ಚಾಮರಾಜನಗರ: ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಸಾರ್ವಜನಿಕರ ಅಸಡ್ಡೆ ಹಾಗೂ ಸ್ಥಳೀಯ ಸಂಸ್ಥೆಗಳ ನಿರ್ಲಕ್ಷ್ಯದಿಂದ ಜಿಲ್ಲೆಯಾದ್ಯಂತ ತ್ಯಾಜ್ಯದ ಹಾವಳಿ ಹೆಚ್ಚಾಗಿದೆ. ನಗರ, ಪಟ್ಟಣಗಳಲ್ಲಿರುವ ಖಾಲಿ ನಿವೇಶನಗಳು, ರಸ್ತೆಗಳ ಇಕ್ಕೆಲ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹರಡಿಕೊಂಡಿದೆ.
ಎಲ್ಲೆಂದರಲ್ಲಿ ಅಶುಚಿತ್ವ ಕಾಣುತ್ತಿದ್ದು ಹಂದಿ, ನಾಯಿ, ಬಿಡಾಡಿ ದನಗಳ ಕಿರಿಕಿರಿ ಹೆಚ್ಚಾಗಿದೆ. ಹಸಿ ತ್ಯಾಜ್ಯ ಕಂಡ ಕೂಡಲೇ ಧಾವಂತದಲ್ಲಿ ರಸ್ತೆಗೆ ಎಳೆದು ತಂದು ಬಿಸಾಡುತ್ತಿದ್ದು ಪರಿಸರ ಗಬ್ಬು ನಾರುತ್ತಿವೆ. ತ್ಯಾಜ್ಯಗಳು ಕೊಳೆತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಬದಲಾಗಿದ್ದು ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ.
ತ್ಯಾಜ್ಯದ ಸಮಸ್ಯೆ ಹೆಚ್ಚಾಗಿರುವ ಸ್ಥಳಗಳಲ್ಲಿ ವಾಹನ ಸವಾರರು, ಪಾದಚಾರಿಗಳು ಕಿರಿಕಿರಿ ಅನುಭವಿಸುತ್ತಿದ್ದಾರೆ. ರಸ್ತೆಯಲ್ಲಿ ವಾಹನಗಳು ಸಾಗುವಾಗ ಏಕಾಏಕಿ ಅಡ್ಡಲಾಗಿ ಬರುತ್ತಿರುವ ನಾಯಿಗಳು ಹಾಗೂ ಹಂದಿಗಳು ಅಪಘಾತಗಳಿಗೆ ಕಾರಣವಾಗುತ್ತಿವೆ. ಸವಾರರು ಬಿದ್ದು ಗಂಭೀರವಾಗಿ ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.
ಚಾಮರಾಜನಗರದಲ್ಲಿ ಕ್ರೀಡಾಂಗಣದಿಂದ ರಿಂಗ್ ರೋಡ್‌ಗೆ ಸಂಪರ್ಕಿಸುವ ಕೂಡು ರಸ್ತೆಯಲ್ಲಿ ಕೊಳೆತ ಆಹಾರ ತಂದು ಸುರಿಯಲಾಗುತ್ತಿದ್ದು ಹಂದಿಗಳ ಸಂಖ್ಯೆ ಹೆಚ್ಚಾಗಿದೆ. ಸೋಮವಾರ ಪೇಟೆಯಿಂದ ಪಿಡಬ್ಲ್ಯುಡಿ ಕಾಲೇಜಿಗೆ ಸಂಪರ್ಕಿಸುವ ರಸ್ತೆ, ಜೋಗಿ ಕಾಲೋನಿಗಳಲ್ಲೂ ಹಂದಿಗಳ ಕಿರಿಕಿರಿ ಹೆಚ್ಚಾಗಿದ್ದು ಸ್ಥಳೀಯರು ಸಮಸ್ಯೆ ಅನುಭವಿಸುತ್ತಿದ್ದಾರೆ.
ನಗರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿಲ್ಲ. ಬಡಾವಣೆಗಳ ರಸ್ತೆಗಳ ಬದಿ, ಉದ್ಯಾನ, ಬಸ್ ನಿಲ್ದಾಣ, ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಕಣ್ಣಿಗೆ ರಾಚುತ್ತಿದೆ. ಮನೆಗಳಿಂದ ಕಸ ಸಂಗ್ರಹ ಮಾಡುವ ಪೌರ ಕಾರ್ಮಿಕರು ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ತ್ಯಾಜ್ಯದ ರಾಶಿ ತೆರವು ಮಾಡದ ಪರಿಣಾಮ ಅನೈರ್ಮಲ್ಯ ಹೆಚ್ಚಾಗಿದೆ.
ನಗರದ ಖಾಸಗಿ ಬಸ್ ನಿಲ್ದಾಣದ ಬಳಿ, ಗುಂಡ್ಲುಪೇಟೆ ಸರ್ಕಲ್, ವೀರಭದ್ರೇಶ್ವರ ದೇವಸ್ಥಾನದ ತಿರುವು, ಕುಲುಮೆ ರಸ್ತೆ, ಅಂಬೇಡ್ಕರ್ ಕಾಲೋನಿ, ಉಪ್ಪಾರ ಬಡಾವಣೆ ಸೇರಿದಂತೆ ಹಲವೆಡೆ ತ್ಯಾಜ್ಯದ ಸಮಸ್ಯೆ ಗಂಭೀರವಾಗಿದೆ.
ಕೊಳ್ಳೇಗಾಲ ನಗರದಲ್ಲಿ ಅನೈರ್ಮಲ್ಯ ಹೆಚ್ಚಾಗಿರುವ ಪರಿಣಾಮ ಹಂದಿ ಹಾಗೂ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ನಗರದ ರಸ್ತೆ ಹಾಗೂ ಬಡಾವಣೆಗಳಲ್ಲಿ ಹೋಗುವಾಗ ನಾಯಿಗಳು ಏಕಾಏಕಿ ದಾಳಿ ಮಾಡುತ್ತಿವೆ. ದ್ವಿಚಕ್ರ ವಾಹನಗಳಲ್ಲಿ ಬರುವವರನ್ನು ಅಟ್ಟಾಡಿಸಿಕೊಂಡು ಹೋಗುತ್ತಿದ್ದು ಅಪಾಘತಗಳು ಹೆಚ್ಚಾಗಿವೆ. ನಗರಸಭೆ ಬೀದಿನಾಯಿಗಳ ಕಿರಿಕಿರಿಗೆ ತಡೆಯೊಡ್ಡೆಬೇಕು, ನಗರದ ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಡಾವಣೆಗಳ ತಿರುವುಗಳಲ್ಲಿ ಕಸವನ್ನು ತಂದು ಸುರಿಯುತ್ತಿರುವುದರಿಂದ ಅದನ್ನು ತಿನ್ನಲು ಬರುವ ಹಂದಿಗಳು ರಸ್ತೆಗಳ ಮೇಲೆಲ್ಲ ಹರಡುತ್ತಿದ್ದು ಗಬ್ಬು ವಾಸನೆ ಬೀರುತ್ತಿದೆ. ರಸ್ತೆಯಲ್ಲಿ ನಾಗರಿಕರು ಮೂಗು ಮುಚ್ಚಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಹಂದಿಗಳು ಕೊಳಚೆ ನೀರಿನಲ್ಲಿ ಮುಳುಗಿ ಮನೆಯ ಕಾಂಪೌಂಡ್ ಗೋಡೆ ಹಾಗೂ ವಾಹನಗಳಿಗೆ ಬಂದು ಮೈಉಜ್ಜುತ್ತಿವೆ.
ರಸ್ತೆಯಲ್ಲಿ ನಡೆದುಹೋಗುವಾಗ ಮಕ್ಕಳು ಹಾಗೂ ವೃದ್ಧರ ಮೇಲೆ ಹಂದಿಗಳು ಎರಗುತ್ತಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ನಗರಸಭೆ ಹಂದಿಗಳನ್ನು ಹಿಡಿದು ಬೇರೆಡೆ ಸಾಗಿಸಬೇಕು. ಇಲ್ಲದಿದ್ದರೆ ನಗರಸಭೆಯ ಮುಂದೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಶಿವಕುಮಾರ ಸ್ವಾಮೀಜಿ ಬಡಾವಣೆಯ ನಿವಾಸಿ ಮಹದೇವಸ್ವಾಮಿ ತಿಳಿಸಿದರು.
ಗುಂಡ್ಲುಪೇಟೆ ಪಟ್ಟಣದಲ್ಲಿ ‘ನಮ್ಮ ನಡೆ ಗುಂಡ್ಲುಪೇಟೆ ಸ್ವಚ್ಛತೆ ಕಡೆಗೆ’ ಜಾಗೃತಿ ಅಭಿಯಾನ ನಡೆಯುತ್ತಿದ್ದರೆ ಮತ್ತೊಂದೆಡೆ ಪಟ್ಟಣದ ವಾರ್ಡ್‌ಗಳಲ್ಲಿ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಹರಡಿಕೊಂಡಿದೆ. ಶಿವಾನಂದ ವೃತ್ತದ ಬಳಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿಬಿದ್ದಿದ್ದು ಚಾಮರಾಜನಗರ ಕಡೆಯಿಂದ ಬರುವ ಸಾರ್ವಜನಿಕರಿಗೆ ಸ್ವಾಗತ ಕೋರುತ್ತಿದೆ. ಗಾಳಿ ಬಂದರೆ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ಬೈಕ್ ಸವಾರರ ಮೈಮೇಲೆಲ್ಲ ಬೀಳುತ್ತಿದೆ.
ಪುರಸಭೆ ಪಟ್ಟಣದಲ್ಲಿ ಸ್ವಚ್ಛತೆ ಕಡೆ ಹೆಚ್ಚಿನ ಗಮನ ಹರಿಸುತ್ತಿಲ್ಲ. ರಸ್ತೆಗಳಲ್ಲಿ ಕಸದ ರಾಶಿ ಹೆಚ್ಚಾಗಿ ಬಿಡಾಡಿ ದನಗಳು, ಜಾನುವಾರು ಹೆದ್ದಾರಿಯಲ್ಲಿ ಅಡ್ಡಲಾಗಿ ಮಲಗುತ್ತಿವೆ. ಬೀದಿ ದೀಪಗಳು ಸರಿಯಾಗಿ ಉರಿಯುತ್ತಿಲ್ಲ. ಒಳ ಚರಂಡಿಯ ಮ್ಯಾನ್ ಹೋಲ್‌ಗಳು ಕಟ್ಟಿಕೊಂಡು ತುಂಬಿದ್ದರೂ ಸರಿಪಡಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ನಿರ್ವಹಣೆ: ಬಾಲಚಂದ್ರ ಎಚ್.
ಪೂರಕ ಮಾಹಿತಿ: ಅವಿನ್ ಪ್ರಕಾಶ್ ವಿ, ನಾ.ಮಂಜುನಾಥಸ್ವಾಮಿ, ಮಲ್ಲೇಶ, ಮಹದೇವ್ ಹೆಗ್ಗವಾಡಿಪುರ
ಚಾಮರಾಜನಗರದ ಬ್ಲಾಕ್‌ಸ್ಪಾಟ್‌ಗಳಲ್ಲಿ ನಿಯಮಿತವಾಗಿ ಕಸ ವಿಲೇವಾರಿ ಮಾಡಿದರೂ ತಂದು ಸುರಿಯಲಾಗುತ್ತಿದೆ. ಸಮಸ್ಯೆ ಗಂಭಿರವಾಗಿರುವ ಕಡೆಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲು ನಿರ್ಧರಿಸಲಾಗಿದ್ದು ಸಿಕ್ಕಿಬಿದ್ದವರಿಗೆ ದಂಡ ವಿಧಿಸಲಾಗುವುದು. ನಗರದಲ್ಲಿ ಈಚೆಗೆ 800 ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ಮತ್ತಷ್ಟು ನಾಯಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಲು ಕ್ರಮ ಕೈಗೊಳ್ಳಲಾಗುವುದು.ಸುರೇಶ್ ನಗರಸಭೆ ಅಧ್ಯಕ್ಷ ಕೊಳ್ಳೇಗಾಲ
ನಗರಸಭೆ ವ್ಯಾಪ್ತಿಯ ಬಡಾವಣೆಗಳಲ್ಲಿ ಹಂದಿಗಳ ಹಾಗೂ ನಾಯಿಗಳ ಹಾವಳಿ ತಡೆಯುವ ಬಗ್ಗೆ ವಿಶೇಷ ಸಭೆ ನಡೆಸಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು. ರೇಖಾ ನಗರಸಭೆ ಅಧ್ಯಕ್ಷೆ ನಗರದ ಸೌಂದರ್ಯ ಹಾಳು ಹಂದಿಗಳು ನಮ್ಮ ಮನೆಯ ಕಾಂಪೌಂಡ್ ಸೌಂದರ್ಯವನ್ನು ಹಾಳು ಮಾಡುತ್ತಿದೆ . ಇದರ ಜೊತೆಗೆ ಕೊಳಚೆ ನೀರಿನಲ್ಲಿ ಬಂದು ಮನೆಯ ಮುಂದೆ ಕುಳಿತುಕೊಳ್ಳುತ್ತದೆ ಇದರಿಂದ ಸಾಂಕ್ರಾಮಿಕ ರೋಗಗಳು ಹರಡುತ್ತದೆ.ಶಿವಣ್ಣ ಕೊಳ್ಳೇಗಾಲ
ಗುಂಡ್ಲುಪೇಟೆ ರಾಜ್ಯದ ಕೊನೆಯ ತಾಲ್ಲೂಕಾಗಿದ್ದು ಕೇರಳ ಹಾಗೂ ತಮಿಳುನಾಡು ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿದೆ. ತಾಲ್ಲೂಕು ಮಾರ್ಗವಾಗಿ ಪ್ರತಿನಿತ್ಯ ಹೆಚ್ಚಿನ ಪ್ರವಾಸಿ ವಾಹನಗಳು ಹಾದುಹೋಗುತ್ತವೆ. ಆದ್ದರಿಂದ ಸ್ವಚ್ಚತೆ ಹೆಚ್ಚಿನ ಆದ್ಯತೆ ನೀಡಬೇಕು. ಮುನೀರ್ ಪಾಷಾ ತ್ಯಾಜ್ಯ ವಿಲೇವಾರಿಗೆ ಕ್ರಮ ಯಳಂದೂರು ಪಟ್ಟಣದಲ್ಲಿ ಹಂದಿ ಹಾವಳಿ ನಿಯಂತ್ರಣ ಮಾಡಲಾಗಿದೆ. ಮಳೆಗೂ ಮೊದಲು ಕಸ ತೆಗೆಯಲಾಗಿದೆ. ಪ್ರತಿದಿನ ಕಸ ತೆಗೆಯಲು ಪೌರ ಕಾರ್ಮಿಕರು ಶ್ರಮಿಸುತ್ತಿದ್ದಾರೆ.ಮಹೇಶ್ ಕುಮಾರ್. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ನೀಡಿ ನಾಯಿಗಳ ಹಾವಳಿ ಯಳಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಯಿಗಳ ಕಡಿತದಿಂದ ಸಾರ್ವಜನಿಕರು ಭೀತಿಯಲ್ಲಿದ್ದಾರೆ. ಶ್ವಾನಗಳ ಸಂಖ್ಯೆ ನಿಯಂತ್ರಣಕ್ಕೆ ಒತ್ತು ನೀಡಬೇಕು.ಶಾಂತರಾಜು ಎಸ್ ಬ್ಲಾಕ್ ಅಂಡ್ ವೈಟ್ ಫೌಂಡೇಷನ್ ಮುಖ್ಯಸ್ಥ
ಸಾರ್ವಜನಿಕ ಸ್ಥಳಗಳಲ್ಲಿ ಕಸ ಹೆಚ್ಚಾಗಿ ಶೇಖರಣೆಯಾಗುತ್ತಿದ್ದು ಪ್ರತಿದಿನ ಸ್ವಚ್ಛಗೊಳಿಸುವ ಮೂಲಕ ಶುಚಿತ್ವ ಕಾಪಾಡಬೇಕು. ಕಸ ವಿಲೇವಾರಿ ಮಾಡದೆ ಅನೈರ್ಮಲ್ಯದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.–ನಂದ ಯಡಿಯೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.