ADVERTISEMENT

ಮಣ್ಣು, ಉರುವಲು, ಕಾರ್ಮಿಕರ ಕೊರತೆ: ಬಿಕ್ಕಟ್ಟಿನಲ್ಲಿ ಮಣ್ಣಿನ ಇಟ್ಟಿಗೆ ಉದ್ಯಮ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 1:51 IST
Last Updated 3 ಫೆಬ್ರುವರಿ 2026, 1:51 IST
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಹೊರ ರಸ್ತೆಯಲ್ಲಿ ಮಣ್ಣಿನ ಇಟ್ಟಿಗೆ ಅಣಿಗೊಳಿಸುತ್ತಿರುವ ಕಾರ್ಮಿಕ
ಯಳಂದೂರು ತಾಲ್ಲೂಕಿನ ಕಂದಹಳ್ಳಿ ಹೊರ ರಸ್ತೆಯಲ್ಲಿ ಮಣ್ಣಿನ ಇಟ್ಟಿಗೆ ಅಣಿಗೊಳಿಸುತ್ತಿರುವ ಕಾರ್ಮಿಕ   

ಯಳಂದೂರು: ಸಾಮಾನ್ಯವಾಗಿ ಸಂಕ್ರಾಂತಿ ನಂತರ ಹಳ್ಳಿಗಳ ಹೊರವಲಯದಲ್ಲಿ ಗರಿಗೆದರುತ್ತಿದ್ದ ಮಣ್ಣಿನ ಇಟ್ಟಿಗೆ ಉದ್ಯಮ ಈ ಬಾರಿ ಕಳಾಹೀನವಾಗಿದೆ. ಇಟ್ಟಿಗೆ ಉದ್ಯಮಕ್ಕೆ ಬೇಕಾದ ಸೌದೆಗಳ ಕೊರತೆ, ನೀರಿನ ಅಭಾವ, ಖರ್ಚು ವೆಚ್ಚಗಳ ಏರಿಕೆ, ನುರಿತ ಕಾರ್ಮಿಕರ ಅಭಾವದ ಪರಿಣಾಮ ಇಟ್ಟಿಗೆ ಭಟ್ಟಿ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಹೆಚ್ಚಳಕ್ಕೂ ಕಾರಣವಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಮುಂಗಾರು ಹಂಗಾಮಿನವರೆಗೂ ಇಟ್ಟಿಗೆ ಭಟ್ಟಿಯ ಕೆಲಸ ನಡೆಯುತ್ತದೆ. ಮಳೆಗಾಲ ಮುಗಿಯುತ್ತಿದ್ದಂತೆ, ಸಂಕ್ರಾಂತಿ ಬಳಿಕ ಇಟ್ಟಿಗೆ ಭಟ್ಟಿಗಳು ಅಲ್ಲಲ್ಲಿ ಕಾಣಸಿಗುತ್ತವೆ. ಸ್ಥಳೀಯವಾಗಿ ಸಿಗುವ ಮಣ್ಣು, ಸೌದೆ ಸೇರಿದಂತೆ ಇತರೆ ಕಚ್ಛಾ ವಸ್ತುಗಳನ್ನು ಬಳಸಿ ಇಟ್ಟಿಗೆ ತಯಾರಿಕೆ ನಡೆಯುತ್ತದೆ. ಒಮ್ಮೆ ಇಟ್ಟಿಗೆ ಭಟ್ಟಿ ಆರಂಭವಾದರೆ ಹಲವು ತಿಂಗಳು ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿತ್ತು. ಇದರಿಂದ ತಾಲ್ಲೂಕಿನ ಆರ್ಥಿಕತೆಗೂ ಅಲ್ಪ ಲಾಭವಾಗುತ್ತಿತ್ತು. 

ಆದರೆ, ಈಚೆಗೆ ಇಟ್ಟಿಗೆ ಉದ್ಯಮಕ್ಕೆ ಅಗತ್ಯ ಬಂಡವಾಳದ ಕೊರತೆ, ನುರಿತ ಕೆಲಸಗಾರರ ಅಭಾವ ಕಾಡುತ್ತಿದೆ. ಜೊತೆಗೆ ಗುಣಮಟ್ಟದ ಮಣ್ಣು ಲಭ್ಯವಾಗದಿರುವುದು, ಸಿಮೆಂಟ್ ಇಟ್ಟಿಗೆಗಳಿಗೆ ಬೇಡಿಕೆ ಹೆಚ್ಚಾಗಿರುವುದು ಉದ್ಯಮಕ್ಕೆ ದೊಡ್ಡ ಪೆಟ್ಟು ನೀಡಿದೆ. 

ADVERTISEMENT

‘ಪ್ರತಿವರ್ಷ ಜನವರಿ ಆರಂಭದಿಂದಲೇ ಮಣ್ಣಿನ ಇಟ್ಟಿಗೆಗಳ ಮಾರಾಟಕ್ಕೆ ಸಿದ್ಧತೆ ನಡೆಯುತ್ತಿತ್ತು. 1 ರಿಂದ 2 ಲಕ್ಷ ಇಟ್ಟಿಗೆಗೆಗಳವರೆಗೂ ಬೇಡಿಕೆ ಇರುತ್ತಿತ್ತು. ಕನಿಷ್ಠ 6 ತಿಂಗಳಲ್ಲಿ ನೂರಾರು ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತಿತ್ತು. ಕೈ ತುಂಬ ಕೂಲಿಯೂ ಸಿಗುತ್ತಿತ್ತು. ಬಂಡವಾಳ ಹೂಡಿದವರಿಗೂ ಆದಾಯವೂ ಸಿಗುತ್ತಿತ್ತು’ ಎನ್ನುತ್ತಾರೆ ಇಟ್ಟಿಗೆ ತಯಾರಕ ಕಂದಹಳ್ಳಿ ಮಲ್ಲೇಶ್.

‘ದಶಕಗಳ ಹಿಂದೆ ಇಟ್ಟಿಗೆ ಗೂಡುಗಳು ಪ್ರತಿ ಗ್ರಾಮಗಳ ಹೊರವಲಯಗಳಲ್ಲಿ ತಲೆ ಎತ್ತುತ್ತಿದ್ದವು. ಹೊಳೆಯಲ್ಲಿ ಹರಿಯುತ್ತಿದ್ದ ನೀರು ಇಟ್ಟಿಗೆ ತಯಾರಿಗೆ ಸಾಕಾಗುತ್ತಿತ್ತು. ಹೆಣ್ಣಾಳು ಹಾಗೂ ಗಂಡಾಳುಗಳಿಗೆ ಪ್ರತ್ಯೇಕ ಕೂಲಿ ನಿಗದಿ ಮಾಡಿ ದುಡಿಸಿಕೊಳ್ಳಲಾಗುತ್ತಿತ್ತು. ಹಳ್ಳಿಗಳಲ್ಲಿಯೇ ಕಚ್ಚಾವಸ್ತುಗಳು ದೊರೆಯುತ್ತಿದ್ದರಿಂದ ಹೆಚ್ಚು ಸಮಸ್ಯೆ ಬಾಧಿಸುತ್ತಿರಲಿಲ್ಲ. ಆದರೆ, ಈಚೆಗೆ ಶ್ರಮಿಕರು ಇಟ್ಟಿಗೆ ಭಟ್ಟಿಗಳಲ್ಲಿ ಕೆಲಸ  ಮಾಡಲು ಆಸಕ್ತಿ ತೋರುತ್ತಿಲ್ಲ. ಜೊತೆಗೆ ಉದ್ಯಮಕ್ಕೆ ಬಂಡವಾಳ ಪ್ರಮಾಣ ಹೆಚ್ಚಾಗಿದೆ, ಭೂಮಿ ಹುಡುಕುವುದು ಕಷ್ಟವಾಗಿದೆ, ಶ್ರಮಿಕರ ಕೂಲಿ ದರ ಹೆಚ್ಚಾಗಿರುವುದು ಉದ್ಯಮಕ್ಕೆ ಸಮಸ್ಯೆಯಾಗಿ ಕಾಡುತ್ತಿದೆ’ ಎನ್ನುತ್ತಾರೆ ಕಂದಹಳ್ಳಿಯ ಇಟ್ಟಿಗೆ ವ್ಯಾಪಾರಿ ರಾಜು.   

‘ಈಚಿನ ವರ್ಷಗಳಲ್ಲಿ ಇಟ್ಟಿಗೆ ಸುಡಲು ಅಗತ್ಯ ಪ್ರಮಾಣದ  ಸೌದೆ ಸಿಗುತ್ತಿಲ್ಲ. ಸಣ್ಣಪುಟ್ಟ ಮರಗಳ ಸಾಗಣೆಗೂ ಪರವಾನಗಿ ಪಡೆಯಬೇಕಿದೆ. ಅನುಪಯುಕ್ತ ಮರಗಳನ್ನು ತರುವುದೂ ಇಟ್ಟಿಗೆ ಭಟ್ಟಿ ಮಾಲೀಕರಿಗೆ ಸವಾಲಾಗಿ ಪರಿಣಮಿಸಿದೆ. ಮೊದಲಿನಂತೆ ಹದವಾದ ಮಣ್ಣು, ನೀರು ಹಾಗೂ ಇಟ್ಟಿಗೆ ಬೇಯಿಸಲು ಬೇಕಾದ ಅನುಪಯುಕ್ತ ಮರಗಳು ಸಿಗದಿರುವುದು ಸಮಸ್ಯೆಯಾಗಿದೆ’ ಎನ್ನುತ್ತಾರೆ ಇಟ್ಟಿಗೆ ತಯಾರಕರು.

ತಾಲ್ಲೂಕಿನಲ್ಲಿ ಕೌಶಲ ಬೇಡುವ ಕೈಗಾರಿಕೆಗಳು ಹೆಚ್ಚಾಗಿಲ್ಲ. ಬಹುತೇಕ ಕೃಷಿ ಪ್ರಧಾನವಾದ ತಾಲ್ಲೂಕಿನಲ್ಲಿ ತೋಟ ಮತ್ತು ಗದ್ದೆಗಳಲ್ಲಿ ಕೂಲಿ ಕೆಲಸ ಮಾಡುವವರು ಹೆಚ್ಚು. ಉಳಿದಂತೆ ಪಟ್ಟಣಗಳಲ್ಲಿ ಸಣ್ಣಪುಟ್ಟ ಕೆಲಸ ಮಾಡಬೇಕಾಗಿದೆ. ಉದ್ಯೋಗ ಅರಸಿ ಕೇರಳ, ಮೈಸೂರು ಮತ್ತು ಕೊಡಗಿನ ತೋಟಗಳಲ್ಲಿ ದುಡಿಯುವವರು ತಾಲ್ಲೂಕಿನಲ್ಲಿ ಇದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇಟ್ಟಿಗೆ ಭಟ್ಟಿಗಳು ನೂರಾರು ಮಂದಿಗೆ ತಾತ್ಕಾಲಿಕ ಉದ್ಯೋಗಗಳನ್ನು ನೀಡುತ್ತಿದ್ದವು. 

ಸಿಮೆಂಟ್ ಇಟ್ಟಿಗೆ ಪೈಪೋಟಿ

‘ದಶಕಗಳ ಹಿಂದೆ ಮನೆ ಕಟ್ಟುವವರು ಮುಂಚಿತವಾಗಿಯೇ ಸುಟ್ಟ ಮಣ್ಣಿನ ಇಟ್ಟಿಗೆಗಳನ್ನು ಸಂಗ್ರಹಿಸಿಕೊಂಡು ಕಾಮಗಾರಿ ಆರಂಭಿಸುತ್ತಿದ್ದರು. ಮಣ್ಣಿನ ಇಟ್ಟಿಗೆ ಬಳಕೆ ಕಟ್ಟಡಕ್ಕೆ ಸುಭದ್ರ ಹಾಗೂ ತಂಪು ವಾತಾವರಣ ನೀಡುವುದರಿಂದ ವರ್ಷಪೂರ್ತಿ ಇಟ್ಟಿಗೆಗಳಿಗೆ ಬೇಡಿಕೆ ಇರುತ್ತಿತ್ತು. ಕೆಲವರು ಮನೆ ಕಟ್ಟುವ ಮುನ್ನವೇ ಮುಂಗಡ ನೀಡಿ ಇಟ್ಟಿಗೆ ಕಾಯ್ದಿರಿಸುತ್ತಿದ್ದರು. ಪ್ರಸ್ತುತ ಸಿಮೆಂಟ್ ಇಟ್ಟಿಗೆ ಘಟಕಗಳು ಎಲ್ಲೆಂದರಲ್ಲಿ ಆರಂಭವಾಗಿದ್ದು ಮಣ್ಣಿನ ಇಟ್ಟಿಗೆಗಳಿಗೆ ಬೇಡಿಕೆ ಕುಸಿಯುತ್ತ ಸಾಗಿದೆ. ಪರಿಸರ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲೂ ಸಿಮೆಂಟ್ ಇಟ್ಟಿಗೆ ಬಳಕೆ ಹೆಚ್ಚಾಗಿದ್ದು ಗ್ರಾಮೀಣ ಪ್ರದೇಶ ಪೇಟೆ ಪಟ್ಟಣಗಳಲ್ಲೂ ಕಾಂಕ್ರೀಟ್ ಇಟ್ಟಿಗೆಯ ಬಳಕೆ ಹೆಚ್ಚಾಗಿದೆ’ ಎನ್ನುತ್ತಾರೆ ಪಟ್ಟಣದ ಕೃಷಿಕ ಸುರೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.