ADVERTISEMENT

ಚಾಮರಾಜೇಶ್ವರನ ಮಹಾರಥೋತ್ಸವ, ಆಷಾಢ ತೇರಿಗೆ ಕ್ಷಣಗಣನೆ

ಉತ್ಸವ ಕಣ್ತುಂಬಿಕೊಳ್ಳಲು ಹರಿದು ಬರುತ್ತಿರುವ ಭಕ್ತಸಾಗರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 1:46 IST
Last Updated 10 ಜುಲೈ 2025, 1:46 IST
ಜುಲೈ 10ರಂದು ಚಾಮರಾಜೇಶ್ವರ ಸ್ವಾಮಿಯ ಮಹಾ ರಥೋತ್ಸವ ನಡೆಯುತ್ತಿದ್ದು ಐತಿಹಾಸಿಕ ಚಾಮರಾಜೇಶ್ವರ ದೇವಸ್ಥಾನ ಸಿಂಗಾರಗೊಂಡಿದೆ 
ಜುಲೈ 10ರಂದು ಚಾಮರಾಜೇಶ್ವರ ಸ್ವಾಮಿಯ ಮಹಾ ರಥೋತ್ಸವ ನಡೆಯುತ್ತಿದ್ದು ಐತಿಹಾಸಿಕ ಚಾಮರಾಜೇಶ್ವರ ದೇವಸ್ಥಾನ ಸಿಂಗಾರಗೊಂಡಿದೆ    

ಚಾಮರಾಜನಗರ: ಆಷಾಢ ಮಾಸದಲ್ಲಿ ನಡೆಯುವ ವಿಶಿಷ್ಟ ತೇರು ಎಂಬ ಹೆಗ್ಗಳಿಕೆ ಹೊಂದಿರುವ ಚಾಮರಾಜೇಶ್ವರ ಸ್ವಾಮಿಯ ಮಹಾ ರಥೋತ್ಸವ ಜುಲೈ 10ರಂದು ನಡೆಯುತ್ತಿದ್ದು, ಇಡೀ ನಗರ ಸಿಂಗಾರಗೊಂಡಿದೆ. ಚಾಮರಾಜೇಶ್ವರನ ದರ್ಶನ ಪಡೆದು ಹರಕೆ ತೀರಿಸಲು ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳಿಂದಲೂ ಭಕ್ತಸಾಗರವೇ ಹರಿದು ಬರುತ್ತಿದೆ.‌ 

ಈ ವರ್ಷ ಅದ್ಧೂರಿಯಾಗಿ ರಥೋತ್ಸವ ಆಚರಿಸಲಾಗುತ್ತಿದ್ದು ಚಾಮರಾಜೇಶ್ವರನ ದೇಗುಲವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಚಾಮರಾಜೇಶ್ವರನನ್ನು ಹೊತ್ತೊಯ್ಯುವ ಮುಖ್ಯರಥ, ಗಣಪತಿ, ಚಂಡಿಕೇಶ್ವರರನ್ನು ಹೊತ್ತೊಯ್ಯುವ ಚಿಕ್ಕ ರಥಗಳನ್ನು ಬಣ್ಣದ ಧ್ವಜಗಳಿಂದ ಸಿಂಗರಿಸಲಾಗಿದ್ದು ರಥಗಳು ಕಂಗೊಳಿಸುತ್ತಿವೆ.

ಆಷಾಢ ಪೌರ್ಣಿಮೆಯ ದಿನವಾದ ಗುರುವಾರ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 12.15ರೊಳಗೆ ಸಲ್ಲುವ ಪೂರ್ವಾಷಢ ನಕ್ಷತ್ರ ಕನ್ಯಾಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ. ಮೈಸೂರು ಅರಸರ ಪಂಚಲೋಹದ ವಿಗ್ರಹಗಳನ್ನು ತೇರಿನ ಅಭಿಮುಖವಾಗಿ ಇರಿಸಿ ಮೊದಲ ಪೂಜೆಯ ಸಂಪ್ರದಾಯ ನೆರವೇರಿದ ಬಳಿಕ ಕೋಮುವಾರು ಮುಖಂಡರು ಪೂಜೆ ಸಲ್ಲಿಸಲಿದ್ದಾರೆ. ನಂತರ ಸಹಸ್ರಾರು ಭಕ್ತರ ಜಯಘೋಷಗಳ ನಡುವೆ ರಥ ಮುಂದೆ ಸಾಗಲಿದೆ.

ADVERTISEMENT

ಗಣಪತಿ, ಚಂಡಿಕೇಶ್ವರನ ಉತ್ಸವ ಮೂರ್ತಿಗಳನ್ನೊತ್ತ ಚಿಕ್ಕ ರಥ ಮುಂದೆ ಸಾಗಿದರೆ, ಚಾಮರಾಜೇಶ್ವರನ ದೊಡ್ಡ ರಥ ಮಧ್ಯೆ ಇರಲಿದೆ. ಹಿಂಭಾಗ ಕೆಂಪನಂಜಾಭಾ (ಪಾರ್ವತಿ) ದೇವಿನ ರಥ ಸಾಗಲಿದೆ. ತೇರು ನೋಡಲು ಸಹಸ್ರಾರು ಭಕ್ತರು ಸೇರಲಿದ್ದು ರಸ್ತೆಯ ಇಕ್ಕೆಲ, ಕಟ್ಟಡಗಳ ಮೇಲ್ಭಾಗ ತುಂಬಿ ತುಳಕಲಿವೆ. ರಥ ಸಾಗುವ ಬೀದಿಗಳನ್ನು ಸ್ವಚ್ಛಗೊಳಿಸಲಾಗಿದ್ದು ಅಲಂಕಾರ ಮಾಡಲಾಗಿದೆ.

ರಥೋತ್ಸವ ಪೂರ್ವಭಾವಿಯಾಗಿ ಅಂಕುರಾರ್ಪಣೆ, ಧ್ವಜಾರೋಹಣ ಪೂರ್ವಕ ಭೇರಿ ತಾಡನ, ಶಿಬಿಕಾರೋಹಣೋತ್ಸವ, ಚಂದ್ರಮಂಡಲಾ ರೋಹಣೋತ್ಸವ, ಪುಷ್ಪಮಂಟಪಾರೋ ಹಣೋತ್ಸವ, ವೃಷಭಾರೋ ಹಣೋತ್ಸವ, ವಸಂತೋತ್ಸವ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ಈಗಾಗಲೇ ಪೂರ್ಣಗೊಂಡಿವೆ. 

ಗುರುವಾರ ಚೂರ್ಣೋತ್ಸವ ನಡೆಯಲಿದ್ದು ಬಲಿಪ್ರದಾನ ಮಾಡುವ ಅನ್ನದ ಜೊತೆಗೆ ಮೊಳಕೆ ಕಾಳುಗಳನ್ನು ಬೆರೆಸಿ ರಥ ಸಾಗುವ ರಸ್ತೆಯ ಇಕ್ಕೆಗಳಲ್ಲಿ ಹಾಕಲಾಗುತ್ತದೆ.

ಶಾಸಕರ ಭೇಟಿ: ಶಾಸಕ ಸಿ.ಪುಟ್ಟರಂಗಶೆಟ್ಟಿ ಬುಧವಾರ ದೇವಾಲಯಕ್ಕೆ ಭೇಟಿ ನೀಡಿ ರಥೋತ್ಸವದ ಅಂತಿಮ ಹಂತದ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿದರು. ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದು ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅಧಿಕಾರಿಗಳಿಗೆ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ಸೂಚಿಸಿದರು.

ಪೂರ್ವಾಷಢ ನಕ್ಷತ್ರ, ಕನ್ಯಾಲಗ್ನದಲ್ಲಿ ರಥೋತ್ಸವಕ್ಕೆ ಚಾಲನೆ | ಕೋಮುವಾರು ಮುಖಂಡರಿಂದ ದೇವರಿಗೆ ವಿಶೇಷ ಪೂಜೆ | ರಥೋತ್ಸವದಲ್ಲಿ ಭಾಗವಹಿಸಲಿದ್ದಾರೆ ನವದಂಪತಿಗಳು

ಆಷಾಢ ಮಾಸದ ತೇರು

ಆಷಾಢ ಮಾಸದಲ್ಲಿ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನ ಉದ್ಘಾಟನೆ ಆಗಿರುವುದರಿಂದ ಆಷಾಢದಲ್ಲಿಯೇ ರಥೋತ್ಸವ ನಡೆಯುವುದು ಸಂಪ್ರದಾಯ. ಮೈಸೂರು ಮಹಾರಾಜರ ಜನ್ಮನಕ್ಷತ್ರವೂ ಪೂರ್ವಾಷಢ ಆಗಿರುವುದರಿಂದ ಈ ಮಾಸವನ್ನು ಶ್ರೇಷ್ಠ ಎಂದು ಭಾವಿಸಲಾಗಿದೆ. ಜ್ಯೇಷ್ಠ ಮಾಸದಲ್ಲಿ ವಿವಾಹವಾಗಿ ಆಷಾಢ ಮಾಸದಲ್ಲಿ ಪ್ರತ್ಯೇಕಗೊಳ್ಳುವ ನವದಂಪತಿಗಳು ಚಾಮರಾಜೇಶ್ವರನ ರಥದಲ್ಲಿ ಒಂದಾಗುವುದನ್ನು ಕಾಣಬಹುದು. ಜೋಡಿಗಳು ಒಬ್ಬರನ್ನೊಬ್ಬರ ಕೈಹಿಡಿದು ರಥಕ್ಕೆ ಹಣ್ಣು ಜವನ ತೂರುವ ಹರಕೆ ಕಟ್ಟಿಕೊಳ್ಳುವ ದೃಶ್ಯಗಳು ಗಮನ ಸೆಳೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.