ADVERTISEMENT

ಚಾಮರಾಜನಗರ: ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನಕ್ಕೆ ವಿರೋಧ

ಬದನಗುಪ್ಪೆ–ಕೆಲ್ಲಂಬಳ್ಳಿ: ಎರಡನೇ ಹಂತದಲ್ಲಿ 1,189 ಎಕರೆ ಗುರುತಿಸಿರುವ ಕೆಐಡಿಬಿ

ಸೂರ್ಯನಾರಾಯಣ ವಿ
Published 17 ಜೂನ್ 2022, 19:30 IST
Last Updated 17 ಜೂನ್ 2022, 19:30 IST
ಭೂಸ್ವಾಧೀನಕ್ಕಾಗಿ ಗುರುತಿಸಿರುವ ಮೇಲಾಜಿಪುರ ಗ್ರಾಮದ ರೈತರೊಬ್ಬರ ಜಮೀನು
ಭೂಸ್ವಾಧೀನಕ್ಕಾಗಿ ಗುರುತಿಸಿರುವ ಮೇಲಾಜಿಪುರ ಗ್ರಾಮದ ರೈತರೊಬ್ಬರ ಜಮೀನು   

ಚಾಮರಾಜನಗರ: ತಾಲ್ಲೂಕಿನ ಬದನಗುಪ್ಪೆ–ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶವನ್ನು ವಿಸ್ತರಿಸುವುದಕ್ಕಾಗಿಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಡಿಬಿ) 1,189.09 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವುದಕ್ಕೆ ಈ ವ್ಯಾಪ್ತಿಯ ಕೆಲವು ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೈಗಾರಿಕಾ ಪ್ರದೇಶಕ್ಕಾಗಿ ಗುರುತಿಸಿರುವ ಸ್ಥಳಗಳಲ್ಲಿರುವ ಜಮೀನುಗಳು ಫಲತತ್ತೆಯಿಂದ ಕೂಡಿದ್ದು ಹಲವರು ಕೃಷಿ ಮಾಡುತ್ತಿದ್ದಾರೆ. ಹೀಗಾಗಿ, ಆ ಜಮೀನುಗಳನ್ನು ಸ್ವಾಧೀನ ಪಡಿಸಿಕೊಳ್ಳಬಾರದು ಎಂಬುದು ಅವರ ಒತ್ತಾಯ.

ಈ ಸಂಬಂಧ, ಗ್ರಾಮ ವ್ಯಾಪ್ತಿಯ ಮೇಲಾಜಿಪುರ ಗ್ರಾಮದ 13ಕ್ಕೂ ಹೆಚ್ಚು ರೈತರು ಜಿಲ್ಲಾಧಿಕಾರಿ, ಕೆಐಡಿಬಿ ವಿಶೇಷ ಭೂಸ್ವಾಧೀನ ಅಧಿಕಾರಿ ಹಾಗೂ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಅವರಿಗೆ ಮನವಿ ಮಾಡಿದ್ದಾರೆ.

ADVERTISEMENT

ಕೆಐಡಿಬಿಯು ಬದನಗುಪ್ಪೆ–ಕೆಲ್ಲಂಬಳ್ಳಿಯಲ್ಲಿ ಈಗಾಗಲೇ 1,480 ಎಕರೆ ಜಮೀನಿನಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿದೆ. ಈ ಪ್ರದೇಶಕ್ಕೆ ಹೊಂದಿಕೊಂಡಂತೆ ಬದನಗುಪ್ಪೆ, ಕೆಲ್ಲಂಬಳ್ಳಿ, ಕಲ್ಲಹಳ್ಳಿ, ಮೇಲಾಜಿಪುರ, ಮರಿಯಾಲ ವ್ಯಾಪ್ತಿಯಲ್ಲಿ ಮತ್ತೆ1,189.09 ಎಕರೆ ಜಮೀನು ಗುರುತಿಸಿ ಭೂಸ್ವಾಧೀನ ಸಂಬಂಧ ಈ ವರ್ಷದ ಜನವರಿ 29ರಂದು ಗೆಜೆಟ್‌ ಅಧಿಸೂಚನೆಯನ್ನೂ ಸರ್ಕಾರ ಹೊರಡಿಸಿದೆ.

ಕೆಲ್ಲಂಬಳ್ಳಿಯಲ್ಲಿ ಹೊಸದಾಗಿ 599.12 ಎಕರೆ ಹಾಗೂ ಬದನಗುಪ್ಪೆ ಗ್ರಾಮದಲ್ಲಿ 589.37 ಎಕರೆ ಜಾಗ ಗುರುತಿಸಲಾಗಿದೆ. ಕೆಲ್ಲಂಬಳ್ಳಿಯಲ್ಲಿ 494.3 ಎಕರೆ ಜಾಗ 366 ಕುಟುಂಬಗಳ ಅನುಭವದಲ್ಲಿದೆ. ಬದನಗುಪ್ಪೆಯಲ್ಲಿ 408.02 ಎಕರೆ ಜಾಗ 305 ಕುಟುಂಬಗಳಿಗೆ ಸೇರಿದೆ.

ಕೆಐಡಿಬಿಯು ಜಮೀನು ಮಾಲೀಕರಿಗೆ ನೋಟಿಸ್‌ಗಳನ್ನು ಜಾರಿ ಮಾಡಿದೆ. ಭೂಸ್ವಾಧೀನ ಪಡಿಸುವ ವಿಚಾರದಲ್ಲಿ ಆಕ್ಷೇಪಣೆಗಳಿದ್ದರೆ ತಿಳಿಸುವಂತೆ ಸೂಚಿಸಿದೆ. ಪ್ರತಿ ಊರಿನವರಿಗೂ ಒಂದೊಂದು ದಿನ ನಿಗದಿ ಪಡಿಸಲಾಗಿದೆ. ಮೈಸೂರಿನಲ್ಲಿರುವ ವಿಶೇಷ ಭೂಸ್ವಾಧೀನ ಅಧಿಕಾರಿ ಕಚೇರಿಗೆ ತೆರಳಿ ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ.

ರೈತರ ವಾದ ಏನು?: ಹಿಂದೆ ಕೈಗಾರಿಕಾ ಪ್ರದೇಶಕ್ಕೆ ಭೂಸ್ವಾಧೀನ ಮಾಡಿದ ಜಾಗ ಬರಡಾಗಿತ್ತು. ಕೃಷಿಗೆ ಪೂರಕ ವಾತಾವರಣ ಇರಲಿಲ್ಲ. ಹಾಗಾಗಿ, ಸ್ವಾಧೀನ ಮಾಡಿದಾಗ ಯಾರೂ ವಿರೋಧ ಮಾಡಿರಲಿಲ್ಲ. ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪಡಿಸಿ ಆರು ವರ್ಷ ಕಳೆದರೂ ಕೈಗಾರಿಕೆಗಳು ಬಂದಿಲ್ಲ. ಹೀಗಿರುವ ಮತ್ತೆ ಪ್ರದೇಶ ವಿಸ್ತರಣೆ ಮಾಡುವ ಅಗತ್ಯವಾದರೂ ಏನು ಎಂಬುದು ಸ್ಥಳೀಯ ಕೆಲವು ರೈತರ ಪ್ರಶ್ನೆ.

‘ಈಗ ಗುರುತಿಸಲಾಗಿರುವ ಪ್ರದೇಶದಲ್ಲಿ ಫಲವತ್ತಾದ ಕೃಷಿ ಜಮೀನುಗಳಿವೆ. ತೆಂಗು, ಅಡಿಕೆ ಸೇರಿದಂತೆ ಹಲವು ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ. ಈಗ ಮರಿಯಾಲ, ಮೇಲಾಜಿಪುರ ಗ್ರಾಮದ ಅರ್ಧದವರೆಗೂ ಸ್ಥಳ ಗುರುತಿಸಲಾಗಿದೆ. ಜಾಗ ಸ್ವಾಧೀನ ಮಾಡಿಕೊಂಡರೆ ಸ್ಥಳೀಯರು ವಲಸೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ. ಇದರ ಜೊತೆಗೆ ಮೂರನೇ ಹಂತದ ಕೈಗಾರಿಕಾ ಪ್ರದೇಶ ವಿಸ್ತರಣೆ ನಡೆಯಲಿದೆ ಎಂಬ ವದಂತಿ ಹಬ್ಬಿದೆ’ ಎಂದು ಮೇಲಾಜಿಪುರದ ರೈತ ಶಿವಕುಮಾರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೃಷಿಗೆ ಪೂರಕ ವಾತಾವರಣ: ‘ಕೃಷಿಗೆ ಯೋಗ್ಯವಿಲ್ಲದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಿ. ಆದರೆ, ಕೃಷಿ ಮಾಡುತ್ತಿರುವ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವುದು ಸರಿಯಲ್ಲ.ಮಳೆಯಾಶ್ರಿತ ಜಮೀನನನ್ನು ಹೊಂದಿರುವವರು ಭೂಮಿ ನೀಡಲು ಒಪ್ಪಿರಬಹುದು. ಆದರೆ, ವ್ಯವಸಾಯ ಮಾಡುತ್ತಿರುವವರು ಒಪ್ಪಿಲ್ಲ’ ಎಂದು ಅವರು ಹೇಳಿದರು.

‘ಕೆರೆ ನೀರು ತುಂಬಿಸುವ ಯೋಜನೆ ಅನುಷ್ಠಾನಗೊಂಡ ಬಳಿಕ ಗ್ರಾಮದ ಸುತ್ತಲಿನ ಕೆಲವು ಕೆರೆಗಳಿಗೆ ನೀರು ಹರಿದಿರುವುದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿದೆ. ಕೊಳವೆ ಬಾವಿ ಕೊರೆಸಿದರೆ ನೀರು ಬರುತ್ತದೆ. ಹಾಗಾಗಿ, ರೈತರು ಈಗ ನೀರಾವರಿ ಮಾಡಿಕೊಂಡು ಕೃಷಿ ಮಾಡಿಕೊಳ್ಳುವತ್ತ ಹೆಜ್ಜೆ ಹಾಕಿದ್ದಾರೆ. ಹೀಗಿರುವಾಗ ಭೂಸ್ವಾಧೀನ ಮಾಡುವುದು ಎಷ್ಟು ಸರಿ’ ಎಂದು ಸ್ಥಳೀಯ ರೈತರು ಪ್ರಶ್ನಿಸಿದರು.

ಜಮೀನು ಬೆಲೆ ನಿಗದಿಯಾಗಿಲ್ಲ: ಈ ಹಿಂದೆ ಕೈಗಾರಿಕಾ ಪ್ರದೇಶಕ್ಕೆ ಜಮೀನು ಸ್ವಾಧೀನ ಪಡಿಸಿದ ಸಂದರ್ಭದಲ್ಲಿ ಕೆಐಡಿಬಿ ಎಕರೆಗೆ ₹20 ಲಕ್ಷ ನೀಡಿತ್ತು. ಈ ಬಾರಿಯ ಬೆಲೆ ಇನ್ನೂ ನಿಗದಿಯಾಗಿಲ್ಲ. ಆದರೆ, ಎಕರೆಗೆ ₹30 ಲಕ್ಷಕ್ಕೂ ಹೆಚ್ಚು ಬೆಲೆ ಸಿಗಲಿದೆ ಎಂದು ಹೇಳುತ್ತಾರೆ ರೈತರು.

‘ಈಗ ಗುರುತಿಸಿರುವ ಜಮೀನುಗಳಲ್ಲಿ ಕೆಲವರು ಕೃಷಿ ಮಾಡುತ್ತಿರಬಹುದು. ಆದರೆ, ಈ ಪ್ರಮಾಣ ತುಂಬಾ ಕಡಿಮೆ ಇದೆ. ಶೇ 80ಕ್ಕೂ ಹೆಚ್ಚು ಪ್ರದೇಶ ಖಾಲಿ ಬಿದ್ದಿದೆ. ಹಿಂದೆಯೂ ಕೆಲವು ರೈತರು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಜಮೀನು ಕೊಡಲು ಒಪ್ಪಿದ್ದರು. ಕೆಐಡಿಬಿಯು ರೈತರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಜಮೀನು ಸ್ವಾಧೀನ ಪಡಿಸಿಕೊಳ್ಳುತ್ತದೆ’ ಎಂದು ಜಿಲ್ಲೆಯ ಕೈಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್‌ ಅವರು ಪ್ರತಿಕ್ರಿಯಿಸಿ, ‘ಕೆಐಡಿಬಿಯು ಪ್ರದೇಶ ಅಭಿವೃದ್ಧಿ ಪಡಿಸುತ್ತಿದ್ದು, ಭೂಸ್ವಾಧೀನ ಸೇರಿದಂತೆ ಎಲ್ಲವನ್ನೂ ಅದೇ ನೋಡಿಕೊಳ್ಳುತ್ತದೆ. ಇದರಲ್ಲಿ ಜಿಲ್ಲಾಡಳಿತದ ಪಾತ್ರ ಇಲ್ಲ. ಹಾಗಿದ್ದರೂ, ಗುರುತಿಸುವ ಸ್ಥಳದಲ್ಲಿ ಸರ್ಕಾರಿ ಜಮೀನು ಅಥವಾ ಅಕ್ರಮ ಸಕ್ರಮದಲ್ಲಿ ರೈತರಿಗೆ ನೀಡಲಾಗಿರುವ ಜಮೀನುಗಳಿವೆ ಇದೆಯೇ ಎಂಬುದನ್ನು ಪರಿಶೀಲನೆ ನಡೆಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಲಾಗಿದೆ’ ಎಂದರು.

*
ಕೃಷಿ ಜಮೀನುಗಳನ್ನು ಸ್ವಾಧೀನ ಮಾಡುವುದನ್ನು ವಿರೋಧಿಸಿ ನಾವು ಈಗಾಗಲೇ ಜಿಲ್ಲಾಧಿಕಾರಿ, ಭೂಸ್ವಾಧೀನ ಅಧಿಕಾರಿ, ಕೈಗಾರಿಕಾ ಸಚಿವರಿಗೆ ಮನವಿ ಮಾಡಿದ್ದೇವೆ
-ಶಿವಕುಮಾರ್‌, ಮೇಲಾಜಿಪುರ

*
ಜಮೀನು ಸ್ವಾಧೀನ ವಿಚಾರ ಕೆಐಡಿಬಿಗೆ ಬರುತ್ತದೆ. ಆದರೆ, ಗುರುತಿಸಿರುವ ಜಮೀನುಗಳ ಮಾಲೀಕತ್ವದ ಸ್ಥಿತಿಗತಿ ಪರಿಶೀಲಿಸಲು ತಹಶೀಲ್ದಾರ್‌ಗೆ ಸೂಚಿಸಲಾಗಿದೆ
-ಚಾರುಲತಾ ಸೋಮಲ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.