ADVERTISEMENT

ಚಾಮರಾಜನಗರ ಜಿಲ್ಲೆಯಾದ್ಯಂತ ಕ್ರಿಸ್‌ಮಸ್‌ ಸಡಗರ

ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ನೂರಾರು ಮಂದಿ ಭಾಗಿ, ಶುಭಾಶಯ ವಿನಿಮಯ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 16:32 IST
Last Updated 25 ಡಿಸೆಂಬರ್ 2019, 16:32 IST
ಚಾಮರಾಜನಗರದ ಸಂತ ಪೌಲರ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಬುಧವಾರ ತಡ ರಾತ್ರಿ ವಿಶೇಷ ಪ್ರಾರ್ಥನೆ ನಡೆಯಿತು
ಚಾಮರಾಜನಗರದ ಸಂತ ಪೌಲರ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಬುಧವಾರ ತಡ ರಾತ್ರಿ ವಿಶೇಷ ಪ್ರಾರ್ಥನೆ ನಡೆಯಿತು   

ಚಾಮರಾಜನಗರ: ಜಿಲ್ಲೆಯಾದ್ಯಂತ ಕ್ರಿಶ್ಚಿಯನ್‌ ಸಮುದಾಯದವರು ಬುಧವಾರ ಕ್ರಿಸ್‌ಮಸ್‌ ಅನ್ನು ಸಂಭ್ರಮ, ಸಡಗರದಿಂದ ಆಚರಿಸಿದರು.

ಮಂಗಳವಾರ ರಾತ್ರಿ 12 ಗಂಟೆಯ ನಂತರ, ಬುಧವಾರ ಬೆಳಿಗ್ಗೆ ಕ್ರಿಸ್‌ಮಸ್‌ ಅಂಗವಾಗಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಆಯಾ ಚರ್ಚ್‌ಗಳ ವ್ಯಾಪ್ತಿಯ ಕ್ರಿಶ್ಚಿಯನ್ನರು ಕುಟುಂಬ ಸದಸ್ಯರೊಂದಿಗೆ ತೆರಳಿ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

ಧರ್ಮಗುರುಗಳು ಏಸುಕ್ರಿಸ್ತನ ಗುಣಗಾನ ಮಾಡುತ್ತ, ಆತನ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಹಬ್ಬದ ಶುಭ ಸಂದೇಶವನ್ನು ಎಲ್ಲರಿಗೂ ಕೋರಿದರು. ಪ್ರಾರ್ಥನೆ, ಆರಾಧನೆ ಮುಗಿದ ನಂತರ ಎಲ್ಲರಿಗೂ ಕೇಕ್‌ ಹಾಗೂ ಸಿಹಿಯನ್ನು ಹಂಚಲಾಯಿತು.

ADVERTISEMENT

ಸ್ಥಳೀಯ ಶಾಸಕರು ಹಾಗೂ ವಿವಿಧ ರಾಜಕೀಯ ಮುಖಂಡರು, ಚರ್ಚ್‌ಗಳಿಗೆ ತೆರಳಿ, ಧರ್ಮಗುರುಗಳನ್ನು ಭೇಟಿಯಾಗಿ ಹಬ್ಬದ ಶುಭಾಶಯ ತಿಳಿಸಿದರು.

ಮನೆಗಳಲ್ಲೂ ಸಂಭ್ರಮ: ಕ್ರಿಶ್ಚಿಯನ್ನರ ಮನೆಗಳಲ್ಲೂ ಸಡಗರ ಮನೆ ಮಾಡಿತ್ತು. ಮಕ್ಕಳು, ಮಹಿಳೆಯರು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಮನೆಗೆ ಸ್ನೇಹಿತರು ಹಾಗೂ ಸಂಬಂಧಿಕರನ್ನು ಆಹ್ವಾನಿಸಿ ಅವರಿಗೆ ವಿಶೇಷ ಔತಣ ಸಿದ್ಧಪಡಿಸಿ ಬಡಿಸಿದರು.

ಕೊಳ್ಳೇಗಾಲ, ಹನೂರು ವರದಿ: ಚರ್ಚ್‌ಗಳಲ್ಲಿಮಂಗಳವಾರ ರಾತ್ರಿ ದಿವ್ಯ ಬಲಿಪೂಜೆ ನಡೆಯಿತು. ಮಧ್ಯರಾತ್ರಿ 12 ಗಂಟೆಗೆ ಆರಂಭವಾದ ಪ್ರಾರ್ಥನೆ ಮುಂಜಾನೆ ಮೂರು ಗಂಟೆಯವರೆಗೆ ನಡೆದವು. ಪ್ರಾರ್ಥನೆಯಲ್ಲಿ ಭಾಗವಹಿಸಿದ್ದವರು ಪರಸ್ಪರ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಕ್ರಿಶ್ಚಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿರುವಮಾರ್ಟಳ್ಳಿ ಭಾಗದಲ್ಲಿ ಈ ಬಾರಿ ಕ್ರಿಸ್‌ಮಸ್‌ ಅನ್ನುಸಂಭ್ರಮದಿಂದ ಆಚರಿಸಲಾಯಿತು. ಕಳೆದ ವರ್ಷ ಸುಳ್ವಾಡಿ ವಿಷಪ್ರಸಾದ ದುರಂತ ಸಂಭವಿಸಿದ್ದರಿಂದ ಈ ಭಾಗದಲ್ಲಿ ಹಬ್ಬ ಕಳೆಗುಂದಿತ್ತು. ಸರಳವಾಗಿ ಹಬ್ಬ ಆಚರಿಸುವ ಮೂಲಕ ದುರಂತದಲ್ಲಿ ಮಡಿದವರಿಗಾಗಿ ಕಂಬನಿ ಮಿಡಿದಿದ್ದರು. ಆದರೆ ಈ ಬಾರಿ ಪ್ರತಿ ಗ್ರಾಮದಲ್ಲೂ ಹಬ್ಬದ ಸಂಭ್ರಮ ಮೇಳೈಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.