ADVERTISEMENT

‘ಅನುಕಂಪ ಬೇಡ, ಅವಕಾಶ ನೀಡಿ’

ವಿಶ್ವ ಅಂಗವಿಕಲರ ದಿನಾಚರಣೆ, ಕಾನೂನು ಅರಿವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2025, 3:20 IST
Last Updated 7 ಡಿಸೆಂಬರ್ 2025, 3:20 IST
ಕೊಳ್ಳೇಗಾಲ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶೆ ಸುನಿತಾ ಉದ್ಘಾಟನೆ ಮಾಡಿದರು
ಕೊಳ್ಳೇಗಾಲ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಹಿರಿಯ ನ್ಯಾಯಾಧೀಶೆ ಸುನಿತಾ ಉದ್ಘಾಟನೆ ಮಾಡಿದರು   

ಕೊಳ್ಳೇಗಾಲ: ಅಂಗವಿಕಲರು ಎಂದರೆ ದೈಹಿಕ, ಮಾನಸಿಕ ಅಥವಾ ಅರಿವಿನ ಕೊರತೆಯಿಂದಾಗಿ ಸಾಮಾನ್ಯ ಜೀವನಶೈಲಿಯಲ್ಲಿ ಸವಾಲುಗಳನ್ನು ಎದುರಿಸುವ ವ್ಯಕ್ತಿಗಳು ಎಂದು ಹಿರಿಯ ನ್ಯಾಯಾಧೀಶೆ ಸುನಿತಾ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ತಾಲ್ಲೂಕು ಪಂಚಾಯಿತಿ ಇವರ ಸಹಯೋಗದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಹಾಗೂ ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಂಗವಿಕಲರಿಗೆ ಶಿಕ್ಷಣ, ಉದ್ಯೋಗ, ಸಾಮಾಜಿಕ ಸಮ್ಮತಿ ಮತ್ತು ಸಮಾನ ಅವಕಾಶಗಳು ಅತ್ಯಗತ್ಯವಾಗಿದ್ದು, ಇವರ ಸಾಧನೆಗಳನ್ನು ಗುರುತಿಸಿ, ಸಮಾಜದ ಮುಖ್ಯವಾಹಿನಿಗೆ ತರಲು ಶಿಕ್ಷಣ, ವಸತಿ, ಕೌಶಲ ತರಬೇತಿ ಮುಖ್ಯ. ಇದರಿಂದ ಅವರು ಸಮಾಜದಲ್ಲಿ ಸಮಾನವಾಗಿ ಬೆರೆಯಲು ಸಾಧ್ಯವಾಗುತ್ತದೆ. ಅಂಗವಿಕಲರು ಸಮಾಜದ ಒಂದು ಅವಿಭಾಜ್ಯ ಅಂಗ. ಇವರಿಗೆ ವಿಶೇಷ ಅನುಕಂಪದ ಬದಲು ಸಮಾನ ಅವಕಾಶಗಳು ಮತ್ತು ಗೌರವದ ಬದುಕು ಸಿಗಬೇಕು. ಇವರನ್ನು ‘ಭಿನ್ನ: ಎಂದು ನೋಡದೆ, 'ಸಾಧ್ಯತೆಗಳು' ತುಂಬಿರುವ ವ್ಯಕ್ತಿಗಳೆಂದು ಗುರುತಿಸಿ, ಅವರ ಕೌಶಲಗಳನ್ನು ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂದರು.

ನಂತರ ವಕೀಲ ಚಿನ್ನರಾಜು ಮಾತನಾಡಿ, ಬೌದ್ಧಿಕ, ದೈಹಿಕ ಹಾಗೂ ಭಾವನಾತ್ಮಕವಾಗಿ ಅಸಾಮರ್ಥ್ಯವನ್ನು ಹೊಂದಿರುವ ಅಂಗವಿಕಲ ಮಕ್ಕಳಿಗೆ ವಿಶೇಷ ಆರೈಕೆಯೊಂದಿಗೆ ಶಿಕ್ಷಣವೂ ಬೇಕು. ಅಂಗವಿಕಲರು ಎಂದರೆ ಮಾನಸಿಕ ಮತ್ತು ದೈಹಿಕ ದೌರ್ಬಲ್ಯಗಳುಳ್ಳಂತಹ ಮಕ್ಕಳು. ಸಾಮಾನ್ಯವಾಗಿ ಈ ಮಕ್ಕಳು ಇತರ ಮಕ್ಕಳೊಂದಿಗೆ ಬೆರೆಯುವುದು ಸ್ವಲ್ಪ ಕಷ್ಟವೇ. ಈ ಮಕ್ಕಳ ಮನಸು ಸೂಕ್ಷ್ಮವಾದುದು ಹಾಗಾಗಿ ಇಂತಹ ಮಕ್ಕಳಿಗೆ ವಿಶೇಷವಾಗಿ ಕಾಳಜಿ ತೋರಿಸಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕಾವ್ಯ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ವಕೀಲ ಸಂಘದ ಅಧ್ಯಕ್ಷ ಬಸವರಾಜು, ಉಪಾಧ್ಯಕ್ಷೆ ಸೀಮಾ ತಹಸಿನ್ ಸುಲ್ತಾನ, ಕಾರ್ಯದರ್ಶಿ ಡಿ ಕೆಂಪಯ್ಯ, ಎಂಆರ್‌ಡಬ್ಲ್ಯೂ ಕವಿರತ್ನ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.