
ಹನೂರು: ಕಾಡು ಪ್ರಾಣಿಗಳ ನಿರಂತರ ಉಪಟಳದಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಈ ಉಪಟಳವನ್ನು ನಿಯಂತ್ರಿಸುವಲ್ಲಿ ಅರಣ್ಯಾಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ–ಹಸಿರು ಸೇನೆ ವತಿಯಿಂದ ಜ. 5ರಂದು ಹನೂರಿನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗೌಡಳ್ಳಿ ಸೋಮಣ್ಣ ತಿಳಿಸಿದರು.
ತಾಲೂಕಿನ ಗುಳ್ಯ ಗ್ರಾಮದಲ್ಲಿರುವ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು. ಜಿಲ್ಲೆ ವ್ಯಾಪ್ತಿಯಲ್ಲಿ ಹುಲಿಗಳ ಹಾವಳಿ ದಿನೇದಿನೇ ಹೆಚ್ಚಾಗುತ್ತಿದ್ದು, ರೈತರು ಭಯಭೀತರಾಗಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಹೇಳಿಕೊಂಡರೂ, ವಾಸ್ತವದಲ್ಲಿ ಆ ಕಾರ್ಯಾಚರಣೆ ಸಂಪೂರ್ಣ ವಿಫಲವಾಗಿದೆ. ಇದರ ಪರಿಣಾಮವಾಗಿ ಕಾಡುಪ್ರಾಣಿಗಳು ಗ್ರಾಮೀಣ ಪ್ರದೇಶಗಳಿಗೂ ನುಗ್ಗಿ ರೈತರ ಬೆಳೆ, ಜಾನುವಾರು ಹಾಗೂ ಮಾನವ ಜೀವಗಳಿಗೆ ಅಪಾಯ ತಂದೊಡ್ಡುತ್ತಿವೆ ಎಂದು ಕಿಡಿಕಾರಿದರು. ಕೂಡಲೇ ಕಾಡುಪ್ರಾಣಿಗಳ ಉಪಟಳ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ ಕೈಗೊಳ್ಳದಿದ್ದರೆ ರೈತ ಸಂಘದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಲ್ಲಯ್ಯನಪುರ ಗ್ರಾಮದ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ನಿರಂತರವಾಗಿ ಎರಡು ಕಾಡಾನೆಗಳು ಆಗಾಗ್ಗೆ ಜಮೀನುಗಳ ಸಮೀಪಕ್ಕೆ ಆಗಮಿಸುತ್ತಿವೆ. ಇದರ ಪರಿಣಾಮವಾಗಿ ರೈತರು ರಾತ್ರಿ ವೇಳೆಯಲ್ಲಿ ನಿದ್ದೆ ಬಿಟ್ಟು ಜಮೀನನ್ನು ಕಾವಲು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಲವಾರು ಬಾರಿ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಶಾಶ್ವತ ಪರಿಹಾರ ಕಂಡುಬಂದಿಲ್ಲ. ಕಾಡಾನೆಗಳು ಮತ್ತೆ ಮತ್ತೆ ಜಮೀನುಗಳಿಗೆ ದಾಳಿ ನಡೆಸುತ್ತಲೇ ಇರುವುದರಿಂದ ರೈತರು ತೀವ್ರ ಆತಂಕದಲ್ಲಿ ಜೀವನ ನಡೆಸುವಂತಾಗಿದೆ ಎಂದು ಅವರು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಬಸವರಾಜಪ್ಪ, ತಾಲ್ಲೂಕು ಕಾರ್ಯದರ್ಶಿ ಮಹದೇವ ಪ್ರಭುಸ್ವಾಮಿ, ಗೌರವಾಧ್ಯಕ್ಷ ಪುಟ್ಟಸ್ವಾಮಿ ಸೇರಿದಂತೆ ಬಸವಣ್ಣ ಕೃಷ್ಣಯ್ಯ ನಾಗ ವೆಂಕರಾಜು ಶಿವರಾಜು ಮುತ್ತುರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.