ADVERTISEMENT

ಗ್ರಾ.ಪಂ.ಚುನಾವಣೆ: ಕೊಳ್ಳೇಗಾಲದ ಸಿದ್ದಯ್ಯನಪುರದಲ್ಲಿ ಆಗಿದ್ದೇನು?

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 19:30 IST
Last Updated 27 ಡಿಸೆಂಬರ್ 2020, 19:30 IST
ನಾಲ್ಕು ಮತಗಳನ್ನು ಚಲಾಯಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸಿದ್ದಯ್ಯನಪುರ ಗ್ರಾಮದ ವಾರ್ಡ್‌–1ರ ಮತದಾರರು ಮತದಾನದಿಂದ ದೂರ ಉಳಿದರು
ನಾಲ್ಕು ಮತಗಳನ್ನು ಚಲಾಯಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸಿದ್ದಯ್ಯನಪುರ ಗ್ರಾಮದ ವಾರ್ಡ್‌–1ರ ಮತದಾರರು ಮತದಾನದಿಂದ ದೂರ ಉಳಿದರು   

ಚಾಮರಾಜನಗರ: ನಾಲ್ಕು ಮತ ಹಾಕಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದ ಕೊಳ್ಳೇಗಾಲ ತಾಲ್ಲೂಕಿನ ಸಿದ್ದಯ್ಯನಪುರದ ವಾರ್ಡ್–1ರಲ್ಲಿ ಗ್ರಾಮಸ್ಥರು ಐದೂ ಮುಕ್ಕಾಲು ಗಂಟೆ ಮತದಾನದಿಂದ ದೂರ ಉಳಿದರು.

ವಾರ್ಡ್–1ರಲ್ಲಿ ನಾಲ್ಕು ಸದಸ್ಯ ಸ್ಥಾನಗಳಿವೆ. ಈ ಪೈಕಿ ಎರಡು ಸ್ಥಾನಗಳು ಸಾಮಾನ್ಯ, ಸಾಮಾನ್ಯ–ಮಹಿಳೆಗೆ ಮೀಸಲಾಗಿದ್ದರೆ, ಇನ್ನೆರಡು ಸ್ಥಾನಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಜಾತಿ–ಮಹಿಳೆಗೆ ಮೀಸಲಾಗಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಎರಡು ಸ್ಥಾನಗಳಿಗೆ ಯಾರೂ ಸ್ಪರ್ಧಿಸಿರಲಿಲ್ಲ. ಉಳಿದ ಎರಡು ಸ್ಥಾನಗಳಿಗೆ 11 ಮಂದಿ ಸ್ಪರ್ಧಿಸಿದ್ದರು.

ನಾಲ್ಕು ಸ್ಥಾನಗಳಿಂದಲೂ ಅಭ್ಯರ್ಥಿಗಳು ಸ್ಪರ್ಧಿಸಿದ್ದರೆ ಮತದಾರರು ನಾಲ್ಕು ಮತಗಳನ್ನು ಹಾಕಬೇಕಿತ್ತು. ಎರಡು ಸ್ಥಾನಗಳಿಗೆ ಅಭ್ಯರ್ಥಿಗಳು ಇದ್ದುದರಿಂದ ಎರಡು ಮತಗಳನ್ನು ಮಾತ್ರ ಚಲಾಯಿಸಬೇಕು ಎಂದು ಮತಗಟ್ಟೆ ಅಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದರು.

ADVERTISEMENT

ಆದರೆ, ಗ್ರಾಮದ ಜನರು ಆರಂಭದಿಂದಲೂ ನಾಲ್ಕು ಮತಗಳನ್ನು ಚಲಾಯಿಸಬೇಕಾಗುತ್ತದೆ ಎಂದೇ ತಿಳಿದುಕೊಂಡಿದ್ದರು. ಅಭ್ಯರ್ಥಿಗಳು ಕೂಡ ಅದೇ ರೀತಿ ಪ್ರಚಾರ ಮಾಡಿದ್ದರು. ಭಾನುವಾರ ಮತದಾನಕ್ಕೆ ತೆರಳುವವರೆಗೂ ಎರಡು ಮತಗಳು ಮಾತ್ರ ಇರುವುದು ಎಂಬುದು ಅವರಿಗೆ ಗೊತ್ತಿರಲಿಲ್ಲ. ಹಾಗಾಗಿ, ವಿಷಯ ತಿಳಿಯುತ್ತಿದ್ದಂತೆಯೇ ಮತದಾನದಿಂದ ದೂರ ಉಳಿದ ಗ್ರಾಮಸ್ಥರು, ನಾಲ್ಕು ಮತಗಳನ್ನು ಹಾಕಲು ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ತಹಶೀಲ್ದಾರ್‌ ಕುನಾಲ್‌ ಹಾಗೂ ಇತರೆ ಅಧಿಕಾರಿಗಳು ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿಯನ್ನು ವಿವರಿಸಿದರೂ ಗ್ರಾಮಸ್ಥರು ಹಾಗೂ ಅಭ್ಯರ್ಥಿಗಳು ಕೇಳಲಿಲ್ಲ. ಕೊನೆಗೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಬಂದು ನಿಯಮಗಳನ್ನು ವಿವರಿಸಿ ಮನವೊಲಿಸಲು ಯತ್ನಿಸಿದರೂ ಜನರು ಮನಸ್ಸು ಮಾಡಲಿಲ್ಲ. ಸ್ವಲ್ಪ ಹೊತ್ತಿನ ನಂತರ ಎಲ್ಲರೂ ಸಭೆ ಸೇರಿ, ಮತದಾನಕ್ಕೆ ಒಪ್ಪಿದರು. 12.40ರ ನಂತರ ವಾರ್ಡ್‌ನಲ್ಲಿ ಮತದಾನ ಆರಂಭವಾಯಿತು. ಮತದಾನ ವಿಳಂಬವಾಗಿದ್ದರಿಂದ ಸಂಜೆ ಹೆಚ್ಚುವರಿ ಕಾಲಾವಕಾಶ ನೀಡಲಾಯಿತು.

ಅಭ್ಯರ್ಥಿಗಳು ಇಲ್ಲದ ಎರಡು ಸ್ಥಾನಗಳಿಗೆ, ಉಳಿದ ಎರಡು ಸ್ಥಾನಗಳಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿದ ಎರಡನೇ ಅಭ್ಯರ್ಥಿ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.