ADVERTISEMENT

ಚಾಮರಾಜನಗರ ದಸರಾ ಆಚರಣೆಗೆ ಸರ್ಕಾರಕ್ಕೆ ಒಕ್ಕೊರಲ ಆಗ್ರಹ

ನೆಲದ ಅಸ್ಮಿತೆ ಸಾಂಸ್ಕೃತಿಕ ಹಿರಿಮೆ ಉಳಿಯಲಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 4:22 IST
Last Updated 14 ಜುಲೈ 2025, 4:22 IST
ಚಾಮರಾಜನಗರ ದಸರಾ ಮುಖ್ಯ ಸ್ವಾಗತ ವೇದಿಕೆ (ಸಂಗ್ರಹ ಚಿತ್ರ)
ಚಾಮರಾಜನಗರ ದಸರಾ ಮುಖ್ಯ ಸ್ವಾಗತ ವೇದಿಕೆ (ಸಂಗ್ರಹ ಚಿತ್ರ)   

ಚಾಮರಾಜನಗರ: 2013ರಿಂದ ಆಚರಿಸಿಕೊಂಡು ಬಂದಿರುವ ಚಾಮರಾಜನಗರ ದಸರಾ ಉತ್ಸವಕ್ಕೆ ಈ ಬಾರಿ ಆತಂಕದ ಕಾರ್ಮೋಡ ಕವಿದಿದೆ. ‘ಚಾಮರಾಜನಗರದಲ್ಲಿ ಈ ಬಾರಿ ದಸರಾ ಉತ್ಸವ ನಡೆಸುವುದಿಲ್ಲ ಇಲ್ಲ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಜಿಲ್ಲೆಯ ಜನರಿಗೆ ಹಾಗೂ ಜಾನಪದ ಕಲಾವಿದರಿಗೆ ನೋವುಂಟು ಮಾಡಿದೆ.

ಅವಿಭಜಿತ ಮೈಸೂರು ಜಿಲ್ಲೆಯಿಂದ ಬೇರ್ಪಟ್ಟು ಚಾಮರಾಜನಗರ ಪ್ರತ್ಯೇಕ ಜಿಲ್ಲೆಯಾಗಿ ಎರಡೂವರೆ ದಶಕಗಳು ಕಳೆದರೂ ಇಂದಿಗೂ ಸಾಂಸ್ಕೃತಿಕ ನಗರಿಯೊಂದಿಗಿನ ಭಾವನಾತ್ಮಕ ಸಂಬಂಧಗಳ ಕೊಂಡಿ ಕಳಚಿಲ್ಲ. ಶತಮಾನಗಳಿಂದಲೂ ಮೈಸೂರು ಅರಸರ ಜೊತೆಗೆ ಬಾಂಧವ್ಯ ಗಟ್ಟಿಯಾಗಿ ಉಳಿದುಕೊಂಡಿದೆ. ಹೀಗಿರುವಾಗ ಮೈಸೂರು ಅರಸರಿಗೂ ಚಾಮರಾಜನಗರಕ್ಕೂ ಸಂಬಂಧವಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಈ ನೆಲದ ಅಸ್ಮಿತೆಯಾಗಿ ಪರಿಗಣಿಸಿರುವ ದಸರಾ ಉತ್ಸವವನ್ನು ನಿಲ್ಲಿಸದೆ ಅದ್ಧೂರಿಯಾಗಿ ಆಚರಿಸಲು ಕ್ರಮಕೈಗೊಳ್ಳಬೇಕು. ನಶಿಸುತ್ತಿರುವ ಜನಪದ ಕಲೆಗಳ ಉಳಿವಿಗೆ, ಬೆಳೆವಿಗೆ ದಸರಾ ಉತ್ಸವ ವೇದಿಕೆಯಾಗಬೇಕು, ಬಡ ಜನಪದ ಕಲಾವಿದರಿಗೆ ಆರ್ಥಿಕ ಚೈತನ್ಯ ತುಂಬಬೇಕು ಎಂಬ ಒಕ್ಕೊರಲ ಆಗ್ರಹ ಕೇಳಿ ಬಂದಿದೆ.

ADVERTISEMENT

ಈಗಾಗಲೇ ಜಿಲ್ಲಾ ಕಲಾವಿದರ ಒಕ್ಕೂಟ, ಕನ್ನಡಪರ ಸಂಘಟನೆಗಲು ದಸರಾ ಪರವಾಗಿ ದನಿ ಎತ್ತಿದ್ದು ಪ್ರತಿಭಟನೆ ನಡೆಸಿ ಸರ್ಕಾರದ ನಿರ್ಧಾರವನ್ನು ಖಂಡಿಸಿವೆ. ದಸರಾ ಉತ್ಸವ ಆಚರಣೆಗೆ ಕ್ರಮ ಕೈಗೊಳ್ಳದಿದ್ದರೆ ಪರ್ಯಾಯ ದಸರಾ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದರೂ ಸರ್ಕಾರ ಸ್ಪಂದನೆ ನೀಡದಿರುವುದರ ವಿರುದ್ಧ ಆಕ್ರೋಶ ಮಡುಗಟ್ಟುತ್ತಿದೆ.

ದಸರಾ ಮಹತ್ವ: 2007ರಿಂದ ನಡೆದುಕೊಂಡು ಬಂದಿದ್ದ ‘ಗ್ರಾಮೀಣ ದಸರಾ’ 2013ರಲ್ಲಿ ಚಾಮರಾಜನಗರ ಜಿಲ್ಲಾ ದಸರಾ ಉತ್ಸವವಾಗಿ ಬದಲಾಯಿತು. ಅಂದಿನ ಸಚಿವರಾಗಿದ್ದ ಎಚ್‌.ಎಸ್‌.ಮಹದೇವ ಪ್ರಸಾದ್, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರ ಕಾಳಜಿಯ ಫಲವಾಗಿ ದಸರಾ ಉತ್ಸವ ಆರಂಭವಾಯಿತು. ಪ್ರಸ್ತುತ ಅಪಸ್ವರ ಎತ್ತಿರುವ ಸಿದ್ದರಾಮಯ್ಯ ಅವರೇ ಜಿಲ್ಲೆಯಲ್ಲಿ ದಸರಾ ಉತ್ಸವಕ್ಕೆ ಹಸಿರು ನಿಶಾನೆ ತೋರಿದ್ದರು.

ಪ್ರವಾಹ, ಕೋವಿಡ್ ಸಂದರ್ಭ ಹೊರತುಪಡಿಸಿ ಇಲ್ಲಿಯವರೆಗೂ ಚಾಮರಾಜನಗರ ದಸರಾ ಅಚ್ಚುಕಟ್ಟಾಗಿ ನಡೆದುಕೊಂಡು ಬಂದಿದ್ದು ಜಿಲ್ಲೆಯ ಜನರ ಮನಗೆದ್ದಿದೆ. ಹೀಗಿರುವಾಗ ಏಕಾಏಕಿ ದಸರಾ ಉತ್ಸವಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಕಲಾವಿದರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅರಸೊಂದಿಗೆ ನಂಟು: ಚಾಮರಾಜ ಒಡೆಯರ್ 1766ರಲ್ಲಿ ಚಾಮರಾಜನಗರದಲ್ಲಿ ಜನಿಸಿದ್ದು ಅವರ ಜನನ ಮಂಟಪವನ್ನು ನಗರದಲ್ಲಿ ಕಾಣಬಹುದು. ಮುಮ್ಮಡಿ ಕೃಷ್ಣರಾಜ ಒಡೆಯರ್ ತಮ್ಮ ತಂದೆ ಚಾಮರಾಜ ಒಡೆಯರ್ ನೆನಪಿಗೆ ಹಿಂದೆ ಅರಿಕುಠಾರವಾಗಿದ್ದ ಪ್ರದೇಶವನ್ನು ಚಾಮರಾಜನಗರ ಎಂದು ನಾಮಕರಣ ಮಾಡಿದ್ದಾರೆ.

1926ರಲ್ಲಿ ಮೈಸೂರು ಅರಸರು ಚಾಮರಾಜೇಶ್ವರ ದೇವಸ್ಥಾನ ಸೇರಿದಂತೆ ಜಿಲ್ಲೆಯಾದ್ಯಂತ ಕೆರೆ ಕಟ್ಟೆಗಳನ್ನು ನಿರ್ಮಾಣ ಮಾಡಿದ್ದಾರೆ. ಜಿಲ್ಲೆಯ ಉಮ್ಮತ್ತೂರು, ಸತ್ತೇಗಾಲ, ತೆರಕಣಾಂಬಿ, ಯಳಂದೂರು ಪ್ರದೇಶಗಳಲ್ಲಿ ಅರಸರು ಆಳ್ವಿಕೆ ನಡೆಸಿರುವ ಕುರುಹುಗಳು ಇವೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಂಜನಗೂಡಿನಿಂದ ಚಾಮರಾಜನಗರದವರೆಗೂ ರೈಲುಮಾರ್ಗ ವಿಸ್ತರಣೆ ನಡೆದಿದೆ. ಜೊತೆಗೆ ಚಾಮರಾಜನಗರ ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿರುವುದಕ್ಕೆ ಹತ್ತಾರು ಪುರಾವೆಗಳು ಇವೆ ಎನ್ನುತ್ತಾರೆ ಜನಪದ ಸಾಹಿತಿ ಬಿಸಲವಾಡಿ ಸೋಮಶೇಖರ್.

₹ 80 ಲಕ್ಷ ಗೌರವ ಸಂಭಾವನೆ: ಜಿಲ್ಲಾ ದಸರಾ ಉತ್ಸವ ಮನರಂಜನೆ ಮಾತ್ರವಲ್ಲ ಬಡ ಕಲಾವಿದರ ಕಲಾ ಪ್ರದರ್ಶನಕ್ಕೆ ವೇದಿಕೆ ಒದಗಿಸಿಕೊಡಲಿದೆ. ಕಳೆದ ವರ್ಷ ಅ.7ರಿಂದ 9ರವರೆಗೆ ನಡೆದ ದಸರಾ ಉತ್ಸವದಲ್ಲಿ 6,200 ಕಲಾವಿದರು ಭಾಗವಹಿಸಿದ್ದು ₹ 80 ಲಕ್ಷ ಗೌರವ ಸಂಭಾವನೆ ನೀಡಲಾಗಿದೆ.

ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರ, ಜೆ.ಎಚ್‌.ಪಟೇಲ್ ಸಭಾಂಗಣ, ಚಾಮರಾಜೇಶ್ವರ ದೇವಸ್ಥಾನದ ಮುಖ್ಯವೇದಿಕೆಯಲ್ಲಿ ಮೂರು ದಿನ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಜನಮನಸೂರೆಗೊಂಡಿದ್ದವು. ಬಹುತೇಕ ಜಾನಪದ ಕಲಾ ಪ್ರಕಾರಗಳ ಪ್ರದರ್ಶನಕ್ಕೆ ಅವಕಾಶ ದೊರೆತಿತ್ತು.

ಜನಪದ ಕಲೆಗಳ ತವರಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಸಾವಿರಕ್ಕೂ ಹೆಚ್ಚು ಜನಪದ ಕಲಾವಿದರು ಇದ್ದಾರೆ. ವರ್ಷಕ್ಕೊಮ್ಮೆ ನಡೆಯುವ ದಸರಾ ಉತ್ಸವದಲ್ಲಿ ಕಲಾವಿದರ ಮನದುಂಬಿ ಪ್ರದರ್ಶನ ನೀಡುತ್ತಾರೆ. ಜನಮಾನಸದಿಂದ ಕಣ್ಮರೆಯಾಗುತ್ತಿರುವ ಜನಪದ ಕಲಾಪ್ರಕಾರಗಳನ್ನೂ ಅಂದು ಕಣ್ತುಂಬಿಕೊಳ್ಳಬಹುದು. ಉತ್ಸವದ ಮೂರು ದಿನ ಜನಪದ ಲೋಕವೇ ಸೃಷ್ಟಿಯಾದಂತಹ ಅನುಭವವಾಗುತ್ತದೆ ಎನ್ನುತ್ತಾರೆ ಕಲಾವಿದರು.

ವಿಶ್ವವಿಖ್ಯಾತ ಮೈಸೂರು ದಸರಾ ಮೈಸೂರಿಗಷ್ಟೆ ಸೀಮಿತವಾಗಿರದೆ ಜಿಲ್ಲೆಯಲ್ಲಿಯೂ ವಿಶಿಷ್ಟವಾಗಿ ಸಾಂಸ್ಕೃತಿಕ ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಮೈಸೂರಿಗೆ ಹೋಗಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆ ಮಾಡಲು ಸಾಧ್ಯವಾಗದವರು ಚಾಮರಾಜನಗರ ದಸರಾ  ಉತ್ಸವ ಕಣ್ತುಂಬಿಕೊಂಡು ತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ.

ಹೀಗಿರುವಾಗ ಏಕಾಏಕಿ ದಸರಾ ಸ್ಥಗಿತ ಖಂಡನೀಯ. ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡಿ ಪ್ರತಿವರ್ಷದಂತೆ ಈ ಬಾರಿಯೂ ಅದ್ದೂರಿ ದಸರಾ ಆಚರಣೆಗೆ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಶಾಸಕರು, ಉಸ್ತುವಾರಿ ಸಚಿವರು ಸ್ವಂತ ಹಣದಿಂದ ದಸರಾ ಆಯೋಜಿಸಿ ಜಿಲ್ಲೆಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕು ಎಂದು ಜಿಲ್ಲಾ ಜನ ಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ ರಾಮಸಮುದ್ರ ಸುರೇಶ್ ಒತ್ತಾಯಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಚಾರಿತ್ರಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಇಂದಿಗೂ ಮೈಸೂರು ಭಾಗವಾಗಿದ್ದು ಇಲ್ಲಿ ದಸರಾ ಆಯೋಜನೆ ಅರ್ಥಪೂರ್ಣ. 2013ರಲ್ಲಿ ದಸರಾ ಆರಂಭಿಸಿದ್ದು ಅಂದಿನ ಹಾಗೂ ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ. ಮೈಸೂರು ದಸರಾದಲ್ಲಿ ಅವಕಾಶ ವಂಚಿತರಾಗುವ ಸಾಹಿತ್ಯ, ಕಲೆ, ಕ್ರೀಡೆ ಹಾಗೂ ಜನಪದ ಕ್ಷೇತ್ರಗಳ ಪ್ರತಿಭೆಗಳಿಗೆ ಪ್ರಾದೇಶಿಕ ದಸರಾ ಕಾರ್ಯಕ್ರಮಗಳಲ್ಲಿ ಅವಕಾಶ ದೊರೆಯುತ್ತದೆ. ಇದು ಜಿಲ್ಲೆಯ ಅಲಕ್ಷಿತ, ಉದಯೋನ್ಮುಖ ಕಲಾವಿದರನ್ನು ಪ್ರೋತ್ಸಾಹಿಸಿದಂತಾಗುತ್ತದೆ ಎನ್ನುತ್ತಾರೆ ಸಂಸ್ಕೃತಿ ಚಿಂತಕರಾದ ಮಹಾದೇವ ಶಂಕನಪುರ.

ನಿರ್ವಹಣೆ: ಬಾಲಚಂದ್ರ ಎಚ್‌.

ಪೂರಕ ಮಾಹಿತಿ: ಅವಿನ್ ಪ್ರಕಾಶ್‌ ವಿ, ಬಸವರಾಜು ಬಿ, ನಾ.ಮಂಜುನಾಥಸ್ವಾಮಿ, ಮಲ್ಲೇಶ, ಮಹದೇವ್ ಹೆಗ್ಗವಾಡಿಪುರ

ದಸರಾ ಅಂಗವಾಗಿ ಜಿಲ್ಲಾಡಳಿತ ಭವನಕ್ಕೆ ಹಿಂದೆ ಮಾಡಿದ್ದ ವಿದ್ಯುತ್‌ ದೀಪಾಲಂಕಾರ
ದೊಡ್ಡಗವಿ ಬಸಪ್ಪ
ಮಹದೇವ್ ಶಂಕನಪುರ
ರಾಮಸಮುದ್ರ ಸುರೇಶ್‌
ಅಬ್ದುಲ್ ಮಲ್ಲಿಕ್
ಕೈಲಾಸ ಮೂರ್ತಿ
ಬಾಳಗುಣಸೆ ಮಂಜುನಾಥ್‌
ಉಮ್ಮತ್ತೂರು ಬಸವರಾಜು
ಅನಂತ್ ಯಳಂದೂರು
ಕೆ.ವೆಂಕಟೇಶ್ ಜಿಲ್ಲಾ ಉಸ್ತುವಾರಿ ಸಚಿವ

Quote - ಚಾಮರಾಜನಗರದಲ್ಲಿ ದಸರಾ ಉತ್ಸವಕ್ಕೆ ಅನುಮತಿ ಕೋರಿ ಸ್ಥಳೀಯ ಶಾಸಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಕೆ.ವೆಂಕಟೇಶ್ ಜಿಲ್ಲಾ ಉಸ್ತುವಾರಿ ಸಚಿವ

ಯಾರು ಏನಂತಾರೆ ?

ನಿಲ್ಲಿಸಿ ಎನ್ನುವ ಅಧಿಕಾರ ಯಾರಿಗೂ ಇಲ್ಲ ಚಾಮರಾಜನಗರ ದಸರಾ ನಮ್ಮೂರ ದೊಡ್ಡ ಹಬ್ಬವಿದ್ದಂತೆ. ಉತ್ಸವ ನಿಲ್ಲಿಸಿ ಎಂದು ಹೇಳುವ ಅಧಿಕಾರ ಯಾರಿಗೂ ಇಲ್ಲ. ಭಾವನಾತ್ಮಕ ವಿಚಾರಗಳಲ್ಲಿ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು. ಉತ್ಸವ ನಿಲ್ಲಿಸುವ ಮಾತಿನ ಬದಲಾಗಿ ಅದ್ಧೂರಿಯಾಗಿ ನಡೆಸುವ ನಿರ್ಧಾರ ಮಾಡಬೇಕು. ಜಿಲ್ಲೆಯ ಜನರು ಸರ್ಕಾರದ ಮೇಲಿಟ್ಟಿರುವ ಪ್ರೀತಿಗೆ ಗೌರವ ಕೊಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದು.
ದೊಡ್ಡಗವಿ ಬಸಪ್ಪ ಜನಪದ ಕಲಾವಿದ
ಅಸ್ಮಿತೆಗೆ ಧಕ್ಕೆ ತರಬಾರದು ಮಹದೇಶ್ವರ ಮಂಟೇಸ್ವಾಮಿ ನಡೆದಾಡಿದ ಪವಿತ್ರ ನೆಲದ ಅಸ್ಮಿತೆಗೆ ಧಕ್ಕೆ ತರಬಾರದು. ಡಾ. ರಾಜಕುಮಾರ್ ಪುನೀತ್ ರಾಜಕುಮಾರ್ ಅವರಂತಹ ನಟರ ಕರ್ಮಭೂಮಿಯ ಸಾಂಸ್ಕೃತಿಕ ಹಿರಿಮೆ ಎತ್ತಿ ಹಿಡಿಯಬೇಕು. ಚಾಮರಾಜನಗರ ದಸರಾ ನಿಲ್ಲಿಸಿದರೆ ಸಿದ್ದರಾಮಯ್ಯ ಅವರ ಸಾಂಸ್ಕೃತಿಕ ಬದ್ಧತೆಗೆ ಕಪ್ಪು ಚುಕ್ಕೆ ಆಗಬಹುದು.
ಮಹಾದೇವ ಶಂಕನಪುರ ಸಂಸ್ಕೃತಿ ಚಿಂತಕ
ಜನಪ್ರತಿನಿಧಿಗಳಿಗೆ ಘೇರಾವ್‌ ಜಿಲ್ಲೆಯಲ್ಲಿ ಅದ್ದೂರಿಯಾಗಿ ದಸರಾ ಆಯೋಜಿಸದಿದ್ದರೆ ಚಾಮರಾಜನಗರಕ್ಕೆ ಬರುವ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಬೇಕಾಗುತ್ತದೆ. ಸ್ಥಳೀಯ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೈತಿಕತೆ ಇದ್ದರೆ ಸ್ಥಳೀಯ ಕಲಾವಿದರಿಗೆ ಅನ್ಯಾಯವಾಗದಂತೆ ದಸರಾ ಆಯೋಜಿಸಬೇಕು. 
ರಾಮಸಮುದ್ರ ಸುರೇಶ್‌ ಜಿಲ್ಲಾ ಜನ ಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾಧ್ಯಕ್ಷ
  ಜಿಲ್ಲೆಗೆ ಸಲ್ಲುವ ಗೌರವ ಜಿಲ್ಲೆಯಲ್ಲಿ ದಸರಾ ನಡೆಯುವುದು ಜಿಲ್ಲೆಯ ಪಾಲಿಗೆ ಸಲ್ಲುವ ಗೌರವವಿದ್ದಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದನ್ನರಿತು ಈ ಬಾರಿಯೂ ದಸರಾ ಆಚರಣೆಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ದಸರಾ ಉತ್ಸವ ನಡೆದರೆ ಜನಪದ ಕಲಾವಿದರ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆ ಸಿಕ್ಕಂತಾಗಿದೆ.
ಅಬ್ದುಲ್ ಮಲೀಕ್ ಕನ್ನಡ ಕಾವಲು ಪಡೆ ತಾಲ್ಲೂಕು ಅಧ್ಯಕ್ಷ
‘ಕಲಾಸೇವೆಗೆ ಅವಕಾಶ ಕೊಡಿ’ ದಶಕಗಳಿಂದಲೂ ಜನಪದ ಕಲೆಯನ್ನೇ ನಂಬಿ ಬದುಕುತ್ತಿದ್ದೇವೆ. ಕಲಾ ವೃತ್ತಿ ಬಿಟ್ಟರೆ ಬೇರೆ ವೃತ್ತಿ ಗೊತ್ತಿಲ್ಲ. ದೇವಸ್ಥಾನಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಹಳ್ಳಿ ಹಳ್ಳಿಗಳಿಗೂ ಹೋಗಿ ಕಲೆ ಪ್ರದರ್ಶನ ಮಾಡುತ್ತಾ ಬಂದಿದ್ದೇವೆ. ಜಿಲ್ಲೆಯಲ್ಲಿ ದಸರಾ ಉತ್ಸವ ನಡೆದರೆ ಕಲಾ ಪ್ರದರ್ಶನಕ್ಕೆ ವೇದಿಕೆ ಸಿಗಲಿದೆ ಕಲಾವಿದರಿಗೆ ಬೆಲೆ ಸಿಗುತ್ತದೆ. ದಸರಾ ನಡೆಯದೆ ಹೋದರೆ ಕಲೆಗೆ ಬೆಲೆ ಇಲ್ಲದಂತಾಗುತ್ತದೆ. ಗ್ರಾಮೀಣ ದಸರವನ್ನಾದರೂ ಕಡ್ಡಾಯವಾಗಿ ಮಾಡಬೇಕು. ಇಲ್ಲದಿದ್ದರೆ ಕಲಾವಿದರ ಕಲೆಯ ಮೇಲೆ ಬರೆ ಎಳೆದಂತಾಗುತ್ತದೆ.
ಕೈಲಾಸ ಮೂರ್ತಿ ಜನಪದ ಕಲಾವಿದ ಕೊಳ್ಳೇಗಾಲ
ರಾಜವಂಶಸ್ಥರ ಆಳ್ವಿಕೆಯ ನೆಲ ಚಾಮರಾಜನಗರ ಜಿಲ್ಲೆ ಹಿಂದೆ ಮೈಸೂರು ಭಾಗವಾಗಿ ರಾಜವಂಶಸ್ಥರ ಆಳ್ವಿಕೆಯ ಪ್ರದೇಶವಾಗಿತ್ತು. ದಸರಾ ಮೈಸೂರು ಭಾಗಕ್ಕೆ ಮಾತ್ರವಲ್ಲ; ಚಾಮರಾಜನಗರ ಜಿಲ್ಲೆಯಲ್ಲೂ ಆಚರಣೆ ಮಾಡಲೇಬೇಕು. ಮೈಸೂರು ರಾಜ ಪರಂಪರೆಯ ಹಲವು ಕುರುಹುಗಳು ಇಂದಿಗೂ ಜಿಲ್ಲೆಯಲ್ಲಿವೆ. ಕಲಾವಿದರ ಸಂಖ್ಯೆ ಯತೇಚ್ಛವಾಗಿದೆ. ಕಲಾವಿದರನ್ನು ಬೆಳೆಸುವ ಗುರುತಿಸುವ ದಸರಾ ನಿಲ್ಲಿಸಬಾರದು. ಈ ವರ್ಷ ಮತ್ತಷ್ಟು ವಿಜೃಂಭಣೆಯಿಂದ ಮಾಡಬೇಕು.
ಬಾಳಗುಣಸೆ ಮಂಜುನಾಥ್ ಸಾಹಿತಿ
ಮುಖ್ಯಮಂತ್ರಿ ಹೇಳಿಕೆ ಖಂಡನೀಯ ಚಾಮರಾಜನಗರದಲ್ಲಿ ಈ ಬಾರಿ ದಸರಾ ಉತ್ಸವ ಮಾಡಲಾಗುವುದಿಲ್ಲ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಸರಿಯಲ್ಲ. ಜಿಲ್ಲೆಯ ಕಲಾವಿದರು ಮೈಸೂರು ದಸರಾ ವೇದಿಕೆಯಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ಸಿಗುವುದಿಲ್ಲ. ಜಯಚಾಮರಾಜೇಂದ್ರ ಒಡೆಯರ್ ಜನಿಸಿರುವ ಸ್ಥಳದಲ್ಲಿ ದಸರಾ ಮಹೋತ್ಸವ ನಡೆಸಲೇಬೇಕು.
ಉಮ್ಮತ್ತೂರು ಬಸವರಾಜು ಜನಪದ ಕಲಾವಿದ
ಹಳೆ ಮೈಸೂರು ಭಾಗದ ಅಸ್ಮಿತೆ ಚಾಮರಾಜನಗರ ಹಳೆ ಮೈಸೂರು ಭಾಗದ ಸಾಂಸ್ಕೃತಿಕ ಇತಿಹಾಸ ಒಳಗೊಂಡ ಜಿಲ್ಲೆಯಾಗಿದ್ದು ಮೈಸೂರು ದಸರಾ ಜೊತೆ ನಂಟು ಹೊಂದಿದೆ. ಪ್ರತಿ ವರ್ಷ ಜಿಲ್ಲಾ ಕೇಂದ್ರದಲ್ಲಿ ನಾಡು ನುಡಿ ಸಂಸ್ಕೃತಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ಇದರೊಂದಿಗೆ ಜಿಲ್ಲೆಯ ಕಲಾವಿದರು ಕಲೆಗಳನ್ನು ಪ್ರದರ್ಶಿಸುತ್ತ ಸಾಂಪ್ರದಾಯಿಕ ದಸರಾ ವೈಭವವನ್ನು ಹೆಚ್ಚಿಸಿದ್ದಾರೆ. ಪ್ರತಿ ವರ್ಷದಂತೆ ಜಿಲ್ಲೆಯಲ್ಲಿ ದಸರಾ ನಡೆಸಲು ಸರ್ಕಾರ ಚಿತ್ತ ಹರಿಸಲಿ
ಅನಂತ್ ಚಿತ್ರ ಕಲಾವಿದ ಮದ್ದೂರು ಯಳಂದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.