ಚಾಮರಾಜನಗರ: ಐದು ಹುಲಿಗಳ ಹತ್ಯೆ ನಡೆದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿರುವ 110ಕ್ಕೂ ಹೆಚ್ಚು ಸಿಬ್ಬಂದಿಗೆ ನಾಲ್ಕು ತಿಂಗಳುಗಳಿಂದ ವೇತನ ಬಿಡುಗಡೆಯಾಗಿಲ್ಲ.
ಅರಣ್ಯದೊಳಗೆ ಕಳ್ಳಬೇಟೆ, ಮರಗಳವು, ಅತಿಕ್ರಮ ಪ್ರವೇಶದಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವಲ್ಲಿ ಶ್ರಮಿಸುತ್ತಿರುವ ಕಳ್ಳಬೇಟೆ ತಡೆ ಶಿಬಿರದ ವಾಚರ್‌ಗಳು, ಕಂಪ್ಯೂಟರ್ ಆಪರೇಟರ್‌ಗಳು ವೇತನ ಬಾರದೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗಟ್ಟಿಯಾಗಿ ಪ್ರಶ್ನಿಸಲಾಗದೆ ಅಸಹಾಯಕರಾಗಿದ್ದಾರೆ.
ಮಲೆ ಮಹದೇಶ್ವರ ವನ್ಯಜೀವಿ ವಿಭಾಗ 949 ಚದರ ಕಿ.ಮೀ ವಿಸ್ತೀರ್ಣ ಹೊಂದಿದ್ದು ಹೂಗ್ಯಂ, ಪಾಲಾರ್, ಎಂ.ಎಂ ಹಿಲ್ಸ್, ರಾಮಾಪುರ, ಪಿ.ಜಿ ಪಾಳ್ಯ, ಕೊಳ್ಳೇಗಾಲ ಹಾಗೂ ಹನೂರು ಬಫರ್ ವಲಯಗಳನ್ನು ಒಳಗೊಂಡಿದೆ. 7 ವಲಯಗಳಲ್ಲಿ 30ಕ್ಕೂ ಹೆಚ್ಚು ಕಳ್ಳಬೇಟೆ ತಡೆ ಶಿಬಿರಗಳಿದ್ದು 120ಕ್ಕೂ ಹೆಚ್ಚು ವಾಚರ್‌ಗಳು ಹಾಗೂ ಕಂಪ್ಯೂಟರ್ ಆಪರೇಟರ್‌ಗಳು ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮೈಸೂರಿನ ರಂಗನಾಥ ಎಲೆಕ್ಟ್ರಿಕಲ್ಸ್ ಕಂಪನಿಯು ಹೊರಗುತ್ತಿಗೆ ನೌಕರರಿಗೆ ವೇತನ ಪಾವತಿಯ ಟೆಂಡರ್ ಪಡೆದಿದ್ದು ಮಾರ್ಚ್‌ನಿಂದ ಜೂನ್‌ವರೆಗಿನ ಪಾವತಿಸಿಲ್ಲ. 8 ತಿಂಗಳುಗಳಿಂದ 16ಸಾವಿರ ಸಂಕಷ್ಟ ಪರಿಹಾರ ಭತ್ಯೆಯನ್ನೂ ನೀಡಿಲ್ಲ ಎಂದು ನೌಕರರು ದೂರಿದ್ದಾರೆ.
ವೇದನೆ ತಿಳಿಯುತ್ತಿಲ್ಲ: ‘ಹೂಗ್ಯಂ ವಲಯದಲ್ಲಿ ಈಚೆಗೆ 5 ಹುಲಿಗಳ ಸಾವಿನ ಪ್ರಕರಣದಲ್ಲಿ ಅರಣ್ಯ ಇಲಾಖೆಯ ಕೆಳಹಂತದ ಸಿಬ್ಬಂದಿಯ ಕರ್ತವ್ಯ ನಿರ್ಲಕ್ಷ್ಯದತ್ತ ಬೊಟ್ಟು ಮಾಡಲಾಗುತ್ತಿದೆ. 4 ತಿಂಗಳಿನಿಂದ ವೇತನವಿಲ್ಲದೆ ದುಡಿಯುತ್ತಿರುವ ಸಿಬ್ಬಂದಿಯ ಮಾನಸಿಕ ವೇದನೆ ಯಾರಿಗೂ ತಿಳಿಯುತ್ತಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಿಬ್ಬಂದಿಯೊಬ್ಬರು ಕಣ್ಣೀರು ಹಾಕಿದರು.
‘ಕಳ್ಳಬೇಟೆ ತಡೆ ಶಿಬಿರದ ವಾಚರ್‌ಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿ ಸಿಬ್ಬಂದಿಯೂ ಕಾಡಿನೊಳಗೆ ನಿತ್ಯ ಕನಿಷ್ಠ 15 ಕಿ.ಮೀ. ನಡೆಯುತ್ತಾ ಕಳ್ಳಬೇಟೆ ತಡೆ, ಪತ್ತೆ ಸಹಿತ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕು. ಅರಣ್ಯದೊಳಗೆ ಕಂಡುಬರುವ ವಿದ್ಯಮಾನಗಳನ್ನು ಹಿರಿಯ ಅಧಿಕಾರಿಗಳಿಗೆ ವರದಿ ಮಾಡಬೇಕು’ ಎಂದು ಅವರು ತಿಳಿಸಿದರು.
ಸಮಯದ ಮಿತಿ ಇಲ್ಲದೆ ದುಡಿದರೂ ತಿಂಗಳಿಗೆ 26ದಿನಗಳ ವೇತನ ನೀಡಲಾಗುತ್ತಿದೆ. ಪ್ರತಿ ತಿಂಗಳು ಸಾಲ ಮಾಡುವ ಪರಿಸ್ಥಿತಿ ಎದುರಾಗಿದೆ. ಬೇಸಿಗೆಯಲ್ಲಿ ದಟ್ಟಾರಣ್ಯದೊಳಗೆ ಬೆಂಕಿ ರೇಖೆಗಳ ನಿರ್ಮಾಣ, ಕಾಲುದಾರಿಗಳನ್ನು ಸ್ವಚ್ಛಗೊಳಿಸುವುದು ಸೇರಿದಂತೆ ಶ್ರಮದಾಯಕ ಕೆಲಸ ಮಾಡಿದರೂ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.
ಬಿಆರ್‌ಟಿ ಸಿಬ್ಬಂದಿಗೂ ವೇತನವಿಲ್ಲ: ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಯಳಂದೂರು, ಕೊಳ್ಳೇಗಾಲ, ಬೈಲೂರು ವನ್ಯಜೀವಿ ವಲಯಗಳಲ್ಲಿ ಕಾರ್ಯನಿರ್ವಹಿಸುವ 120 ಹೊರಗುತ್ತಿಗೆ ನೌಕರರಿಗೆ 3 ತಿಂಗಳ ವೇತನ ಬಾಕಿ ಹಾಗೂ 10 ತಿಂಗಳು ಪಿಎಫ್, ಇಎಸ್‌ಐ ಬಾಕಿ ಇರುವ ದೂರುಗಳಿವೆ.
ವೇತನ ಪಾವತಿಗೆ ಟೆಂಡರ್ ಪಡೆದಿರುವ ಸಂಸ್ಥೆಗೆ, ಮೇನಲ್ಲೇ ಅಧಿಕಾರಿಗಳು ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರೂ ಇದುವರೆಗೂ ಸ್ಪಂದನೆ ದೊರೆತಿಲ್ಲ ಎನ್ನಲಾಗಿದೆ.
ಕಳ್ಳಬೇಟೆ ತಡೆ ಶಿಬಿರದಲ್ಲಿ 110ಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿ
ಮೂಲಸೌಕರ್ಯಗಳ ಕೊರತೆ ಮಧ್ಯೆಯೂ ಕರ್ತವ್ಯ
ಬಾಕಿ ವೇತನಕ್ಕಾಗಿ ಅಂಗಲಾಚಿದರೂ ಸಿಗದ ಸ್ಪಂದನೆ
ಪ್ರಶ್ನಿಸಿದವರಿಗೆ ಮಾತ್ರ ಪಿಎಫ್ ಇಎಸ್‌ಐ ವಂತಿಗೆ ಪಾವತಿಸಲಾಗಿದೆ. ಬಹಳಷ್ಟು ಮಂದಿ ಎರಡೂ ಸೌಲಭ್ಯಗಳಿಂದ ವಂಚಿತರಾಗಿದ್ದೇವೆಹೊರಗುತ್ತಿಗೆ ಸಿಬ್ಬಂದಿ
ಮಾರ್ಚ್ ಹಾಗೂ ಏಪ್ರಿಲ್ ವೇತನವನ್ನು ತಕ್ಷಣ ನೌಕರರ ಖಾತೆಗೆ ನೇರವಾಗಿ ಶೀಘ್ರದಲ್ಲೇ ಜಮಾ ಮಾಡಲಾಗುವುದುರಂಗನಾಥ ಟೆಂಡರ್‌ದಾರ
‘ಬಾಕಿ ವೇತನ ಸಮಸ್ಯೆ ಬಗೆಹರಿದಿದೆ’
‘ಮೈಸೂರಿನ ಆರ್.ಸಿ ಬ್ಯುಸಿನೆಸ್ ಸೆಲ್ಯೂಷನ್ಸ್ ಸಂಸ್ಥೆಗೆ ವೇತನ ಪಾವತಿಯ ಟೆಂಡರ್ ಪಡೆದಿದ್ದು ವೇತನ ಪಾವತಿಯಲ್ಲಿ ವಿಳಂಬವಾಗಿತ್ತು. ತಾಂತ್ರಿಕ ಸಮಸ್ಯೆ ಹಾಗೂ ಗೊಂದಲಗಳು ಬಗೆಹರಿದಿದ್ದು ಹೊರಗುತ್ತಿಗೆ ನೌಕರರ ಖಾತೆಗೆ ಬಾಕಿ ವೇತನ ಜಮೆ ಮಾಡಲಾಗುತ್ತಿದೆ’ ಎಂದು ಬಿಆರ್‌ಟಿ ಹುಲಿ ಸಂರಕ್ಷಿತ ವಲಯದ ನಿರ್ದೇಶಕ ಶ್ರೀಪತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.