ADVERTISEMENT

ಗುಂಡ್ಲುಪೇಟೆ: ಸಂಭ್ರಮದ ಶ್ರೀಲಕ್ಷ್ಮೀ ವರದರಾಜಸ್ವಾಮಿ ಬ್ರಹ್ಮ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 1:34 IST
Last Updated 2 ಫೆಬ್ರುವರಿ 2026, 1:34 IST
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ವರದರಾಜಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಗುಂಡ್ಲುಪೇಟೆ: ತಾಲ್ಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಶ್ರೀ ಲಕ್ಷ್ಮಿ ವರದರಾಜ ಸ್ವಾಮಿ ಬ್ರಹ್ಮ ರಥೋತ್ಸವ ಸಂಭ್ರದಿಂದ ನಡೆಯಿತು. ಭಾನುವಾರ ಮಧ್ಯಾಹ್ನ ಬಿಸಿಲಿನ ಝಳವನ್ನು ಲೆಕ್ಕಿಸದೆ ಸಾವಿರಾರು ಭಕ್ತರು ಶ್ರೀಲಕ್ಷ್ಮೀ ವರದರಾಜಸ್ವಾಮಿ ಬ್ರಹ್ಮ ರಥೋತ್ಸವ ಕಣ್ತುಂಬಿಕೊಂಡರು. 

ರಥೋತ್ಸವ ಮತ್ತು ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸುಣ್ಣ, ಬಣ್ಣ ಬಳಿದು, ತಿರುಪತಿ ಮಾದರಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ತಾಲ್ಲೂಕಿನ ಭಕ್ತರಷ್ಟೆ ಅಲ್ಲದೆ, ರಾಜ್ಯದ ನಾನಾ ಕಡೆ ಮತ್ತು ತಮಿಳುನಾಡಿನಿಂದ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.

ಲಕ್ಷ್ಮೀ ವರದರಾಜ ಸ್ವಾಮಿಯವರ ಉತ್ಸವ ಮೂರ್ತಿಯನ್ನು ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿಟ್ಟು ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಿಸುವ ಜೊತೆಗೆ ದೇವಾಲಯದ ದಕ್ಷಿಣ ಮತ್ತು ಪಶ್ಚಿಮ ಪಾರ್ಶ್ವದಲ್ಲಿ ಸಮುದಾಯವಾರು ನಿರ್ಮಿಸಿದ್ದ ಹಸಿರು ಚಪ್ಪರಡಿ ಉತ್ಸವ ಮೂರ್ತಿ ಇರಿಸಿ ಪೂಜೆ ಸಲ್ಲಿಸಲಾಯಿತು. ನಂತರ ದೇವಾಲಯದ ಪೂರ್ವಪಾರ್ಶ್ವದಲ್ಲಿ ಬಿದಿರು ಬೊಂಬುಗಳು, ಧ್ವಜ, ಪತಾಕೆ ಇತರೆ ಅಲಂಕಾರಿಕ ವಸ್ತುಗಳಿಂದ ಎತ್ತರವಾಗಿ ಸಿದ್ಧಗೊಂಡಿದ್ದ ರಥದಲ್ಲಿ ಉತ್ಸವಮೂರ್ತಿ ಇರಿಸಿ ಮಹಾ ಮಂಗಳಾರತಿ ನೆರವೇರಿಸಲಾಯಿತು. ತಹಶೀಲ್ದಾರ್ ತನ್ಮಯ್ ರಥೋತ್ಸವಕ್ಕೆ ಈಡುಗಾಯಿ ಒಡೆದು ಚಾಲನೆ ನೀಡಿದರು. ನಂತರ ಭಕ್ತರು ಗೋವಿಂದ.......ಗೋವಿಂದ...... ಎಂದು ಜೈಕಾರ ಕೂಗುತ್ತಾ ರಥ ಎಳೆದರು. ಪ್ರತಿ ಮನೆಯವರು ರಂಗೋಲಿ ಹಾಕಿ ರಥೋತ್ಸವಕ್ಕೆ ಸ್ವಾಗತ ಕೋರಿದ್ದರು. ಖಾಸಗಿ ಬಸ್ ನಿಲ್ದಾಣದ ಹನುಮಂತರಾಯ ದೇವಾಲಯ ಬಳಸಿಕೊಂಡು ಎಳೆದು ತಂದ ರಥೋತ್ಸವ ಮೂಲಸ್ಥಾನದಲ್ಲಿ ಕೊನೆಗೊಂಡಿತು.

ADVERTISEMENT

ಹರಕೆ ಹೊತ್ತಿದ್ದ ಭಕ್ತರು, ದಾನಿಗಳು ಮತ್ತು ಸಮುದಾಯ ಸಂಘಟನೆಯವರು ರಸ್ತೆಯ ಎರಡು ಬದಿಯಲ್ಲಿ ಮಜ್ಜಿಗೆ, ಪಾನಕ, ಮೊಸರನ್ನ, ಪುಳಿಯೊಗರೆ, ರೈಸ್‍ಬಾತ್ ಇತರೆ ತಿಂಡಿ, ತಿನಿಸುಗಳನ್ನು ಭಕ್ತಾದಿಗಳಿಗೆ ವಿತರಿಸಿದರು.

ಜನವೋ ಜನ: ರಥೋತ್ಸವ ಮತ್ತು ಜಾತ್ರೆಯನ್ನು ಗ್ರಾಮದ ಎಲ್ಲಾ ಸಮುದಾಯದ ಜನರು ಒಟ್ಟಾಗಿ ಆಚರಿಸಿ, ಬಂಧುಬಳಗವನ್ನು ಸೇರಿಸಿಕೊಂಡಿದ್ದರು. ಭಾನುವಾರ ವಾರದ ರಜೆ ಮತ್ತು ಸುಗ್ಗಿಯ ಸಮಯವಾಗಿರುವುದರಿಂದ ಜನರು ನಿರೀಕ್ಷೆಗೂ ಮೀರಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಗ್ರಾಮದಲ್ಲಿ ಎತ್ತ ನೋಡಿದರೂ ಜನವೋ ಜನ ಎಂಬಂತೆ ಇತ್ತು.

ರಥೋತ್ಸವದ ಸಾಗುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಸಿಹಿ ತಿನಿಸು, ಐಸ್‍ಕ್ರೀಂ, ಎಳೆನೀರು, ಗೃಹ ಬಳಕೆ ವಸ್ತುಗಳು, ಮಕ್ಕಳ ಆಟಿಕೆಗಳ ಮಾರಾಟ ಜೋರಾಗಿತ್ತು.

ಸೂಕ್ತ ಬಂದೋ ಬಸ್ತ್: ಚಾಮರಾಜನಗರ ಮುಖ್ಯ ರಸ್ತೆಯಲ್ಲೇ ರಥೋತ್ಸವ ನಡೆಯುವ ಹಿನ್ನೆಲೆಯಲ್ಲಿ ಡಿವೈಎಸ್ಪಿ ಸ್ನೇಹರಾಜ್ ರಸ್ತೆಗಳಿದು ಸಂಚಾರ ದಟ್ಟಣೆ ನಿಯಂತ್ರಿಸಿದರು. ರಥ ಎಳೆಯಲು ಮುಂದೆ ಬಂದ ಮಹಿಳೆಯರ ಸುತ್ತಲೂ ಕಮಾಂಡೋ ಪಡೆಯಿಂದ ಹಗ್ಗದ ರಕ್ಷಣೆ ಕೊಡಿಸುವ ಮೂಲಕ ಅನುಕೂಲ ಮಾಡಿದರು. ಚಾಮರಾಜನಗರ ಕಡೆಗೆ ಹೋಗುವ ವಾಹನಗಳಿಗೆ ಬೆರಟಹಳ್ಳಿ ಗ್ರಾಮದ ಸ್ವಾಗತ ಕಮಾನಿನ ಬಳಿ ಎಡಕ್ಕೆ ತಿರುವು ನೀಡಿ ಮತ್ತು ಹಳೆ ಸಂತೆಮಾಳದ ಬಳಿ ಬಲಕ್ಕೆ ತಿರುವು ಕೊಡಿಸುವ ಮೂಲಕ ಸಂಚಾರ ದಟ್ಟಣೆ ನಿಯಂತ್ರಿಸಿದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಎನ್.ಜಯಕುಮಾರ್, ಬೇಗೂರು ಸರ್ಕಲ್ ಇನ್‌ಸ್ಪೆಕ್ಟರ್‌ ಮೋಹಿತ್ ಸಹದೇವ್, ತೆರಕಣಾಂಬಿ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಕೆ.ಎಂ.ಮಹೇಶ್, ಗುಂಡ್ಲುಪೇಟೆ ಪಿಎಸ್‍ಐ ನರೇಶ್‍ಕುಮಾರ್ ಮತ್ತು ಸಿಬ್ಬಂದಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ರಥೋತ್ಸವದಲ್ಲಿ ದೇವಸ್ಥಾನದ ಜಾತ್ರಾ ಸಮಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.