ADVERTISEMENT

ಕುಡಿವ ನೀರಿನ ಸಮಸ್ಯೆ ಆಗದಿರಲಿ: ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್

ಹನೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 4:52 IST
Last Updated 11 ಅಕ್ಟೋಬರ್ 2025, 4:52 IST
ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮ ಸಮೀಪದ ಉಡುತೊರೆ ಹಳ್ಳ ಜಲಾಶಯ ವೀಕ್ಷಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ನೀರಿನ ಲಭ್ಯತೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು
ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮ ಸಮೀಪದ ಉಡುತೊರೆ ಹಳ್ಳ ಜಲಾಶಯ ವೀಕ್ಷಿಸಿದ ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್ ನೀರಿನ ಲಭ್ಯತೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು   

ಚಾಮರಾಜನಗರ: ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವ ಹನೂರು ತಾಲ್ಲೂಕಿನ ಎಲ್ಲೇಮಾಳ, ಅಜ್ಜೀಪುರ ಮತ್ತು ರಾಮಾಪುರ ಗ್ರಾಮಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋನಾ ರೋತ್ ಭೇಟಿ ನೀಡಿ ಪರಿಶೀಲಿಸಿದರು.

ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಟಿ.ಎನ್.ದೊಡ್ಡಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಜಲ‌ಬಿಂದು ಗುರುತಿಸುವ ಭೌಗೋಳಿಕ ಸಮೀಕ್ಷೆ ಮಾಡುವ ಪ್ರಕ್ರಿಯೆಯನ್ನು ವೀಕ್ಷಿಸಿದರು. ಬಳಿಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಮಾಹಿತಿ ನೀಡಿದರು.

ನಂತರ ಅಜ್ಜೀಪುರ ಗ್ರಾಮದ ಸಮೀಪದ ಉಡುತೊರೆ ಹಳ್ಳ ಜಲಾಶಯ ವೀಕ್ಷಿಸಿ ನೀರಿನ ಸಂಗ್ರಹ ಮಾಹಿತಿ ಪಡೆದುಕೊಂಡರು. ಉಡುತೊರೆ ಹಳ್ಳದಲ್ಲಿ ನೀರು ಹರಿಸಿದರೆ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀರು ತುಂಬಿಸುವ ಯೋಜನೆ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.

ADVERTISEMENT

ಅಜ್ಜೀಪುರ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಪರ್ಯಾಯವಾಗಿ ಕ್ರಮ ವಹಿಸುವಂತೆ, ಗ್ರಾಮಸ್ಥರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ಬಳಿಕ ಗ್ರಾಮದ ಅಂಗನವಾಡಿ, ಗ್ರಂಥಾಲಯ, ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಭೇಟಿನೀಡಿ ವ್ಯವಸ್ಥೆ ಪರಿಶೀಲಿಸಿದರು.

ರಾಮಾಪುರ ಗ್ರಾಮ ಪಂಚಾಯಿತಿಗೆ ಭೇಟಿನೀಡಿ ಕುಡಿಯುವ ನೀರಿನ ಸಮಸ್ಯೆಯ ಕುರಿತು ಚರ್ಚಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಎಸ್. ಜಗದೀಶ್, ಹನೂರು ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಕೆ.ಸಿ.ಐ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕರುಣಾಮಾಯಿ, ಸಹಾಯಕ ನಿರ್ದೇಶಕಿ ರಾಧಾ, ಎಂಜಿನಿಯರ್ ಎಂ. ಪೂರ್ಣಿಮಾ, ಹೆಚ್.ಶಶಿಕುಮಾರ್, ಡಿ.ಪಿ.ಎಂ ಆಶಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.