ADVERTISEMENT

ಹನೂರು: ಮೊರಾರ್ಜಿ ಶಾಲೆಯಲ್ಲಿ ಅಶುಚಿತ್ವ ವಾತಾವರಣ

ಹನೂರು: ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿವ ಭೀತಿಯಲ್ಲಿ ಮಕ್ಕಳು: ಪೋಷಕರ ಆರೋಪ

ಬಿ.ಬಸವರಾಜು
Published 2 ಜನವರಿ 2023, 23:15 IST
Last Updated 2 ಜನವರಿ 2023, 23:15 IST
ಹನೂರಿನ ಆರ್.ಎಸ್.ದೊಡ್ಡಿ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶೌಚಾಲಯ ಬಾಗಿಲುಗಳು ಕಿತ್ತು ಬಂದಿರುವುದು
ಹನೂರಿನ ಆರ್.ಎಸ್.ದೊಡ್ಡಿ ಬಳಿಯಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶೌಚಾಲಯ ಬಾಗಿಲುಗಳು ಕಿತ್ತು ಬಂದಿರುವುದು   

ಹನೂರು: ಪಟ್ಟಣದ ಆರ್.ಎಸ್ ದೊಡ್ಡಿ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು ಮಕ್ಕಳು ಆಗಾಗ ಕಾಯಿಲೆಗೆ ತುತ್ತಾಗಿ ಮನೆಗಳಿಗೆ ತೆರಳುತ್ತಿದ್ದಾರೆ.

ಶಾಲೆಯಲ್ಲಿ 247 ವಿದ್ಯಾಭ್ಯಾಸ ಮಾಡುತ್ತಿದ್ದಾರೆ. 15 ದಿನಗಳ ಅವಧಿಯಲ್ಲಿ 20ಕ್ಕೂ ಹೆಚ್ಚು ಮಕ್ಕಳು ಜ್ವರ, ಶೀತ, ನೆಗಡಿ ಕಾರಣದಿಂದಾಗಿ ಮನೆಗಳಿಗೆ ಹೋಗಿದ್ದಾರೆ. ವಸತಿ ಶಾಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ನರ್ಸ್ ಇದ್ದರೂ ಮಕ್ಕಳಿಗೆ ಈ ರೀತಿ ರೋಗಗಳು ಕಾಣಿಸಿಕೊಳ್ಳುತ್ತಿರುವುದು ಪೋಷಕರಲ್ಲಿ ಆತಂಕ ಉಂಟು ಮಾಡಿದೆ.

‘ನಮ್ಮ ಮಕ್ಕಳು ಅನಾರೋಗ್ಯಕ್ಕೆ ತುತ್ತಾದರೆ ಶಿಕ್ಷಕರು ಕೂಡ ತಕ್ಷಣ ಮಾಹಿತಿ ನೀಡದಿರುವುದರಿಂದ ಮಕ್ಕಳು ಇನ್ನಷ್ಟು ಅಸ್ವಸ್ಥಗೊಳ್ಳಲು ಕಾರಣ’ ಎಂಬುದು ಪೋಷಕರ ಆರೋಪ.

ADVERTISEMENT

‘ವಸತಿ ಶಾಲೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲು ನರ್ಸ್ ಇದ್ದಾರೆ. ಮಕ್ಕಳಿಗೆ ಪ್ರಾರಂಭದಲ್ಲಿ ಕಾಣಿಸಿಕೊಂಡ ಜ್ವರಕ್ಕೆ ನಾವೇ ಚಿಕಿತ್ಸೆ ಕೊಡಿಸುತ್ತೇವೆ. ಕಡಿಮೆಯಾಗದಿದ್ದರೆ ಪೋಷಕರನ್ನು ಕರೆಸಿ ಮಕ್ಕಳನ್ನು ಕಳುಹಿಸಿಕೊಡುತ್ತೇವೆ. ಶೀತ, ಜ್ವರ, ನೆಗಡಿ ಸಮಸ್ಯೆ ಈಗ ಎಲ್ಲ ಕಡೆಗಳಲ್ಲೂ ಕಾಣಿಸಿಕೊಳ್ಳುತ್ತಿದೆ. ನಮ್ಮಲ್ಲೂ ಇದೆ. ಇದುವರೆಗೆ 20 ಮಕ್ಕಳು ಈ ರೀತಿ ಜ್ವರಕ್ಕೆ ಒಳಗಾಗಿ ಅವರನ್ನು ಮನೆಗೆ ಕಳುಹಿಸಿಕೊಟ್ಟಿದ್ದೇವೆ’ ಎಂದು ವಸತಿ ಶಾಲೆ ಪ್ರಾಂಶುಪಾಲರಾದ ಪವಿತ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಚ್ಛತೆ ಮಾಯ: ‘ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ಕಾರಣಕ್ಕೆ ನಾವು ಮಕ್ಕಳನ್ನು ಇಲ್ಲಿಗೆ ತಂದು ದಾಖಲು ಮಾಡುತ್ತೇವೆ. ಆದರೆ ಇಲ್ಲಿನ ಶಿಕ್ಷಕರು, ಪ್ರಾಂಶುಪಾಲರು ಮಕ್ಕಳಿಗೆ ಸೂಕ್ತ ಸೌಲಭ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ. ಈ ಬಗ್ಗೆ ಪೋಷಕರ ಸಭೆಯಲ್ಲಿ ಸಾಕಷ್ಟು ಬಾರಿ ಹೇಳಿದ್ದರೂ ಪ್ರಯೋಜನವಾಗಿಲ್ಲ. ಮಕ್ಕಳನ್ನು ಕಳುಹಿಸಿದ ಮೇಲೆ ನಮ್ಮ ಮಕ್ಕಳು ಚೆನ್ನಾಗಿದ್ದಾರೆ ಎಂದು ಭಾವಿಸಿರುತ್ತೇವೆ. ಆದರೆ, ಅವರು ಅನಾರೋಗ್ಯಕ್ಕೀಡಾಗಿ ಶಾಲೆಯಿಂದ ‘ನಿಮ್ಮ ಮಕ್ಕಳಿಗೆ ಜ್ವರ ಬಂದಿದೆ’ ಎಂದು ಕರೆ ಮಾಡಿದಾಗ ಆಕಾಶವೇ ಕಳಚಿ ಬಿದ್ದಂತಾಗುತ್ತದೆ’ ಎಂದು ಪೋಷಕರೊಬ್ಬರು ಅಲವತ್ತು ಕೊಂಡರು. ‌

‘ಬಾಲಕರ ವಸತಿ ನಿಲಯದಲ್ಲಿ ಶೌಚಾಲಯ ಬಾಗಿಲುಗಳು ಕಿತ್ತು ಬಂದು ಕೊಳಚೆ ನೀರು ನಿಂತಿದೆ. ಇಂಥ ವ್ಯವಸ್ಥೆಯಲ್ಲಿ ಮಕ್ಕಳು ಸ್ನಾನ, ಶೌಚಾಲಯಕ್ಕೆ ಹೋಗುವುದಾರೂ ಹೇಗೆ? ಇದು ಇಲ್ಲಿನ ಪ್ರಾಂಶುಪಾಲರು, ನಿಲಯ ಪಾಲಕರಿಗೆ ಗೊತ್ತಿದ್ದರೂ ಅದನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಶೌಚಾಲಯದ ದುರ್ನಾತದಿಂದಾಗಿ ಸೊಳ್ಳೆಗಳು ಕಚ್ಚಿ ಮಕ್ಕಳು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುವ ಭೀತಿಯಲ್ಲಿದ್ದಾರೆ. ಕೂಡಲೇ ಹಿರಿಯ ಅಧಿಕಾರಿಗಳು ವಸತಿ ಶಾಲೆಗೆ ಭೇಟಿ ನೀಡಿದರೆ ವಾಸ್ತವ ತಿಳಿಯಲಿದೆ’ ಎಂದು ಪೋಷಕರು ಹೇಳಿದರು.

‘ಸರಿಪಡಿಸಲು ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲರಾದ ಪವಿತ್ರ, ‘ಬಾಲಕರ ವಸತಿ ನಿಲಯದಲ್ಲಿ ಶೌಚಾಲಯದ ಬಾಗಿಲುಗಳು ಕಿತ್ತು ಬಂದಿರುವುದು ಗಮನಕ್ಕೆ ಬಂದಿದೆ. ಇದರ ರಿಪೇರಿಗಾಗಿ ನಾನು ಎರಡು ಬಾರಿ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಮೂಲವೂ ಅನುದಾನಕ್ಕಾಗಿ ಮನವಿ ಮಾಡಲಾಗಿದೆ. ಮತ್ತೊಮ್ಮೆ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.