ಯಳಂದೂರು: ಹಳ್ಳಿಯ ಸಾವಿರಾರು ಮಕ್ಕಳಿಗೆ ‘ಅಕ್ಷರ’ ಕಲಿಸಿರುವ ಕಾಗಲವಾಡಿಯ ಸಿದ್ದಯ್ಯ ಮೇಷ್ಟ್ರು ಶಿಕ್ಷಕ ವೃತ್ತಿಗೆ ವಿದಾಯ ಹೇಳಿದ ಬಳಿಕವೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಎಲ್ಲರ ಪ್ರೀತಿ, ಗೌರವಗಳಿಗೆ ಪಾತ್ರರಾಗಿದ್ದಾರೆ.
ಗಾಂಧಿವಾದಿಯಾಗಿ, ಗ್ರಾಮದ ಜನರ ಪಾಲಿಗೆ ಸಾಮಾಜಿಕ ಚಿಂತಕನಾಗಿ, ಮಕ್ಕಳಿಗೆ ಸ್ಫೂರ್ತಿತುಂಬುವ ಗುರುವಾಗಿ ಇಳಿ ವಯಸ್ಸಿನಲ್ಲೂ ಸಕ್ರಿಯರಾಗಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
70ರ ದಶಕದಲ್ಲಿ ಯಳಂದೂರು ಸಮೀಪದ ಗೂಳಿಪುರ ಸುತ್ತಮುತ್ತಲಿನ ಕುಗ್ರಾಮಗಳಲ್ಲಿ ಅಕ್ಷರದ ಹಣತೆ ಹಚ್ಚಿದ ಸಿದ್ದಯ್ಯ ಮೇಷ್ಟ್ರು ನಿವೃತ್ತರಾಗಿ ಒಂದೂವರೆ ದಶಕ ಕಳೆದಿದೆ. ಆದರೂ ಇಂದಿಗೂ ಅವರ ಅಪಾರ ಶಿಷ್ಯವರ್ಗ ಗುರುವಿನ ಸೇವೆಯನ್ನು ಧನ್ಯತೆಯಿಂದ ಸ್ಮರಿಸುತ್ತಾರೆ. ಶಿಕ್ಷಣದ ಜೊತೆಗೆ ಅರಿವಿನ ಹಾಗೂ ಮಾನವೀಯ ಮೌಲ್ಯಗಳ ಪಾಠ ಹೇಳಿಕೊಟ್ಟಿರುವ ಗುರುಗಳನ್ನು ಹತ್ತಾರು ಊರು-ಕೇರಿಗಳ ಜನರು ಗೌರವಿಸುತ್ತಾರೆ.
ನಾಲ್ಕು ದಶಕಗಳ ಹಿಂದೆ ಹತ್ತಾರು ಹಳ್ಳಿಗೊಂದು ಶಾಲೆ ಇರುವ ಸಂದರ್ಭದಲ್ಲಿ ಶಿಕ್ಷಣ ಎಲ್ಲರ ಕೈಗೆಟುಕದಂತಹ ಸನ್ನಿವೇಶದಲ್ಲಿ ಎಲ್ಲ ಸಮುದಾಯಗಳ ಮಕ್ಕಳ ಕಲಿಗೆ ಒತ್ತು ನೀಡಿದವರು ಸಿದ್ದಯ್ಯ ಮೇಷ್ಟ್ರು. ಗ್ರಾಮಗಳಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳ ಕಲಿಕೆಗೆ ಒತ್ತು ನೀಡಿದವರು. ಪೋಷಕರ ಮನವೊಲಿಸಿ ಬಾಲೆಯರನ್ನು ಶಾಲೆಯತ್ತ ಹೆಜ್ಜೆ ಹಾಕುವಂತೆ ಮಾಡುವಲ್ಲಿ ಅವರ ಶ್ರಮ ಅಪಾರ ಎನ್ನುತ್ತಾರೆ ಶಿಷ್ಯಂದಿರು.
ಸಮಾಜದಿಂದ ಶಾಲೆಗೆ ಅಗತ್ಯ ಸಂಪನ್ಮೂಲ ಕ್ರೂಡೀಕರಿಸುವ ಮೂಲಕ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣ ಪಡೆಯಲು ನೆರವಾಗಿದ್ದಾರೆ. ತರಗತಿಗಳಲ್ಲಿ ಶಿಸ್ತು, ಪ್ರಾಯೋಗಿಕ ಕಲಿಕಾ ಚಟುವಟಿಕೆ, ಕನ್ನಡದ ಜತೆ ಇಂಗ್ಲೀಷ್ ಪದಗಳ ಕಲಿಕೆಗೆ ಒತ್ತು, ತಪ್ಪು ಮಾಡಿದಾಗ ಮುಲಾಜಿಲ್ಲದೆ ತಿದ್ದುತ್ತಿದ್ದ ಪರಿ, ರಾಷ್ಟ್ರೀಯ ಹಬ್ಬಗಳಲ್ಲಿ ಮಕ್ಕಳನ್ನು ಅಣಿಗೊಳಿಸುತ್ತಿದ್ದ ರೀತಿ ಇಂದಿಗೂ ಕಾಡುತ್ತವೆ ಎನ್ನುತ್ತಾರೆ ಗೂಳಿಪುರ ಗ್ರಾಮದ ಮುಖಂಡ ಮೋಹನ್ ಕುಮಾರ್ ಹಾಗೂ ನಂದೀಶ್.
ಮೌಲ್ಯಗಳ ಬಿತ್ತಿದ ಮೇಸ್ಟ್ರು:
ಕ್ರಿಯಾಶೀಲ ವ್ಯಕ್ತಿತ್ವದ ಸಿದ್ದಯ್ಯ ಮೇಷ್ಟ್ರು ಹರವೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿ, ಗೂಳಿಪುರ ಶಾಲೆಗೆ ವರ್ಗಾವಣೆಗೊಂಡು ಪ್ರೌಢಶಾಲೆಯಲ್ಲಿ ಬೋಧಿಸುವಾಗ ನಿವೃತ್ತರಾದರು. ಶಿಕ್ಷಕ ವೃತ್ತಿಯ ಬಳಿಕವೂ ಗ್ರಾಮಗಳಲ್ಲಿ ಕಥೆ ಓದಿಸುವ ಕಾರ್ಯ, ದೇವರ ನಾಮಗಳನ್ನು ಹಾಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜನಪದ ಸಂಸ್ಕೃತಿ ಹಾಗೂ ಸಾಮಾಜಿಕ, ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎನ್ನುತ್ತಾರೆ ಶಿಷ್ಯವರ್ಗ.
ದೇಹಕ್ಕೆ ವಯಸ್ಸಾಗಿದ್ದರೂ ಕಲಿಸುವ ಮತ್ತು ಕಲಿಯುವ ಉಮೇದು ತಗ್ಗಿಲ್ಲ. ಅಂದು ಕಲಿತ ಮಕ್ಕಳು ಇಂದು ನಟರು, ಶಿಕ್ಷಕರು, ರಾಜಕಾರಣಿಗಳು ಹಾಗೂ ಪತ್ರಿಕೋದ್ಯಮದಲ್ಲೂ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರೂ ಮಕ್ಕಳಿಂದ ಕಲಿಯುವುದು ಸಾಕಷ್ಟಿದೆ. ಶಿಕ್ಷಣ ಎಂದರೆ ಶಿಸ್ತು, ಅಚ್ಚುಕಟ್ಟುತನ, ಸ್ಪೂರ್ತಿ ತುಂಬುವ ಶ್ರೇಷ್ಠ ಕಾರ್ಯ ಹಾಗೂ ಮಾನವೀಯ ಕಾಳಜಿಯೂ ಸೇರಿದೆ ಎನ್ನುತ್ತಾರೆ ಸಿದ್ದಯ್ಯ ಮೇಷ್ಟ್ರು.
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಮೇಷ್ಟ್ರು ಮಾನವೀಯ ಮೌಲ್ಯಗಳ ಪಾಠ ಹೇಳುವ ಶಿಕ್ಷಕ ಗಾಂಧಿವಾದಿಯಾಗಿಯೂ ಗಮನ ಸೆಳೆದಿರುವ ಸಿದ್ದಯ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.