ADVERTISEMENT

ಶೇ. 30ರಷ್ಟು ಪಠ್ಯ ಕಡಿತ ಖಚಿತ: ಶಿಕ್ಷಣ ಸಚಿವ ಸುರೇಶ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 12:02 IST
Last Updated 12 ಜನವರಿ 2021, 12:02 IST
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜಿಗೆ ಭೇಟಿ ನೀಟಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಚಾಮರಾಜನಗರದ ಜೆಎಸ್‌ಎಸ್‌ ಕಾಲೇಜಿಗೆ ಭೇಟಿ ನೀಟಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಿದರು   

ಚಾಮರಾಜನಗರ: ‘ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಎಸ್ಸೆಸ್ಸೆಲ್ಸಿ ತರಗತಿಗಳಿಗೆ ಯಾವೆಲ್ಲ ಪಠ್ಯಗಳನ್ನು ಕಡಿತಗೊಳಿಸಬೇಕು ಎಂಬ ಬಗ್ಗೆ ತೀರ್ಮಾನಿಸಿದ್ದೇವೆ. ಕನಿಷ್ಠ ಶೇಕಡ 30ರಷ್ಟು ಪಠ್ಯ ಕಡಿತವಾಗಲಿದೆ. ಯಾರೂ ಆತಂಕಪಡಬೇಕಾಗಿಲ್ಲ’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ್ ಕುಮಾರ್ ಅವರು ಮಂಗಳವಾರ ಹೇಳಿದರು.

ತಾಲ್ಲೂಕಿನ ವಿವಿಧ ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಠ್ಯ ಕಡಿತಕ್ಕೆ ಸಂಬಂಧಿಸಿದ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮಂಗಳವಾರ ಸಂಜೆ ಅಥವಾ ಬುಧವಾರ ಹೊರಡಿಸಲಿದ್ದಾರೆ’ ಎಂದರು.

15ರ ನಂತರ ತೀರ್ಮಾನ: 1ನೇ ತರಗತಿಯಿಂದ 9ನೇ ತರಗತಿವರೆಗೆ ಹಾಗೂ ಪ್ರಥಮ ಪಿಯುಸಿ ತರಗತಿಗಳನ್ನು ಆರಂಭಿಸುವ ಬಗ್ಗೆ ಜನವರಿ 15ರ ನಂತರ ತೀರ್ಮಾನಿಸಲಾಗುವುದು ಎಂದರು.

ADVERTISEMENT

‘8, 9 ಮತ್ತು ಪ್ರಥಮ ಪಿಯುಸಿ ಮಕ್ಕಳಿಗೆ ತರಗತಿಗಳನ್ನು ಆರಂಭಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಇದಕ್ಕಾಗಿ ಸಾಕಷ್ಟು ಕೊಠಡಿಗಳ ಲಭ್ಯತೆ ಇರಬೇಕು. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ತಜ್ಞರ ಸಮಿತಿಯ ಜೊತೆ ಚರ್ಚಿಸಲಾಗುವುದು. ಸಮಿತಿಯ ಅಭಿಪ್ರಾಯದ ಮೇಲೆ 15ರ ನಂತರ ತೀರ್ಮಾನಿಸಲಾಗುವುದು’ ಎಂದರು.

ಖಾಸಗಿ ಶಾಲೆಗಳ ಶುಲ್ಕದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುರೇಶ್‌ ಕುಮಾರ್ ಅವರು, ‘ಈ ವರ್ಷದ ಮಟ್ಟಿಗೆ ಶೇಕಡ 70ರಷ್ಟು ಮಾತ್ರ ಟ್ಯೂಷನ್‌ ಶುಲ್ಕವನ್ನು ತೆಗೆದುಕೊಳ್ಳುವುದಾಗಿಈಗಾಗಲೇ ಎರಡು ಶಾಲಾ ಒಕ್ಕೂಟಗಳು ಹೇಳಿವೆ. ಕೋವಿಡ್‌ನಿಂದಾಗಿ ಒಂದು ಕಡೆ ಪೋಷಕರು ಜರ್ಜರಿತರಾಗಿದ್ದಾರೆ. ಇನ್ನೊಂದು ಕಡೆ ಖಾಸಗಿ ಶಾಲಾ ಶಿಕ್ಷಕರು ಸಂಬಳವಿಲ್ಲದೆ ಸಂಕಷ್ಟದಲ್ಲಿದ್ದಾರೆ. ಇಬ್ಬರ ಸಮಸ್ಯೆಗಳನ್ನು ಗಮನದಲ್ಲಿರಿಸಿಕೊಂಡು ಶಿಕ್ಷಣ ಇಲಾಖೆ ಆಯುಕ್ತರು ಪೋಷಕ ಸಂಘಟನೆಗಳ ಪ್ರಮುಖರು ಹಾಗೂ ಖಾಸಗಿ ಶಾಲೆಗಳ ಪ್ರಮುಖರ ಸಭೆ ಕರೆದು ಎಲ್ಲರಿಗೂ ಒಪ್ಪುವ ಸೂತ್ರ ರಚಿಸುವ ಪ್ರಯತ್ನ ಮಾಡಲಿದ್ದಾರೆ’ ಎಂದರು.

ವಿದ್ಯಾಗಮ ಮುಂದುವರಿಯಲಿ: ‘ನಾನು ರಾಜ್ಯದ ವಿವಿಧ ಕಡೆಗಳಲ್ಲಿ 160ರಿಂದ 170 ಶಾಲೆಗಳಿಗೆ ಭೇಟಿ ಕೊಟ್ಟು ಮಕ್ಕಳೊಂದಿಗೆ ಮಾತುಕತೆ ನಡೆಸಿದ್ದೇನೆ. ತರಗತಿಗಳನ್ನು ನಡೆಸುವ ಬಗ್ಗೆ, ಪರೀಕ್ಷೆಯ ಬಗ್ಗೆ ಅವರ ಅಭಿಪ್ರಾಯವನ್ನು ಕೇಳಿದ್ದೇನೆ. ವಿದ್ಯಾಗಮ ಕಾರ್ಯಕ್ರಮವನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸಬಾರದು ಎಂಬ ಅನಿಸಿಕೆಯನ್ನು ಮಕ್ಕಳು ವ್ಯಕ್ತಪಡಿಸಿದ್ದಾರೆ’ ಎಂದು ಸುರೇಶ್‌ ಕುಮಾರ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.