
ಸಿದ್ದರಾಮಯ್ಯ
ಚಾಮರಾಜನಗರ: ಸಹಕಾರ ಸಂಘಗಳಿಗೆ ನೇಮಕಾತಿ ಮಾಡಿಕೊಳ್ಳುವಾಗ ಸಹಕಾರ ವಿಷಯದಲ್ಲಿ ಡಿಪ್ಲೊಮಾ ಹಾಗೂ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು ಹಾಗೂ ಪಠ್ಯದಲ್ಲಿ ಸಹಕಾರ ತತ್ವದ ವಿಚಾರಗಳನ್ನು ಅಳವಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರೋಪದಲ್ಲಿ ಮಾತನಾಡಿದ ಅವರು, ‘ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮಂತ್ರಿ ಸ್ಥಾನ ಹೋಗುತ್ತದೆ ಎಂಬ ಮೌಢ್ಯ ಇತ್ತು. ಇಲ್ಲಿಗೆ 20ಕ್ಕೂ ಹೆಚ್ಚು ಬಾರಿ ಭೇಟಿನೀಡಿದ್ದು ಬಂದಾಗಲೆಲ್ಲ ಮುಖ್ಯಮಂತ್ರಿ ಕುರ್ಚಿ ಗಟ್ಟಿಯಾಗಿದೆ. ಜೊತೆಗೆ ಪಕ್ಷದ ಅಧಿಕಾರವೂ ಗಟ್ಟಿಯಾಗುತ್ತಲೇ ಇದೆ’ ಎಂದರು.
ಮುಖ್ಯಮಂತ್ರಿ ಬದಲಾವಣೆ ಚರ್ಚೆ ಸದ್ಯ ಅನವಶ್ಯಕ. ಎರಡೂವರೆ ವರ್ಷದ ನಂತರ ಸಂಪುಟ ಪುನಾರಚನೆ ಮಾಡಬಹುದು ಎಂಬ ತೀರ್ಮಾನದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಷಯ ಮುನ್ನಲೆಗೆ ಬಂದಿದೆ ಅಷ್ಟೆ. ಸಂಪುಟ ಪುನಾರಚನೆ ಬಗ್ಗೆ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸಂಪುಟದಲ್ಲಿ 2 ಸಚಿವ ಸ್ಥಾನಗಳು ಮಾತ್ರ ಖಾಲಿ ಇವೆ ಎಂದು ಸಿಎಂ ಹೇಳಿದರು.
‘ನಾನು ಜೆಡಿಎಸ್‌ನಲ್ಲಿ ಇದ್ದಿದ್ದರೆ ಮುಖ್ಯಮಂತ್ರಿಯಾಗುತ್ತಿರಲಿಲ್ಲ. ದೇವೇಗೌಡರು ಹಾಗೂ ಅವರ ಮಕ್ಕಳು ಮುಖ್ಯಮಂತ್ರಿಯಾಗಲು ಬಿಡುತ್ತಿರಲಿಲ್ಲ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಬಳಿಕ ಎರಡು ಬಾರಿ ಮುಖ್ಯಮಂತ್ರಿಯಾದೆ’ ಎಂದು ಸಿದ್ದರಾಮಯ್ಯ ಹೇಳಿದರು.
ನವೆಂಬರ್ ಕ್ರಾಂತಿ ಮಾಧ್ಯಮದವರ ಸೃಷ್ಟಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 5 ವರ್ಷ ಆಡಳಿತ ಪೂರೈಸಲಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಗ್ರಾಮದಲ್ಲಿ ಶಾಲೆ, ಗ್ರಾಮ ಪಂಚಾಯಿತಿ, ಸಹಕಾರ ಸಂಘಗಳು ಇರಬೇಕು ಎಂಬುದು ನೆಹರೂ ನಿಲುವಾಗಿತ್ತು. ಅವರ ದೂರದೃಷ್ಟಿಯ ಪರಿಣಾಮ ದೇಶದಲ್ಲಿ ಸಹಕಾರ ಚಳವಳಿ ಬಲಗೊಂಡಿದ್ದರಿಂದ ನೆಹರೂ ಜನ್ಮದಿನದಂದು ಸಹಕಾರ ಸಪ್ತಾಹ ಆಚರಿಸಲಾಗುತ್ತಿದೆ ಎಂದರು.
‘ಹಿಂದೆ ಪಶು ಸಂಗೋಪನಾ ಸಚಿವನಾಗಿದ್ದಾಗ ಹಾಲು ಉತ್ಪಾದಕರ ಸಹಕಾರ ಸಂಘಗಳ ಸ್ವಾಯತ್ತತೆ ಹಾಗೂ ಸ್ವಾವಲಂಬನೆಗೆ ಶ್ರಮಿಸಿದ್ದೆ. ಪ್ರಸ್ತುತ ರಾಜ್ಯದಲ್ಲಿ ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಲೀಟರ್ ಹಾಲಿಗೆ ₹ 5 ಸಹಾಯಧನ ನೀಡಲಾಗುತ್ತಿದ್ದು ದಿನಕ್ಕೆ ₹ 5 ಕೋಟಿ ಹೈನುಗಾರರಿಗೆ ಸಿಗುತ್ತಿದೆ. ಎರಡು ಬಾರಿ ಹಾಲಿನ ದರ ಹೆಚ್ಚಿಸಿದರೂ ಬೆಲೆ ಹೆಚ್ಚಳದ ಲಾಭವನ್ನು ಹಾಲು ಉತ್ಪಾದಕರಿಗೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.