ADVERTISEMENT

ಚಾಮರಾಜನಗರ | ಹಾಸನ, ದಕ್ಷಿಣ ಕನ್ನಡ ತಂಡಗಳ ಪ್ರಾಬಲ್ಯ

ಮೈಸೂರು ವಿಭಾಗಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 7:12 IST
Last Updated 4 ಅಕ್ಟೋಬರ್ 2025, 7:12 IST
ಮೈಸೂರು ವಿಭಾಗಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯ 17 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಜೇತರಾದ ಹಾಸನ ತಂಡ 
ಪ್ರಜಾವಾಣಿ ಚಿತ್ರ: ಸಿ.ಆರ್.ವೆಂಕಟರಾಮು
ಮೈಸೂರು ವಿಭಾಗಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯ 17 ವರ್ಷದೊಳಗಿನವರ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ವಿಜೇತರಾದ ಹಾಸನ ತಂಡ  ಪ್ರಜಾವಾಣಿ ಚಿತ್ರ: ಸಿ.ಆರ್.ವೆಂಕಟರಾಮು   

ಚಾಮರಾಜನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಶಾಲಾ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ 14 ರಿಂದ 17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರ ಮೈಸೂರು ವಿಭಾಗಮಟ್ಟದ ಎರಡು ದಿನಗಳ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಮೊದಲ ದಿನ ದಕ್ಷಿಣ ಕನ್ನಡ ಹಾಗೂ ಹಾಸನ ತಂಡಗಳು ಉತ್ತಮ ಪ್ರದರ್ಶನ ನೀಡಿದವು.

14 ವರ್ಷದೊಳಗಿನವರ ಬಾಲಕಿಯರ ವಿಭಾಗದ ಮೊದಲ ಸುತ್ತಿನಲ್ಲಿ ಮಂಡ್ಯ 17–3 ಪಾಯಿಂಟ್ ಅಂತರದಿಂದ ಉಡುಪಿ ತಂಡವನ್ನು ಸೋಲಿಸಿದರೆ, ಕೊಡುಗು 8–4 ಅಂತರದಿಂದ ಹಾಸನ ತಂಡವನ್ನು, ಮೈಸೂರು 9–1 ಅಂತರದಿಂದ ಚಾಮರಾಜನಗರ ತಂಡವನ್ನು ಮಣಿಸಿತು.

14 ವರ್ಷದೊಳಗಿನವರ ಬಾಲಕರ ವಿಭಾಗದ ಮೊದಲ ಸುತ್ತಿನಲ್ಲಿ ದಕ್ಷಿಣ ಕನ್ನಡ 8–1 ಅಂತರದಲ್ಲಿ ಚಿಕ್ಕಮಗಳೂರು ತಂಡವನ್ನು, ಹಾಸನ 5–4 ಅಂತರದಲ್ಲಿ ಮಂಡ್ಯ ತಂಡವನ್ನು, ಉಡುಪಿ 8–3 ಅಂತರದಲ್ಲಿ ಚಿಕ್ಕಮಗಳೂರು ತಂಡವನ್ನು, ಚಾಮರಾಜನಗರ 5–4 ಅಂತರದಲ್ಲಿ ಕೊಡುಗು ತಂಡವನ್ನ ಪರಾಭವಗೊಳಿಸಿತು. ಇದೇ ವಿಭಾಗದ ಸೆಮಿಫೈನಲ್‌ನಲ್ಲಿ ದಕ್ಷಿಣ ಕನ್ನಡ 8–5 ಅಂತರದಲ್ಲಿ ಮೈಸೂರು ತಂಡವನ್ನು ಸೋಲಿಸಿ ಫೈನಲ್‌ ತಲುಪಿತು.

ADVERTISEMENT

17 ವರ್ಷದೊಳಗಿನವರ ಬಾಲಕಿಯರ ವಿಭಾಗದ ಮೊದಲ ಸುತ್ತಿನಲ್ಲಿ ಹಾಸನ 5–4ರಿಂದ ಹಾಸನ ತಂಡವನ್ನು, ಉಡುಪಿ 6–2 ಅಂತರದಿಂದ ಚಿಕ್ಕಮಗಳೂರು ತಂಡವನ್ನು, ಮಂಡ್ಯ 6–2 ಅಂತರದಲ್ಲಿ ದಕ್ಷಿಣ ಕನ್ನಡವನ್ನು, ಕೊಡಗು 6–0 ಅಂತರದಲ್ಲಿ ಚಾಮರಾಜನಗರ ತಂಡವನ್ನು ಮಣಿಸಿತು. ಇದೇ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಹಾಸನ 8–0 ಅಂತರದಲ್ಲಿ ಮಂಡ್ಯವನ್ನು ಸೋಲಿಸಿತು.

17 ವರ್ಷದೊಳಗಿನವರ ಬಾಲಕರ ವಿಭಾಗದ ಮೊದಲ ಸುತ್ತಿನಲ್ಲಿ ಕೊಡಗು 6–1 ಅಂತರದಲ್ಲಿ ಚಾಮರಾಜನಗರವನ್ನು, ದಕ್ಷಿಣ ಕನ್ನಡ 6–2 ಅಂತರದಲ್ಲಿ ಹಾಸನ ತಂಡವನ್ನು, ಉಡುಪಿ 10–3 ಅಂತರದಲ್ಲಿ ಚಿಕ್ಕಮಗಳೂರು ತಂಡವನ್ನು, ಮೈಸೂರು 7–6 ಅಂತರದಲ್ಲಿ ಮಂಡ್ಯ ತಂಡವನ್ನು ಪರಾಭವಗೊಳಿಸಿತು. ಶನಿವಾರ ಫೈನಲ್ ಪಂದ್ಯಗಳು ನಡೆಯಲಿವೆ.

ಮೈಸೂರು ವಿಭಾಗಮಟ್ಟದ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಹಾಸನ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಉಡುಪಿ ಮತ್ತು ಮಂಡ್ಯ ಹಾಗೂ ಆಥಿತೇಯ ಚಾಮರಾಜನಗರ ಜಿಲ್ಲೆಯ 32 ತಂಡಗಳು ಭಾಗವಹಿಸಿವೆ. ಒಂದು ಜಿಲ್ಲೆಯಿಂದ ತಲಾ ಎರಡು ಬಾಲಕ ಬಾಲಕಿಯರ ತಂಡಗಳು ಸೇರಿ 4 ತಂಡಗಳು ಭಾಗವಹಿಸಿವೆ. ಪ್ರತಿ ಜಿಲ್ಲೆಯಿಂದ 64 ಕ್ರೀಡಾಪಟುಗಳು ತಲಾ ಒಬ್ಬರು ಕೋಚ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದಾರೆ ಎಂದು ಡಿಪಿಇಒ ಆರ್‌.ಶಂಕರ್ ಮಾಹಿತಿ ನೀಡಿದರು.

ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಕ್ರೀಡಾಪಟುಗಳಿಗೆ ಶೌಚಾಲಯ, ಕುಡಿಯುವ ನೀರು, ಆಹಾರ ಹಾಗೂ ತುರ್ತು ಆರೋಗ್ಯ ಸೇವೆ ಸಹಿತ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗಿದೆ, ಬಾಲಕಿಯರಿಗೆ ಬಾಲಕರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಚಾಮರಾಜನಗರ ಹಾಗೂ ಉಡುಪಿ ತಂಡಗಳ  ನಡುವೆ ನಡೆದ ಹಣಾಹಣಿ ಪ್ರಜಾವಾಣಿ ಚಿತ್ರ: ಸಿ.ಆರ್.ವೆಂಕಟರಾಮು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.