ADVERTISEMENT

ಕೊಳ್ಳೇಗಾಲ: ರಸ್ತೆ, ಸಾರ್ವಜನಿಕರ ಸ್ಥಳಗಳಲ್ಲಿ ಮದ್ಯಪಾನ!

​ಪ್ರಜಾವಾಣಿ ವಾರ್ತೆ
Published 14 ಜೂನ್ 2025, 5:48 IST
Last Updated 14 ಜೂನ್ 2025, 5:48 IST
ಕೊಳ್ಳೇಗಾಲ ನಗರ ಪೊಲೀಸ್ ಠಾಣೆ ಕಾಂಪೌಂಡ್ ಪಕ್ಕದಲ್ಲಿ ಕುಡಿಯುತ್ತಿರುವುದು
ಕೊಳ್ಳೇಗಾಲ ನಗರ ಪೊಲೀಸ್ ಠಾಣೆ ಕಾಂಪೌಂಡ್ ಪಕ್ಕದಲ್ಲಿ ಕುಡಿಯುತ್ತಿರುವುದು   

ಕೊಳ್ಳೇಗಾಲ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡುಕರ ಹಾವಳಿ ಮಿತಿಮೀರಿದ್ದು, ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕುಡಿದು ಮೋಜುಮಸ್ತಿ ಮಾಡುತ್ತಿದ್ದಾರೆ.

ಕುಡಿದ ನಂತರ ಎಲ್ಲೆಂದರಲ್ಲಿ ಬಾಟಲಿಗಳನ್ನು ಬಿಸಾಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ನಗರದ ಶಾಲಾ ಕಾಲೇಜು ಮೈದಾನ, ಸರ್ಕಾರಿ ಕಚೇರಿ ಆವರಣ, ತರಕಾರಿ ಮಾರುಕಟ್ಟೆ, ಹೊಲ, ಸ್ಮಶಾನ ಕುಡುಕರ ಮೋಜು ಮಸ್ತಿಯ ತಾಣಗಳಾಗುತ್ತಿವೆ. ಮುಖ್ಯವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಹಾಗೂ ಪ್ರತಿಯೊಂದು ಹಳ್ಳಿಯ ಹೆಬ್ಬಾಗಿಲು, ಹಳ್ಳಿ ಕಟ್ಟೆ, ಸೇರಿದಂತೆ ಮುಖ್ಯ ರಸ್ತೆಗಳಲ್ಲಿ ಹೆಚ್ಚಾಗಿ ಕುಡುಕರ ಹಾವಳಿ ಮಿತಿಮೀರಿದೆ.

ಶಾಲಾ–ಕಾಲೇಜು ವಿದ್ಯಾರ್ಥಿಗಳು ಶಾಲೆಗೆ ಹೋಗಲು ಭಯಪಡುತ್ತಿದ್ದಾರೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅವರು ತೊಂದರೆ ನೀಡುತ್ತಿದ್ದಾರೆ. ನಗರದ ಬಸ್ ನಿಲ್ದಾಣ, ಆಟೊ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಕುಡುಕರು ಕುಡಿದು ಗಲಾಟೆ ಮಾಡುವುದರ ಜೊತೆಗೆ ಜೋರಾಗಿ ಕೂಗಿಕೊಂಡು ಹೋಗುವುದು ಸರ್ವೆ ಸಾಮಾನ್ಯವಾಗಿದೆ. ಇದರ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಗಮನಹರಿಸುವುದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದೆ.   

ಹಳ್ಳಿಗಳಲ್ಲೂ ಕುಡುಕರ ಹಾವಳಿ ಮಿತಿಮೀರಿದ್ದು, ಇದರ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸದೆ ಹೋದರೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಪಾಳ್ಯ ಗ್ರಾಮದ ನಿವಾಸಿ ಸುಂದರ ‘ಪ್ರಜಾವಾಣಿ’ಗೆ ತಿಳಿಸಿದರು.

ನಶೆಯಲ್ಲಿ ವಾಹನ ಚಾಲನೆ: ಇತ್ತೀಚಿನ ದಿನಗಳಲ್ಲಿ ಕುಡಿಯುವುದು ಕೆಲವರಿಗೆ ಚಟವಾದರೆ ಇನ್ನೂ ಕೆಲವರಿಗೆ ಶೋಕಿ. ಅದರಲ್ಲೂ ನಗರ ಪ್ರದೇಶದಲ್ಲಿ ಹೆಚ್ಚಾಗಿ ಯುವಕರು ಕುಡಿದ ಮತ್ತಿನಲ್ಲಿ ಬೈಕ್, ಆಟೊ ಚಾಲನೆ ಮಾಡುತ್ತಿದ್ದಾರೆ. ಶಾಲಾ–ಕಾಲೇಜು ಬಿಟ್ಟ ಸಮಯದಲ್ಲಿ ಕೆಲ ಪುಂಡರು ಕುಡಿದು ಬೈಕ್ ಓಡಿಸುವುದರ ಜೊತೆಗೆ ವೀಲಿಂಗ್ ಮಾಡುವುದು ಸಹ ನಡೆದಿದೆ.

ADVERTISEMENT

ಕೊಳ್ಳೇಗಾಲ ನಗರದ ಹೊರವಲಯದ ರಿಂಗ್‌ರೋಟ್‌ನಲ್ಲಿ ಕುಡಿದ ನಶೆಯಲ್ಲಿ ಯುವಕರು ವೀಲಿಂಗ್ ಮಾಡಿಕೊಂಡೇ ಹೋಗುತ್ತಾರೆ. ಎದುರುಗಡೆಯಿಂದ ಬರುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡೆ ಹೋಗಬೇಕಾದ ಪರಿಸ್ಥಿತಿ ಇದೆ. ಉತ್ತಂಬಳ್ಳಿ ಬೈಪಾಸ್, ದಾಸನಪುರ, ಹರಳೆ, ನರೀಪುರ, ಮಧುವನಹಳ್ಳಿ ಸೇರಿದಂತೆ ಇತರ ಬೈಪಾಸ್ ರಸ್ತೆಯಲ್ಲಿ ಕುಡಿದು ಬೈಕ್ ಓಡಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳುತ್ತಾರೆ ಹಿರಿಯ ನಾಗರಿಕ ಶೈಲೇಂದ್ರ.

ಕುಡುಕರ ಅಡ್ಡೆ ಅರಳಿಕಟ್ಟೆಗಳು: ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕುಡುಕರು ಊರಿನ ಮುಂಭಾಗವಿರುವ ಅರಳಿ ಕಟ್ಟೆ, ಬಸ್ ನಿಲ್ದಾಣ, ಆಟೊ ನಿಲ್ದಾಣ ಸೇರಿದಂತೆ ಅನೇಕ ತಂಗುದಾಣಗಳಲ್ಲಿ ಕುಡಿದು ನಶೆ ಏರಿಸಿಕೊಂಡು ಮೋಜು ಮಸ್ತಿ ಮಾಡುತ್ತಿದ್ದಾರೆ. ಸಂಜೆ ಆಗುವುದನ್ನೇ ಕೆಲವರು ಕಾಯುತ್ತಾ ಕುಳಿತಿರುತ್ತಾರೆ, 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೂ ಸಹ ಕುಡಿದು ನಶೆ ಏರಿಸಿಕೊಂಡು ಜೋರಾಗಿ ಕಿರುಚಾಡುತ್ತಾರೆ. ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಗೆ ಹೋಗುವ ಜನರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ.

ಪೊಲೀಸರು ಕುಡುಕರ ಹಾವಳಿ ತಪ್ಪಿಸಬಹುದು. ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಇಲಾಖೆ ಗಮನಹರಿಸಬೇಕು ಎಂದು ರೈತ ಸಂಘದ ಮುಖಂಡ ಗೌಡೇ ಗೌಡ ತಿಳಿಸಿದರು

ಮುಖ್ಯ ರಸ್ತೆಯಲ್ಲಿ ಕುಡುಕರ ಹಾವಳಿ ಮಿತಿಮೀರಿದ್ದು ಇದರಿಂದ ಸಾರ್ವಜನಿಕರಿಗೆ ಮುಜುಗರ ಆಗುತ್ತಿದೆ. ಸಂಬಂಧ ಪಟ್ಟ ಪೊಲೀಸ್ ಇಲಾಖೆ ಇದರ ಬಗ್ಗೆ ಗಮನಹರಿಸಬೇಕು
ಅಯಾಜ್ ಕನ್ನಡಿಗ, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ
- ಸಾರ್ವಜನಿಕ ಸ್ಥಳದಲ್ಲಿ ಕುಡಿಯುವುದು ಅಪರಾಧ. ಈಗಾಗಲೇ ಪ್ರತಿಯೊಂದು ಹಳ್ಳಿಗಳಿಗೂ ಭೇಟಿ ನೀಡಿ ಅರಿವು ಮೂಡಿಸುತ್ತಿದ್ದೇವೆ. ಕುಡುಕರ ಹಾವಳಿ ಮಿತಿಮೀರಿದರೆ ಕಠಿಣ ಕ್ರಮ ಜರುಗಿಸಲಾಗುವುದು
ಧರ್ಮೇಂದ್ರ, ಡಿವೈಎಸ್ಪಿ

ಕೊಳ್ಳೇಗಾಲ ನಗರ ಪೊಲೀಸ್ ಠಾಣೆ ಕಾಂಪೌಂಡ್ ಪಕ್ಕದಲ್ಲಿ ಕುಡಿಯುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.