡಿದರು.

ನಗರದ ಯಡಬೆಟ್ಟದಲ್ಲಿರುವ ನಳಂದ ಬೌದ್ಧ ವಿಶ್ವವಿದ್ಯಾಲಯದ ಧ್ಯಾನ ಮತ್ತು ಅಧ್ಯಯನ ಕೇಂದ್ರದಲ್ಲಿ ಅಂತರರಾಷ್ಟ್ರೀಯ ಬುದ್ದಿಸ್ಟ್ ಮಾಂಕ್ಸ್ ಚಾರಿಟಬಲ್ ಟ್ರಸ್ಟ್, ಉಪಾಸಿಕ ಮತ್ತು ಉಪಾಸಕ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಮತ್ತು ಸಾವಿತ್ರಿ ಬಾಪುಲೆ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಹಿಂದೆ ಪೂರ್ವಿಕರು ಅಪಮಾನದ ವಿರುದ್ಧ ಭೀಮಾ ಕೋರೆಗಾಂವ್ ಯುದ್ಧ ಮಾಡಿ ವಿಜಯೋತ್ಸವ ಸಾಧಿಸಿದ್ದಾರೆ. ಪ್ರಸ್ತುತ ಬೌದ್ಧರು ಮಹಾಬೋಧಿ ಮಹಾ ವಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಎಲ್ಲರೂ ಸಂಪೂರ್ಣ ಸಹಕಾರ ನೀಡಬೇಕು’ ಎಂದು ಕೋರಿದರು.

ADVERTISEMENT

‘ಬೌದ್ಧ ಮಹಾವಿಹಾರವನ್ನು ಬೌದ್ದರಿಗೆ ಬಿಟ್ಟುಕೊಡುವಂತೆ ಶ್ರೀಲಂಕಾ ಮತ್ತು ಜಪಾನ್ ದೇಶಗಳು ಪ್ರಯತ್ನ ನಡೆಸಿದವು. ಆದರೆ, ಬೆಂಬಲ ದೊರೆಯಲಿಲ್ಲ. ಮಹಾವಿಹಾರವನ್ನು ಪಡೆಯಲು ಶುರುವಾಗಿರುವ ಹೋರಾಟ ದೇಶದಾದ್ಯಂತ ನಡೆಯಲಿದೆ. ಬೌದ್ಧರನ್ನು ಸಂಘಟಿಸಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ತಿಳಿಸಿದರು.

ಮೈಸೂರಿನ ಮಾನಸ ಗಂಗೋತ್ರಿಯ ಉಪನ್ಯಾಸಕಿ ಟಿ.ಪದ್ಮಶ್ರೀ ಮಾತನಾಡಿ, ‘ತೆಲಂಗಾಣ ಸರ್ಕಾರದ ಮಾದರಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಕ್ಷರದವ್ವ ಸಾವಿತ್ರಿ ಬಾಫುಲೆ ಜನ್ಮ ದಿನವನ್ನು ಮಹಿಳಾ ದಿನಾಚರಣೆಯನ್ನಾಗಿ ಆಚರಿಸಬೇಕು’ ಎಂದರು.

ದೇಶದಲ್ಲೇ ಮೊದಲ ಬಾರಿಗೆ ಹೆಣ್ಣು ಮಕ್ಕಳಿಗಾಗಿ ಶಾಲೆ ತೆರೆದ ಕೀರ್ತಿ ಜ್ಯೋತಿ ಬಾಫುಲೆ ಹಾಗೂ ಸಾವಿತ್ರಿ ಬಾಫುಲೆ ದಂಪತಿಗೆ ಸಲ್ಲುತ್ತದೆ. ಬಾಹ್ಮಣಶಾಹಿ ಕುತಂತ್ರಕ್ಕೆ ಜಗ್ಗದೆ, ಮಹಿಳೆಯರಿಗೆ ಆಲೋಚನಾ ಶಕ್ತಿ ತಂದು ಕೊಟ್ಟವರು ಫುಲೆ ದಂಪತಿ ಎಂದರು.

ಕಾರ್ಯಕ್ರಮದಲ್ಲಿ ಅಮರಜ್ಯೋತಿ ಬಂತೇಜಿ ಮಾತನಾಡಿದರು. ನಾಗರತ್ನ ಬಂತೇಜಿ, ಯಶ ಬಂತೇಜಿ, ಬಿ.ಆರ್.ರಂಗಸ್ವಾಮಿ, ನಾಗ ಸಿದ್ದಾರ್ಥ ಹೊಲೆಯಾರ್, ಎನ್.ನಾಗಯ್ಯ, ನಲ್ಲೂರು ಪರಮೇಶ್, ಕೃಷ್ಣಯ್ಯ, ಎಂ.ಸಿದ್ದರಾಜು ಸೋಮವಾರಪೇಟೆ, ಭಾರತೀಯ ಬೌದ್ಧ ಮಹಾಸಭಾ ಮಹಿಳಾ ಘಟಕ ಅಧ್ಯಕ್ಷೆ ನಾಗಶಿಲ್ಪ, ರಮಾಬಾಯಿ ಫೌಂಡೇಶನ್ ಅಧ್ಯಕ್ಷೆ ಪುಷ್ಪ ಮರಿಸ್ವಾಮಿ ಹಾಗೂ ಬೌದ್ಧ ಉಪಾಸಕರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.