ADVERTISEMENT

ಚಾಮರಾಜನಗರ | ಕೋವಿಡ್‌–19 ತಡೆ, ‘ಯಶೋಗಾಥೆ’ ಬಿಡುಗಡೆ

ಅಧಿಕಾರಿಗಳ ಶ್ರಮವನ್ನು ಕೊಂಡಾಡಿದ ಜಿಲ್ಲಾ ಉಸ್ತುವಾರಿ ಸಚಿವ

​ಪ್ರಜಾವಾಣಿ ವಾರ್ತೆ
Published 21 ಮೇ 2020, 16:02 IST
Last Updated 21 ಮೇ 2020, 16:02 IST
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಹಸಿರು ಬಲೂನು ಹಾರಿ ಬಿಡುವ ಮೂಲಕ ‘ಎವರ್‌ಗ್ರೀನ್‌ ಚಾಮರಾಜನಗರ’ ಅಭಿಯಾನಕ್ಕೆ ಚಾಲನೆ ನೀಡಿದರು
ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಹಸಿರು ಬಲೂನು ಹಾರಿ ಬಿಡುವ ಮೂಲಕ ‘ಎವರ್‌ಗ್ರೀನ್‌ ಚಾಮರಾಜನಗರ’ ಅಭಿಯಾನಕ್ಕೆ ಚಾಲನೆ ನೀಡಿದರು   

ಚಾಮರಾಜನಗರ: ಜಿಲ್ಲೆಯು ಕೋವಿಡ್– 19 ಮುಕ್ತವಾಗಿರಲು ಅನುಸರಿಸಿದ ಕಾರ್ಯವಿಧಾನಗಳು ಹಾಗೂ ಕೈಗೊಂಡ ಮುಂಜಾಗ್ರತಾ ಕ್ರಮಗಳ ಕುರಿತು ಜಿಲ್ಲಾಡಳಿತ ಹೊರತಂದಿರುವ ‘ಚಾಮರಾಜನಗರ ಜಿಲ್ಲೆಯ ಯಶೋಗಾಥೆ’ ಎಂಬ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಗುರುವಾರ ಕೊಳ್ಳೇಗಾಲದಲ್ಲಿ ಬಿಡುಗಡೆ ಮಾಡಿದರು.

ಕೋವಿಡ್‌ ತಡೆಯಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಗಳು ಹಾಗೂ ಅಧಿಕಾರಿಗಳು ಹಾಕಿದ ಶ್ರಮವನ್ನು ಕೊಂಡಾಡಿದ ಸಚಿವರು, ‘ಇದುವರೆಗೂ ಜಿಲ್ಲೆಯು ಕೊರೊನಾ ಸೋಂಕು ಮುಕ್ತವಾಗಿದೆ. ಇದಕ್ಕಾಗಿ ಕೈಗೊಂಡ ಕ್ರಮಗಳು ಹಾಗೂ ನಿಗಾ ವಹಿಸುವಿಕೆ ವಿಧಾನಗಳು ಇತರ ಜಿಲ್ಲೆಗಳಿಗೂ ಮಾದರಿಯಾಗಿವೆ. ಈ ಪುಸ್ತಕದ ಮೂಲಕ ಜಿಲ್ಲೆಯೂ ಇಡೀ ರಾಜ್ಯಕ್ಕೆ ಸಂದೇಶವನ್ನು ರವಾನಿಸಿದೆ. ಈ ವಿಚಾರವಾಗಿ ರಾಜ್ಯ ಮಟ್ಟದಲ್ಲಿ ಸರ್ಕಾರದ ಗಮನವನ್ನು ಸೆಳೆಯುತ್ತೇನೆ’ ಎಂದು ಹೇಳಿದರು.

‘ಅಧಿಕಾರಿಗಳು ಅತ್ಯಂತ ಪರಿಶ್ರಮದಿಂದ ಕೆಲಸ ಮಾಡುತ್ತಿದ್ದಾರೆ. ಇದುವರೆಗೂ ನಮ್ಮ ಜಿಲ್ಲೆ ಸೋಂಕು ಮುಕ್ತವಾಗಿದೆ.ಮುಂದೆಯೂ ಇದನ್ನೇ ಉಳಿಸಿಕೊಳ್ಳುವ ಸವಾಲು ನಮ್ಮ ಮುಂದಿದೆ. ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಪ್ರಮುಖ ಪಾತ್ರ ನಿರ್ವಹಿಸಬೇಕು’ ಎಂದು ಹೇಳಿದರು.

ADVERTISEMENT

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡಿ, ‘ಕೋವಿಡ್‌–19 ತಡೆಗೆ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಮಗ್ರ, ಸಚಿತ್ರ ವರದಿಯನ್ನು ಯಶೋಗಾಥೆ ಪುಸ್ತಕದಲ್ಲಿ ದಾಖಲು ಮಾಡಿದ್ದೇವೆ. ಎಲ್ಲ ಜನಪ್ರತಿನಿಧಿಗಳು, ಸಚಿವರು, ಅಧಿಕಾರಿಗಳು, ಆರೋಗ್ಯ ಸಿಬ್ಬಂದಿ ಸೇರಿದಂತೆ ಸರ್ವರ ಸಹಕಾರದಿಂದ ಸೋಂಕು ತಡೆಯಲು ಸಾಧ್ಯವಾಗಿದೆ’ ಎಂದರು.

ಇದಕ್ಕೂ ಮೊದಲು, ಸಚಿವರು ಕೋವಿಡ್ ತಡೆ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು.

ಶಾಸಕರಾದ ಆರ್.ನರೇಂದ್ರ. ಎನ್.ಮಹೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ. ಆನಂದಕುಮಾರ್ ಇದ್ದರು.

‘ಎವರ್‌ಗ್ರೀನ್ ಚಾಮರಾಜನಗರ’ಕ್ಕೆ ಚಾಲನೆ
ಜಿಲ್ಲೆಯನ್ನು ಕೋವಿಡ್–19 ಮುಕ್ತವನ್ನಾಗಿ ಉಳಿಸಿಕೊಳ್ಳಲು ಹಮ್ಮಿಕೊಂಡಿರುವ ‘ಎವರ್‌ಗ್ರೀನ್ ಚಾಮರಾಜನಗರ ಅಭಿಯಾನ’ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಅವರುಹನೂರು ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುವಾರ ಚಾಲನೆ ನೀಡಿದರು.

‘ಜಿಲ್ಲೆಯ ಜನರು ಕೋವಿಡ್–19 ಮುಂಜಾಗ್ರತಾ ಕ್ರಮಗಳನ್ನು ಮುಂದೆಯೂ ತಪ್ಪದೇ ಪಾಲಿಸಬೇಕು. ಅಂತರವನ್ನು ಕಾಯ್ದುಕೊಳ್ಳುವುದು ಪ್ರತಿಯೊಬ್ಬರ ಸಾಮಾಜಿಕ ಕರ್ತವ್ಯ ಎಂದು ಅರಿಯಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಕ್ಕಳು, ವಯೋವೃದ್ಧರು ಹಾಗೂ ಗರ್ಭಿಣಿಯರು ಮನೆಯಿಂದ ಹೊರಗೆ ಬಾರದೇ ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.