ಯಳಂದೂರು: ದೀಪಾವಳಿ ಹಬ್ಬಕ್ಕೆ ಮೂರು ದಿನಗಳು ಬಾಕಿ ಉಳಿದಿವೆ. ಈ ನಡವೆ ಅಗರ-ಮಾಂಬಳ್ಳಿ ಸೇರಿದಂತೆ ಸಪ್ತ ಗ್ರಾಮಗಳನ್ನು ಪೋಷಿಸುವ ಹಿಂಡಿ ಮಾರಮ್ಮನ ಮಹೋತ್ಸವ ಸಿದ್ಧತೆಗಳು ಕಳೆಗಟ್ಟುತ್ತಿವೆ. ಗ್ರಾಮ ದೇವತೆ ಹಬ್ಬದ ಸಂಭ್ರಮದೊಂದಿಗೆ ಊರು-ಕೇರಿ ಸಿಂಗಾರಗೊಳ್ಳುತ್ತದೆ. ಸಹಸ್ರಾರು ಭಕ್ತರ ನಡುವೆ ಬಂಧು-ಬಳಗ ಒಟ್ಟಾಗಿ, ಮಾರಿ ಹಬ್ಬದ ಸಾಂಸ್ಕೃತಿಕ ಪರಂಪರೆ ಕಣ್ತುಂಬುವುದರ ಜತೆಗೆ ಸಾವಿರಾರು ವರ್ಷಗಳ ಪುರಾಣವೂ ತೆರೆದುಕೊಳ್ಳುತ್ತದೆ.
ತಾಲ್ಲೂಕಿನ ಅಗರದಲ್ಲಿ ನೆಲೆಸಿರುವ ಹಿಂಡಿ ಮಾರಮ್ಮನಿಗೆ ತಮಿಳುನಾಡು ಸೇರಿದಂತೆ ರಾಜ್ಯದ ಭಕ್ತರು ಅನುನಯದಿಂದ ನಡೆದುಕೊಳ್ಳುತ್ತಾರೆ. ವ್ರತಾಧಾರಿಗಳು ಬಾಯಿಗೆ ಬೀಗ ಧರಿಸುತ್ತಾರೆ. ಕೆಂಡದ ಮೇಲೆ ಹಾಯುತ್ತಾರೆ. ನೂರಾರು ಗ್ರಾಮಗಳ ಭಕ್ತರು ಸೇವಾ ಕೈಂಕರ್ಯದಲ್ಲಿ ಭಾಗಿಯಾಗಿ, ನೂರಾರು ಹರಕೆ ತೀರಿಸುತ್ತಾರೆ. ಹೀಗಾಗಿ, ಹಬ್ಬದಂದು ಹಿಂಡಿ ಮಾರಮ್ಮನಿಗೆ ಬೇವಿನ ಸೊಪ್ಪು, ಅರಿಸಿನ ಮತ್ತು ಹಳದಿ ಪುಷ್ಪಗಳನ್ನು ಅರ್ಪಿಸಿ ಧನ್ಯತೆ ಮೆರೆಯುತ್ತಾರೆ.
ಅಗರ ಸುತ್ತಮುತ್ತಲ ಪ್ರದೇಶಗಳು ಚೋಳ ಮತ್ತು ಗಂಗರ ಚರಿತ್ರೆಯಲ್ಲಿ ವಿಕಾಸಗೊಂಡಿವೆ. ಶೈವ ಗುಡಿಯ ಜೊತೆ ಮಾರಮ್ಮನ ದೇವಳಗಳು ವಿಶೇಷವಾಗಿ ಅರ್ಚಿಸಲಾಗುತ್ತಿತ್ತು. ಯುದ್ಧ ಮತ್ತು ಹೋರಾಟದ ಸಂದರ್ಭಗಳಲ್ಲಿ ದೇವಿಗೆ ನಮಿಸಿ, ತಿಲಕ ಇಟ್ಟು ವಿಜಯಿಯಾಗಿ ಬರುವಂತೆ ಜನ ಸಮೂಹ ಹಾರೈಸುತ್ತಿತ್ತು. ರಾಜಾಧಿರಾಜರು ದಾನ ದತ್ತಿ ನೀಡಿ ಗುಡಿ ಗೋಪುರ ಪೋಷಿಸುತ್ತಿದ್ದರು. ಹೀಗಾಗಿ, ಅಗರ-ಮಾಂಬಳ್ಳಿ ಗ್ರಾಮಗಳಲ್ಲಿ ಶಿವ, ಶಕ್ತಿ, ಮಾರಿ ಆಲಯಗಳ ಜೊತೆ ಸೌಮ್ಯ ದೇವರುಗಳನ್ನು ಕಾಣಬಹುದು. ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ ದೇವತೆಗಳ ಜೊತೆ ಚಾಮುಂಡೇಶ್ವರಿಗೂ ಭಕ್ತರು ಅಗ್ರ ಪೂಜೆ ಸಲ್ಲಿಸುತ್ತಾರೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ಹಿಮ್ಮುಖವಾಗಿ ಕುಳಿತ ಹಿಂಡಿ ಮಾರಮ್ಮ: ಇಲ್ಲಿನ ಹಿಂಡಿ ಮಾರಮ್ಮನನ್ನು ನೇರವಾಗಿ ದರ್ಶನ ಮಾಡಲಾಗದು. ಮಾರಮ್ಮನ ತಂಗಿಯರು ಮುಂದೆ ನಿಂತು ಭಕ್ತರನ್ನು ಅರಸುತ್ತಾರೆ. ತಾಯಿಯ ದಿವ್ಯ ಶಕ್ತಿಯ ಪ್ರಭೆ ಹೆಚ್ಚಿದ್ದು. ಹತ್ತಿರದಿಂದ ನೋಡಬಾರದು ಎಂಬ ನಂಬಿಕೆ ಭಕ್ತರಲ್ಲಿದೆ. ಪೂಜೆಯ ನಂತರ ಶಾಂತಳಾದ ದೇವಿಯನ್ನು ಕನ್ನಡಿಯಲ್ಲಿ ಕಾಣುವಂತೆ ವಿನ್ಯಾಸ ಮಾಡಲಾಗಿದ್ದು, ಹಬ್ಬದಂದು ಮಾರಮ್ಮನನ್ನು ದರ್ಶನ ಮಾಡುವುದು ಶುಭವೆಂದು ಜನಪದ ಕಾವ್ಯ ಪ್ರಕಾರಗಳಲ್ಲಿ ವರ್ಣಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.