ADVERTISEMENT

ಉದ್ಯಾನ ನಿರ್ವಹಣೆ: ಸದಸ್ಯರ ಅಸಮಾಧಾನ

ಬಜೆಟ್‌ ಚರ್ಚೆ: ಕುಡಿಯುವ ನೀರಿಗೆ ಅನುದಾನ ನೀಡಲು ಮನವಿ, ಮಹಿಳೆಯರ ಕಡೆಗಣನೆ ಆರೋಪ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 11:07 IST
Last Updated 5 ಮಾರ್ಚ್ 2021, 11:07 IST
ಬಜೆಟ್‌ ಸಭೆಯಲ್ಲಿ ಭಾಗವಹಿಸಿದ್ದ ನಗರಸಭೆ ಸದಸ್ಯರು
ಬಜೆಟ್‌ ಸಭೆಯಲ್ಲಿ ಭಾಗವಹಿಸಿದ್ದ ನಗರಸಭೆ ಸದಸ್ಯರು   

ಚಾಮರಾಜನಗರ: ನಗರದ ಹೌಸಿಂಗ್‌ ಬೋರ್ಡ್‌ನಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್‌ ಉದ್ಯಾನ ಸೇರಿದಂತೆ ನಗರದಲ್ಲಿರುವ ಉದ್ಯಾನಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಇಬ್ಬರು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ, ಬಜೆಟ್‌ನಲ್ಲಿ ಹೆಚ್ಚು ಅನುದಾನ ನೀಡುವಂತೆ ಒತ್ತಾಯಿಸಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ 17ನೇ ಪಕ್ಷೇತರ ಸದಸ್ಯ ಸಿ.ಎಂ.ಬಸವಣ್ಣ ಅವರು, ನಗರದಲ್ಲಿ ಏಳೆಂಟು ಉದ್ಯಾನಗಳಿವೆ. ಯಾವುದು ಕೂಡ ಸುಸಜ್ಜಿತವಾಗಿಲ್ಲ. ನಿರ್ವಹಣೆ ಸರಿಯಾಗಿಲ್ಲ ಎಂಬುದರ ಬಗ್ಗೆ ಪತ್ರಿಕೆಯಲ್ಲಿ ವರದಿಯಾಗಿದೆ. ಹಿರಿಯರು ನಡೆದಾಡುವ ಉದ್ಯಾನಗಳು ಚೆನ್ನಾಗಿರಬೇಕು. ಉತ್ತಮ ವಾತಾವರಣ ಇರಬೇಕು. ಇರುವ ಉದ್ಯಾನಗಳನ್ನಾದರೂ ನಗರಸಭೆ ಅಭಿವೃದ್ಧಿಗೊಳಿಸಬೇಕು’ ಎಂದು ಒತ್ತಾಯಿಸಿದರು.

26ನೇ ವಾರ್ಡ್‌ ಸದಸ್ಯೆ ಕುಮುದ ಅವರು ಮಾತನಾಡಿ, ‘ಮಾಧ್ಯಮದವರು ಕರೆ ಮಾಡಿ ಉದ್ಯಾನ ನಿರ್ವಹಣೆಯ ಬಗ್ಗೆ ಪ್ರಶ್ನೆ ಮಾಡುತ್ತಾರೆ. ನಾವು ಏನು ಹೇಳುವುದು? ಹೌಸಿಂಗ್‌ ಬೋರ್ಡ್‌ನಲ್ಲಿರುವ ಉದ್ಯಾನದ ನಿರ್ವಹಣೆ ಸರಿಯಾಗಿಲ್ಲ. ಹಿರಿಯರಿಗೆ ಅಲ್ಲಿ ತೊಂದರೆಯಾಗುತ್ತಿದೆ. ಸಮಸ್ಯೆಗಳನ್ನು ಹೇಳಿಕೊಂಡು ಜನರು ನನ್ನ ಪತಿಗೆ ಕರೆ ಮಾಡುತ್ತಾರೆ. ಆ ಉದ್ಯಾನದ ಅಭಿವೃದ್ಧಿಗೆ ನಗರಸಭೆ ಕ್ರಮ ಕೈಗೊಳ್ಳಲೇ ಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಪ್ರಜಾವಾಣಿ’ಯ ಗುರುವಾರದ ಸಂಚಿಕೆಯಲ್ಲಿ ಹೌಸಿಂಗ್‌ ಬೋರ್ಡ್‌ ಉದ್ಯಾನದ ಅವ್ಯವಸ್ಥೆಯ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು.

ಕುಡಿಯುವ ನೀರಿಗೆ ಒತ್ತು ನೀಡಿ: ಕಾಂಗ್ರೆಸ್‌ ಸದಸ್ಯ ಆರ್‌.ಪಿ.ನಂಜುಂಡಸ್ವಾಮಿ ಅವರು ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಪ್ರಸ್ತಾಪಿಸಿದರು.

ನಗರಕ್ಕೆ ಈಗ ಎಂಟು–10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಜನರಿಗೆ ತೀವ್ರ ತೊಂದರೆಯಾಗುತ್ತಿದೆ. ನೀರಿನ ಉದ್ದೇಶಕ್ಕೆ ಬಜೆಟ್‌ನಲ್ಲಿ ಹೆಚ್ಚು ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

‘ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ಕಷ್ಟ ಹೇಳತೀರದು. ಆ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಗಮನ ಹರಿಸಬೇಕು’ ಎಂದು ಅವರು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಎಂ.ರಾಜಣ್ಣ ಅವರು, ‘ಪೈಪ್‌ ಒಡೆದಿರುವುದರಿಂದ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಿದೆ. ಅದು ದುರಸ್ತಿಯಾದರೆ ಪೂರೈಕೆ ಸಹಜ ಸ್ಥಿತಿಗೆ ಬರಲಿದೆ’ ಎಂದರು.

ಕುಂದುಕೊರತೆ ಸಭೆ: ‘ಜನರ ಕುಂದು ಕೊರತೆಗಳನ್ನು ಆಲಿಸುವುದಕ್ಕಾಗಿ ಪ್ರತಿ ತಿಂಗಳು ಒಂದೊಂದು ವಾರ್ಡ್‌ಗೆ ಭೇಟಿ ನೀಡಿ ಕುಂದುಕೊರತೆ ಸಭೆ ನಡೆಸಲಾಗುವುದು. ಖಾತೆಗಳನ್ನು ಮಾಡಿಕೊಡುವುದಕ್ಕಾಗಿ ಈ ತಿಂಗಳ 27,28,29ರಂದು ಖಾತೆ ಆಂದೋಲನವನ್ನೂ ಹಮ್ಮಿಕೊಳ್ಳಲಾಗುವುದು’ ಎಂದರು.

ಬಿಎಸ್‌ಪಿ ಸದಸ್ಯ ಪ್ರಕಾಶ್‌ ಅವರು ಮಾತನಾಡಿ, ‘ಚಂದಕವಾಡಿಯಲ್ಲಿರುವ ಪಂಪ್‌ಹೌಸ್‌ನಲ್ಲಿ ನೀರು ಸಾಕಷ್ಟಿದ್ದು, ಅಲ್ಲಿಂದ ನೀರು ತರಲು ಕ್ರಮ ಕೈಗೊಂಡರೆ ಐದಾರು ವಾರ್ಡ್‌ಗಳ ನೀರಿನ ಸಮಸ್ಯೆ ಕಡಿಮೆಯಾಗಲಿದೆ’ ಎಂದು ಸಲಹೆ ನೀಡಿದರು.

ಮಹಿಳೆಯರ ಕಡೆಗಣನೆ ಆರೋಪ

ಎಸ್‌ಡಿಪಿಐ ಸದಸ್ಯ ಎಂ.ಮಹೇಶ್‌ ಮಾತನಾಡಿ, ‘ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಹಲವು ಸಲಹೆಗಳನ್ನು ನೀಡಿದ್ದೆವು. ಆದರೆ, ಅವುಗಳನ್ನು ಬಜೆಟ್‌ನಲ್ಲಿ ಸೇರಿಸಿಲ್ಲ. ಹಾಗಿದ್ದ ಮೇಲೆ ಸಭೆ ನಡೆಸಿದ ಉದ್ದೇಶವಾದರೂ ಏನು’ ಎಂದು ಪ್ರಶ್ನಿಸಿದರು.

‘ಮಹಿಳೆಯರಾಗಿದ್ದುಕೊಂಡು ಅಧ್ಯಕ್ಷೆ ಬಜೆಟ್‌ನಲ್ಲಿ ಮಹಿಳೆಯರನ್ನು ಕಡೆಗಣಿಸಿದ್ದಾರೆ. ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಸಂಚಾರ ಶೌಚಾಲಯ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದೆವು. ಅದರ ಪ್ರಸ್ತಾಪ ಇಲ್ಲ. ಪ್ರತಿ ವಾರ್ಡ್‌ನಲ್ಲೂ ಗ್ರಂಥಾಲಯ ತೆರೆಯಲು ಮನವಿ ಮಾಡಲಾಗಿತ್ತು. ಇದನ್ನೂ ಬಜೆಟ್‌ ಭಾಷಣದಲ್ಲಿ ಸೇರಿಸಿಲ್ಲ. ಎಫ್‌ಡಿಎ, ಎಸ್‌ಡಿಎ ಸೇರಿದಂತೆ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅನುದಾನ ಮೀಸಲಿಡುವಂತೆ ಕೇಳಿಕೊಂಡಿದ್ದೆವು. ಅದಕ್ಕೂ ಸ್ಪಂದನೆ ಸಿಕ್ಕಿಲ್ಲ’ ಎಂದು ದೂರಿದರು.

ಎಸ್‌ಡಿಪಿಐನ ಮತ್ತೊಬ್ಬ ಸದಸ್ಯ ಅಬ್ರಾರ್‌ ಅಹಮದ್‌ ಮಾತನಾಡಿ, ‘ಅವಕಾಶ ಇರುವ ಕಡೆ ಆದಾಯವನ್ನು ಹೆಚ್ಚಿಸಲು ಕ್ರಮ ವಹಿಸಬೇಕು. ಅನಧಿಕೃತ ಫ್ಲೆಕ್ಸ್‌, ಬ್ಯಾನರ್‌ ಹಾಕುವವರ ವಿರುದ್ಧ ದಂಡ ವಿಧಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.