
ಹನೂರು: ತಾಲ್ಲೂಕಿನಲ್ಲಿ ಅಂತರ್ಜಲ ವೃದ್ಧಿ, ಕೃಷಿ ಹಾಗೂ ಜನ–ಜಾನುವಾರುಗೆ ಕುಡಿಯುವ ನೀರು ಲಭ್ಯವಾಗಲು ಪೂರಕವಾದ ನೀರಾವರಿ ಯೋಜನೆಗಳ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ದಂಟ್ಟಳ್ಳಿ ಏತ ನೀರಾವರಿ ಹೋರಾಟ ಸಮಿತಿ ನಡೆಸುತ್ತಿರುವ ಪ್ರತಿಭಟನೆ 100 ದಿನ ದಾಟಿದರೂ ಜಿಲ್ಲಾಡಳಿತವಾಗಲಿ, ಸ್ಥಳೀಯ ಜನಪ್ರತಿನಿಧಿಗಳಾಗಲಿ ಸ್ಪಂದನೆ ನೀಡದಿರುವುದು ತಾಲ್ಲೂಕಿನ ರೈತರು ಹಾಗೂ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರೈತರು ಆರಂಭಿಸಿರುವ ಅಹೋರಾತ್ರಿ ಧರಣಿ 104 ದಿನಗಳಿಗೆ ಕಾಲಿಟ್ಟಿದೆ. ರೈತ ಮಹಿಳೆಯರು, ವೃದ್ಧರು ಹಾಗೂ ಬಡ ರೈತರ ಕೂಗು ಸರ್ಕಾರ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಕೇಳದೆ ಅರಣ್ಯ ರೋಧನವಾಗಿದೆ.
ಹೋರಾಟದ ಹಾದಿ: ರಾಮಪುರ ಹೋಬಳಿ ವ್ಯಾಪ್ತಿಯ ಮಾರ್ಟಳ್ಳಿ, ಕುರಟ್ಟಿ ಹೊಸೂರು, ಶೆಟ್ಟಳ್ಳಿ, ಕೌದಳ್ಳಿ, ಅಜ್ಜೀಪುರ ಹಾಗೂ ರಾಮಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ 22 ವರ್ಷಗಳಿಂದ ವಾಡಿಕೆಯಷ್ಟು ಮಳೆ ಬೀಳದೆ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಕೃಷಿಗೆ ನೀರಿಲ್ಲದೆ, ಕುಡಿಯಲು ಜೀವ ಜಲದ ಕೊರತೆಯಿಂದ ಬೇಸತ್ತು ಸಾವಿರಾರು ಗ್ರಾಮಸ್ಥರು ನೆರೆಯ ಜಿಲ್ಲೆ ಹಾಗೂ ರಾಜ್ಯಗಳಿಗೆ ಗುಳೆ ಹೋಗಿದ್ದಾರೆ.
ಬೇಸಗೆಯಲ್ಲಂತೂ ಹನೂರು ಭಾಗದ ಜನರ ಸಂಕಷ್ಟ ಹೇಳತೀರದು. ಕುಡಿಯುವ ನೀರಿಗೂ ಅಲೆಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇಷ್ಟಾದರೂ ಸಮಸ್ಯೆಗಳಿಗೆ ಇದುವರೆಗೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಜೊತೆಗೆ ಕಳೆದ 55 ವರ್ಷಗಳ ಹಿಂದೆ ಸಾಗುವಳಿ ಚೀಟಿ ನೀಡಿರುವ ರೈತರಿಗೆ ಜಮೀನಿನ ಪೋಡು ಪೋಡಿ ಮಾಡಿ ಕೊಟ್ಟಿಲ್ಲ, ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ನೀಡಿಲ್ಲ. ಈ ಎಲ್ಲ ಸಮಸ್ಯೆ ಬಗೆಹರಿಸುವಂತೆ ರೈತ ಸಂಘದ ಕಾರ್ಯಕರ್ತರು ತಾಲ್ಲೂಕಿನ ವಡಕೆಹಳ್ಳ ಗ್ರಾಮದಲ್ಲಿ ಹಗಲು ರಾತ್ರಿ ಎನ್ನದೆ ನಿರಂತರವಾಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
7 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ನೀರಿಗೆ 800 ರಿಂದ 1,200 ಅಡಿಗಳವರೆಗೆ ಕೊಳವೆಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ದಂಟಳ್ಳಿ ಗ್ರಾಮದಿಂದ ಕಾವೇರಿ ನದಿಗೆ ಕೇವಲ 2 ಕಿ.ಮೀ ಅಂತರವಿದ್ದು ಅಲ್ಲಿಂದ ಗ್ರಾಮಗಳಲ್ಲಿರುವ ಕರೆಗೆಳಿಗೆ ನೀರು ತುಂಬಿಸಿದರೆ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಅಂತರ್ಜಲ ಮಟ್ಟ ಸುಧಾರಣೆಯಾಗುತ್ತದೆ ಎಂಬುದು ರೈತರ ವಾದ.
ಆದರೆ ಯೋಜನೆ ಜಾರಿಗೆ ಕಾಡಿನೊಳಗೆ ಪೈಪ್ ಲೈನ್ ಹಾಕಲು ಅವಕಾಶವಿಲ್ಲದಿರುವುದರಿಂದ ಉಡುತೊರೆ ಜಲಾಶದಿಂದ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು. ವಾದ ವಿವಾದದ ನಡುವೆಯೂ ರೈತ ಸಂಘದ ನಿಯೋಗವೊಂದು ಶನಿವಾರ ಕಂದಾಯ,ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಸಚಿವರನ್ನು ಬೇಟಿಯಾಗಿ ಯೋಜನೆ ಜಾರಿಯ ಅಗತ್ಯತೆ ಹಾಗೂ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟಿದೆ.
ಸಂಕ್ರಾತಿಗೂ ಈಡೇರದ ಭರವಸೆ
ಸಂಕ್ರಾಂತಿ ಹಬ್ಬದೊಳಗೆ ಯೋಜನೆಗೆ ಸಂಬಂಧಿಸಿದ ಡಿಪಿಆರ್ ಮಾಡಿಸಿಕೊಡುವುದಾಗಿ ಹಿಂದೆ ಶಾಸಕ ಎಂ.ಆರ್.ಮಂಜುನಾಥ್ ಧರಣಿ ನಿರತರಿಗೆ ಭರವಸೆ ನೀಡಿದ್ದರು. ಸಂಕ್ರಾಂತಿ ಮುಗಿದರೂ ಡಿಪಿಆರ್ ಸಲ್ಲಿಕೆಯಾಗಿಲ್ಲ. ರಸ್ತೆ ತಡೆ ಪ್ರತಿಭಟನೆ ನಡೆಸಿದರೂ ಸ್ಪಂದಿಸಿಲ್ಲ. ಗ್ರಾಮಗಳ ಕೆರೆಗಳ ಜೊತೆಗೆ ಹಾಲೇರಿ ಕೆರೆಗೆ ನೀರು ತುಂಬಿಸಬೇಕು. ಭಾಷಾವಾರು ಪ್ರಾಂತ್ಯಗಳ ರಚನೆಗೂ ಮುನ್ನ ಮಾರ್ಟಳ್ಳಿ ಸಮೀಪವಿರುವ ದೊಡ್ಡದೇವರಹಳ್ಳಿ ಬಳಿ ಹಾಲೇರಿ ಕರೆ ಇತ್ತು. ಆಗ ಅದರ ವಿಸ್ತೀರ್ಣ 112 ಎಕರೆ ಇತ್ತು. ಈಗ 8 ಎಕರೆ ಅಚ್ಚುಕಟ್ಟು ಪ್ರದೇಶವನ್ನಾಗಿ ಮಾಡಲಾಗಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ಆದರೆ 3 ಎಕರೆ ಮಾತ್ರ ಅಚ್ಚುಕಟ್ಟು ಪ್ರದೇಶವನ್ನಾಗಿ ಮಾಡಲಾಗಿದೆ. ಈಗಾಗಲೇ ಮೂರು ಇಲಾಖೆಯ ಸಚಿವರನ್ನು ಭೇಟಿಮಾಡಿ ಹನೂರು ಭಾಗದಲ್ಲಿರುವ ಸಮಸ್ಯೆಗಳು ಹಾಗೂ ಪರಿಹಾರಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ರೈತ ಸಂಘದ ಜಿಲ್ಲಾ ಸಂಚಾಲಕ ಶೈಲೇಂದ್ರ ತಿಳಿಸಿದರು.
₹419 ಕೋಟಿ ವೆಚ್ಚದ ಡಿಪಿಆರ್ ಶೀಘ್ರ ಸಲ್ಲಿಕೆ
ಹಳೆಯ ಡಿಪಿಆರ್ ಪರಿಷ್ಕರಿಸಿ ಹೊಸ ಡಿಪಿಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲು ಎಲ್ಲ ಸಿದ್ಧತೆಗಳು ನಡೆದಿವೆ. ಹಿಂದೆ ₹350 ಕೋಟಿ ವೆಚ್ಚದಲ್ಲಿ ಕಾಮಗಾರಿ ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಪರಿಷ್ಕೃತವಾಗಿ ₹ 419 ಕೋಟಿ ವೆಚ್ಚದ ಡಿಪಿಆರ್ ಆಗಿದ್ದು ಉಡುತೊರೆ ಜಲಾಶಯದ ಮೂಲಕ ಮಾರ್ಟಳ್ಳಿ ಕುರಟ್ಟಿ ಹೊಸೂರು ಕೌದಳ್ಳಿ ಶೆಟ್ಟಳ್ಳಿ ಅಜ್ಜೀಪುರ ಹಾಗೂ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗೆಳಿಗೆ ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ ಎನ್ನುತ್ತಾರೆ ಹನೂರು ಶಾಸಕ ಎಂ.ಆರ್ ಮಂಜುನಾಥ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.