ADVERTISEMENT

ರೈತ ಸಂಘದ ಗುರುಪ್ರಸಾದ್‌ ಎಎಪಿ ಟಿಕೆಟ್‌ ಆಕಾಂಕ್ಷಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 4:03 IST
Last Updated 15 ಮಾರ್ಚ್ 2023, 4:03 IST
ಚಾಮರಾಜನಗರ ಕ್ಷೇತ್ರದ ಎಎಪಿ ಟಿಕೆಟ್‌ ಆಕಾಂಕ್ಷಿ ಗುರುಪ್ರಸಾದ್‌, ಪಕ್ಷದ ಪದಾಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರು ಮಂಗಳವಾರ ಚಾಮರಾಜನಗರದಲ್ಲಿ ಸಭೆ ಸೇರಿ ಚರ್ಚಿಸಿದರು
ಚಾಮರಾಜನಗರ ಕ್ಷೇತ್ರದ ಎಎಪಿ ಟಿಕೆಟ್‌ ಆಕಾಂಕ್ಷಿ ಗುರುಪ್ರಸಾದ್‌, ಪಕ್ಷದ ಪದಾಧಿಕಾರಿಗಳು ಹಾಗೂ ರೈತ ಸಂಘದ ಮುಖಂಡರು ಮಂಗಳವಾರ ಚಾಮರಾಜನಗರದಲ್ಲಿ ಸಭೆ ಸೇರಿ ಚರ್ಚಿಸಿದರು   

ಚಾಮರಾಜನಗರ: ರೈತ ಸಂಘ ಮತ್ತು ಹಸಿರು ಸೇನೆಯ‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಅವರು ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದ್ದು, ಮುಂದಿನ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದಾರೆ.

ಪಕ್ಷದ ಮುಖಂಡರು ಹಾಗೂ ರೈತ ಸಂಘದ ಪ್ರತಿನಿಧಿಗಳೊಂದಿಗೆ ಮಂಗಳವಾರ ನಗರದ ಚಾಮರಾಜೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ರೈತ ಸಂಘ ಮತ್ತು ಎಎಪಿಯ ತತ್ವ, ಸಿದ್ಧಾಂತ, ಉದ್ದೇಶಗಳು ಒಂದೇ ಆಗಿದೆ. ಅರವಿಂದ ಕೇಜ್ರಿವಾಲ್‌ ಅವರ ದೆಹಲಿ ಸರ್ಕಾರದ ಮಾದರಿಯನ್ನು ಗಮನಿಸಿ, ರೈತರು, ಬಡವರ ಪರವಾಗಿ ಕೆಲಸ ಮಾಡಬೇಕು ಎಂಬ ಕಾರಣಕ್ಕೆ ಎಎಪಿ ಸೇರಿದ್ದೇನೆ. ಮುಖಂಡರು ಚಾಮರಾಜನಗರ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ' ಎಂದರು.

'ಎಎಪಿ ಸರ್ಕಾರ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ದೆಹಲಿಯಲ್ಲಿ ಬಡವರಿಗೆ ವಿದ್ಯುತ್, ಆರೋಗ್ಯ ಸೇವೆ ಸೇರಿದಂತೆ ಹಲವು ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದೆ. ನಮ್ಮ ರಾಜ್ಯದಲ್ಲೂ ಇಂತಹ ವ್ಯವಸ್ಥೆ ಬೇಕು. ಅದಕ್ಕಾಗಿ ಎಎಪಿ ಗೆಲ್ಲಬೇಕು’ ಎಂದರು.

ADVERTISEMENT

‘ಉತ್ತಮ ಶಿಕ್ಷಣ ಪಡೆದು, ಉದ್ಯೋಗದಲ್ಲಿದ್ದುಕೊಂಡು ಅದನ್ನು ಬಿಟ್ಟು ವ್ಯವಸಾಯಕ್ಕೆ ಇಳಿದಿದ್ದೇನೆ. 10 ವರ್ಷಗಳಿಂದ ರೈತ ಪರ, ಸಾಮಾಜಿಕ ಹೋರಾಟಗಳಲ್ಲಿ ತೊಡಗಿದ್ದೇನೆ. ಇಡೀ ಕ್ಷೇತ್ರದ ಪರಿಚಯ ಇದೆ. ಜನರ ಕಷ್ಟಗಳ ಬಗ್ಗೆ ಗೊತ್ತಿದೆ. ಜನರಿಗೆ ಅನುಕೂಲ ಕಲ್ಪಿಸುವುದೇ ನನ್ನ ಉದ್ದೇಶ. ಚಾಮರಾಜನಗರ ಕ್ಷೇತ್ರದಿಂದ ನಾನು ಎಎಪಿಯ ಸಂಭವನೀಯ ಅಭ್ಯರ್ಥಿಯಾಗಿದ್ದು, ಕ್ಷೇತ್ರದ ಜನರು ನನ್ನನ್ನು ಬೆಂಬಲಿಸಬೇಕು' ಎಂದು ಗುರುಪ್ರಸಾದ್ ಮನವಿ ಮಾಡಿದರು.

ಎಎಪಿಯ ‌ಜಿಲ್ಲಾ ಉಪಾಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹರೀಶ್, ಕಾರ್ಯದರ್ಶಿ ಕೆಂಪರಾಜು, ರೈತ ಸಂಘ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್, ಮುಖಂಡ ಮಾಡ್ರಹಳ್ಳಿ ಮಹದೇವಪ್ಪ, ಪಕ್ಷದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.