
ಚಾಮರಾಜನಗರ: ತಾಲ್ಲೂಕಿನ ಕಲ್ಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಭೀತಿ ಹುಟ್ಟಿಸಿ ಜಾನುವಾರುಗಳನ್ನು ಕೊಂದು ಹಾಕಿದ್ದ ಹುಲಿಯನ್ನು ಮಂಗಳವಾರ ರಾತ್ರಿ ಅರಣ್ಯ ಇಲಾಖೆಯ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿದೆ.
ವೀರನಪುರ ಸಮೀಪದ ಆನೆಮಡುವಿನ ಕೆರೆಯ ಬಳಿ ಏಳು ವರ್ಷದ ಗಂಡು ಹುಲಿಯನ್ನು ಸುರಕ್ಷಿತವಾಗಿ ಸೆರೆ ಹಿಡಿಯಲಾಗಿದ್ದು ಟೈಗರ್ ಕೋರ್ ವಲಯಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾರ್ಯಾಚರಣೆ ನಡೆದಿದ್ದು ಹೇಗೆ?
ನಂಜೇದೇವನಪುರ ಸುತ್ತಮುತ್ತಲಿನ ಜಮೀನಿನಲ್ಲಿ ಕಾಣಿಸಿಕೊಂಡಿದ್ದ ತಾಯಿ ಹುಲಿ ಹಾಗೂ ನಾಲ್ಕು ಮರಿಗಳ ಸೆರೆಗೆ ಅರಣ್ಯ ಇಲಾಖೆ ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಥರ್ಮಲ್ ಡ್ರೋನ್ ನೆರವಿನಿಂದ ಶೋಧ ನಡೆಸುವಾಗ ಮಂಗಳವಾರ ಸಂಜೆ 6ರ ಸುಮಾರಿಗೆ ಕ್ಯಾಮೆರಾದಲ್ಲಿ ಹುಲಿಯ ಚಲನವಲನಗಳು ಪತ್ತೆಯಾಗಿತ್ತು.
ಕೂಡಲೇ ಎಚ್ಚೆತ್ತುಕೊಂಡ ಬಿಆರ್‌ಟಿ ಡಿಸಿಎಫ್ ಶ್ರೀಪತಿ ನೇತೃತ್ವದ ತಂಡ ಸಾಕಾನೆಗಳನ್ನು ಬಳಸಿಕೊಂಡು ರಾತ್ರಿ ವೇಳೆ ಕೂಂಬಿಂಗ್ ನಡೆಸಿತು. ಹುಲಿ ಅಡಗಿ ಕುಳಿತಿದ್ದ ಜಾಗ ಖಚಿತಪಡಿಸಿಕೊಂಡು ವೈದ್ಯರು ಗನ್ ಮೂಲಕ ಅರವಳಿಕೆ ಚುಚ್ಚುಮದ್ದು ಚುಚ್ಚಿದರು. ಬಳಿಕ ಹುಲಿಯನ್ನು ಸೆರೆ ಹಿಡಿದು ಬೋನಿನಲ್ಲಿ ಇರಿಸಲಾಯಿತು ಎಂದು ಅಧಿಕಾರಿಗಳು ಕಾರ್ಯಾಚರಣೆಯ ವಿವರ ನೀಡಿದರು.
ಹುಲಿಗೆ ಸಹಜ ಸ್ಥಿತಿಗೆ ಬಂದ ನಂತರ ಶಿಷ್ಟಾಚಾರದ ಪ್ರಕಾರ ಕಾಡಿಗೆ ಬಿಡಲಾಯಿತು. ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಪಶು ವೈದ್ಯ ಆದರ್ಶ್ ಸೇರಿದಂತೆ ಎಸಿಎಫ್ ಮಂಜುನಾಥ್ ಹಾಗೂ ಹಲವು ಸಿಬ್ಬಂದಿ ಇದ್ದರು.
ಐದು ಹುಲಿಗಳ ಸುಳಿವಿಲ್ಲ
ನಂಜೇದೇವನಪುರ ಸುತ್ತಮುತ್ತ ಕಾಣಿಸಿಕೊಂಡು ಆತಂಕ ಮೂಡಿಸಿರುವ ಐದು ಹುಲಿಗಳ ಸುಳಿವಿಲ್ಲ. ಡಿ.19ರಂದು ಪ್ರಶಾಂತ್ ಎಂಬುವರ ತೋಟದ ಸಮೀಪ ತಮ್ಮಡಹಳ್ಳಿಗೆ ಸಾಗುವ ದಾರಿಯಲ್ಲಿ ಕಾಣಿಸಿಕೊಂಡಿದ್ದ ಐದು ಹುಲಿಗಳು ನಂತರ ಗ್ರಾಮದ ಕ್ವಾರಿಯೊಂದರ ಬಳಿ ಪತ್ತೆಯಾಗಿದ್ದವು. ಕಾರ್ಯಾಚರಣೆ ಆರಂಭಿಸುವಷ್ಟರಲ್ಲಿ ಅಲ್ಲಿಂದಲೂ ಕಾಲ್ಕಿತ್ತಿದ್ದವು.
ನಂತರ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಐದು ಹುಲಿಗಳ ಸುಳಿವಿಲ್ಲ. ಬದಲಾಗಿ ಗಂಡು ಹುಲಿ ಸೆರೆ ಸಿಕ್ಕಿದೆ. ಕಲ್ಪುರ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಹುಲಿ ಇದಾಗಿದೆ. ಹುಲಿ ಸೆರೆಯಾದ ಜಾಗದಿಂದ ಸುಮಾರು ಐದಾರು ಕಿ.ಮೀ ವ್ಯಾಪ್ತಿಯಲ್ಲಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.