ಚಾಮರಾಜನಗರ: ಸಮಾಜ ಎಚ್.ಐ.ವಿ ಏಡ್ಸ್ ಬಗ್ಗೆ ಜಾಗೃತರಾಗಿ ಸುಸ್ಥಿರ ಜೀವನ ನಡೆಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್. ಚಿದಂಬರ ಸಲಹೆ ಮಾಡಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಮಂಗಳವಾರ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಎಸ್.ಎಸ್.ಎಸ್, ರೆಡ್ ರಿಬ್ಬನ್ ಕ್ಲಬ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ರೋಟರಿ ಸಿಲ್ಕ್ ಸಿಟಿ ಸಹಯೋಗದಲ್ಲಿ ಏಡ್ಸ್ ವಿರುದ್ಧ ಜನಜಾಗೃತಿ ಮೂಡಿಸಲು ಹಮ್ಮಿಕೊಂಡಿದ್ದ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದರು.
ಹೆಚ್‍ಐವಿ, ಏಡ್ಸ್ ತಡೆಗೆ ಐ.ಇ.ಸಿ ಪ್ರಚಾರಾಂದೋಲನ ತೀವ್ರಗೊಳಿಸಲಾಗಿದ್ದು ಯುವಜನತೆ ಸೇರಿದಂತೆ ಎಲ್ಲ ವಯೋಮಾನದವರಿಗೆ ಅರಿವು ಮೂಡಿಸಲಾಗುತ್ತಿದೆ. ಬೈಕ್ ರ‍್ಯಾಲಿ, ಮ್ಯಾರಥಾನ್, ಸೈಕಲ್ ಜಾಥಾ ಸೇರಿದಂತೆ ಇತರೆ ಜಾಗೃತಿ ಕಾರ್ಯಕ್ರಮಗಳ ಮೂಲಕ ವ್ಯಾಪಕವಾಗಿ ಜನಜಾಗೃತಿ ಮಾಡಲಾಗುತ್ತಿದೆ.
ಕ್ಷಣಿಕ ಸುಖದ ಆಸೆಗಾಗಿ ಹೆಚ್‍ಐವಿ, ಏಡ್ಸ್‌ನಂತಹ ಮಾರಕ ಕಾಯಿಲೆಗೆ ತುತ್ತಾಗದಂತೆ ಎಚ್ಚರಿಕೆ ವಹಿಸಬೇಕು. ಯುವಜನತೆ ಹೆಚ್ಚು ಜಾಗೃತರಾಗಿರಬೇಕು, ಸೋಂಕಿನ ಕುರಿತು ಇತರರಿಗೂ ಅರಿವು ಮೂಡಿಸಬೇಕು ಎಂದರು.
ಏಡ್ಸ್ ರೋಗಕ್ಕೆ ಪರಿಣಾಮಕಾರಿ ಚಿಕಿತ್ಸಾ ಸೌಲಭ್ಯವಿದ್ದು ಅಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ಸೋಂಕಿತರಿಗೆ ಚುಚ್ಚಿದ ಸೂಜಿ ಅಥವಾ ಸಿರಿಂಜ್‌ಗಳ ಮರು ಬಳಕೆಯಿಂದ ಏಡ್ಸ್ ಕಾಯಿಲೆ ಹರಡುತ್ತದೆ. ಸಲಿಂಗಕಾಮದಿಂದಲೂ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಓರ್ವ ಸಂಗಾತಿ ಜೊತೆ ದೈಹಿಕ ಸಂಪರ್ಕ ಹೊಂದುವ ಮೂಲಕ ಸೋಂಕಿನಿಂದ ದೂರ ಇರಬೇಕು. ಸಮುದಾಯದಲ್ಲೂ ರೋಗದ ಬಗ್ಗೆ ತಿಳಿವಳಿಕೆ ಅಗತ್ಯವಿದೆ ಎಂದರು.
ಹೆಚ್‍ಐವಿ, ಏಡ್ಸ್ ಜಾಗೃತಿಗೆ . ಸಾರ್ವಜನಿಕರು, ಸಂಘಸಂಸ್ಥೆಗಳು ಕೈಜೋಡಿಸಬೇಕು. ಜಾಗೃತಿ ಕಾರ್ಯಕ್ರಮ ಒಂದು ದಿನಕ್ಕೆ ಸೀಮಿತವಾಗದೆ ನಿರಂತರವಾಗಿರಬೇಕು. ಎಚ್.ಐ.ವಿ ಸೋಂಕು ತಗುಲಿರುವ ಬಗ್ಗೆ ಅನುಮಾನವಿದ್ದರೆ ತಕ್ಷಣ ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಿಎಚ್‌ಒ ಡಾ.ಎಸ್.ಚಿದಂಬರ ಸಲಹೆ ನೀಡಿದರು.
ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಅಧಿಕಾರಿ ಡಾ.ರವಿಕುಮಾರ್, ಸಿಮ್ಸ್ ಆರ್.ಎಂ.ಒ ಡಾ.ಮಹೇಶ್, ಅರ್ಥೋಪೆಡಿಕ್ ವಿಭಾಗದ ಮುಖ್ಯಸ್ಥ ಡಾ.ಮಾರುತಿ, ರಕ್ತನಿಧಿ ಕೇಂದ್ರದ ಅಧಿಕಾರಿ ಮಹದೇವ ಪ್ರಸಾದ್, ಆರೋಗ್ಯ ಶಿಕ್ಷಣ ಅಧಿಕಾರಿ ದೊರೆಸ್ವಾಮಿ ನಾಯಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.