ADVERTISEMENT

ಗ್ರಾ.ಪಂ ಚುನಾವಣೆ: ಸಿದ್ದತೆ ಪರಿಶೀಲಿಸಿದ ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 14:24 IST
Last Updated 19 ಡಿಸೆಂಬರ್ 2020, 14:24 IST
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳೊಂದಿಗೆ ವಿವಿಧ ಮತಗಟ್ಟೆಗಳು, ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಧಿಕಾರಿಗಳೊಂದಿಗೆ ವಿವಿಧ ಮತಗಟ್ಟೆಗಳು, ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು   

ಚಾಮರಾಜನಗರ: ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನಕ್ಕೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಎಲ್ಲ ಸಿದ್ದತೆಗಳನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಶನಿವಾರ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿ ಚುನಾವಣೆ ಕುರಿತು ನೋಡೆಲ್ ಅಧಿಕಾರಿಗಳು, ತಹಶೀಲ್ದಾರರು ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮ ಪಂಚಾಯಿತಿಯ ಮೊದಲ ಹಂತದ ಚುನಾವಣೆ ಮತದಾನ ಪ್ರಕ್ರಿಯೆ ಲೋಪವಿಲ್ಲದಂತೆ ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳು ಎಲ್ಲ ಸಿದ್ಧತೆಯನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು. ಮಸ್ಟರಿಂಗ್, ಡಿಮಸ್ಟರಿಂಗ್ ಕೇಂದ್ರಗಳಲ್ಲಿ ಬಾಕಿ ಉಳಿದಿರುವ ಸಿದ್ಧತಾ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಮಸ್ಟರಿಂಗ್ ಡಿಮಸ್ಟರಿಂಗ್ ದಿನದಂದು ನಿರ್ವಹಣೆ ಮಾಡಬೇಕಿರುವ ಕೆಲಸಗಳ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಗಮನಹರಿಸಬೇಕು’ ಎಂದರು.

‘ಮತಗಟ್ಟೆ ಅಧಿಕಾರಿ ಸಿಬ್ಬಂದಿ ಮತದಾನ ಪ್ರಕ್ರಿಯೆಗಾಗಿ ಮತಗಟ್ಟೆಗಳಿಗೆ ಕೊಂಡೊಯ್ಯಬೇಕಿರುವ ಸಾಮಗ್ರಿಗಳು, ಇತರೆ ಅವಶ್ಯಕ ವಸ್ತುಗಳನ್ನು ಸುರಕ್ಷಿತವಾಗಿ ಭದ್ರತೆಯೊಂದಿಗೆ ಕಳುಹಿಸಿಕೊಡಬೇಕು. ಕೆ.ಎಸ್.ಆರ್.ಟಿ.ಸಿ ಬಸ್ಸುಗಳನ್ನು ಸ್ಯಾನಿಟೈಜ್ ಮಾಡಿ ಚುನಾವಣಾ ಕಾರ್ಯಕ್ಕೆ ಕಳುಹಿಸಿಕೊಡಬೇಕು. ಬಸ್ಸುಗಳು ಹಾಗೂ ಸರ್ಕಾರಿ ವಾಹನಗಳನ್ನು ಬಳಕೆ ಮಾಡಿಕೊಂಡು ಸಕಾಲಕ್ಕೆ ಮತಗಟ್ಟೆಗೆ ನಿಯೋಜಿತರಾಗಿರುವ ಅಧಿಕಾರಿ ಸಿಬ್ಬಂದಿ ತಲುಪಬೇಕು. ಈ ಬಗ್ಗೆ ನೋಡೆಲ್ ಅಧಿಕಾರಿಗಳು ನೋಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.

ADVERTISEMENT

‘ಮತದಾನದಂದು ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರು ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತದೆ. ಸೋಂಕಿತರನ್ನು ಸುರಕ್ಷಿತ ಸಾಧನಗಳೊಂದಿಗೆ ಕರೆತರುವ ಜವಾಬ್ದಾರಿ ಆರೋಗ್ಯ ಇಲಾಖೆ ಅಧಿಕಾರಿಗಳ ಮೇಲಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಆಯಾ ತಾಲ್ಲೂಕಿನ ಆರೋಗ್ಯ ಅಧಿಕಾರಿಗಳಿಗೆ ಮತ್ತು ಇತರೆ ಆರೋಗ್ಯ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ಸಜ್ಜಾಗಿರಬೇಕು’ ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣ್ ರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣವರ್, ತಹಶೀಲ್ದಾರರಾದ ಕೆ.ಕುನಾಲ್, ಚಿದಾನಂದಗುರುಸ್ವಾಮಿ, ಬಸವರಾಜ ಚಿಗರಿ, ನಂಜುಂಡಯ್ಯ, ನೋಡೆಲ್ ಅಧಿಕಾರಿಗಳಾದ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಖಾದಿ ಗ್ರಾಮೋದ್ಯೋಗ ಉಪನಿರ್ದೇಶಕ ರಾಜೇಂದ್ರಪ್ರಸಾದ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೃಷ್ಣಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಟಿ.ಜವರೇಗೌಡ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರೇಮ್ ಕುಮಾರ್, ಕುಲದೀಪ್, ರಾಜು ಸಭೆಯಲ್ಲಿದ್ದರು.

ಸಭೆಗೂ ಮೊದಲು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಚುನಾವಣಾ ವೀಕ್ಷಕರಾದ ಎ.ಎಂ.ಯೋಗೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್ ಹಾಗೂ ಅಧಿಕಾರಿಗಳು ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್, ಮತ ಎಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.