ADVERTISEMENT

ಕೊಳ್ಳೇಗಾಲ: ಪತ್ನಿಯ ಬೆರಳು ಕತ್ತರಿಸಿದ ಪತಿಗೆ ಐದು ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2020, 15:56 IST
Last Updated 23 ಅಕ್ಟೋಬರ್ 2020, 15:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಳ್ಳೇಗಾಲ: ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿರುವುದನ್ನು ಪ್ರಶ್ನಿಸಿದ್ದಕ್ಕೆ ಪತ್ನಿ ಮೇಲೆ ಹಲ್ಲೆ ಮಾಡಿ ಆಕೆಯ ಬೆರಳನ್ನು ಕತ್ತರಿಸಿದ ಪತಿಗೆ ಇಲ್ಲಿನ ನ್ಯಾಯಾಲಯವು ಶುಕ್ರವಾರ ಐದು ವರ್ಷಗಳ ಜೈಲು ಶಿಕ್ಷೆ ಹಾಗೂ ₹1.35 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.

ತಾಲ್ಲೂಕಿನ ಧನಗೆರೆ ಗ್ರಾಮದ ಮಹದೇವ ಶಿಕ್ಷೆಗೆ ಒಳಗಾದವರು. 2017ರ ಆಗಸ್ಟ್‌ 31ರಂದು ಈ ಘಟನೆ ನಡೆದಿತ್ತು.

ಮಹದೇವ ಅವರು ಅದೇ ಗ್ರಾಮದ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದರು. ಇದನ್ನು ತಿಳಿದ ಪತ್ನಿ ಮಂಜುಳಾ, ಮಹದೇವ ಅವರನ್ನು ಪ್ರಶ್ನಿಸಿದ್ದರು. ಇದರಿಂದಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಒಂದು ದಿನ ಜಗಳ ನಡೆಯುತ್ತಿದ್ದಾಗ ಮಹದೇವ ಅವರು ಕೋಪದಿಂದ ಮಂಜುಳಗೆ ಹೊಡೆದು ಅವರ ಬಲಗೈಯ ಹೆಬ್ಬೆರಳನ್ನು ಕುಡುಗೋಲಿನಿಂದ ಕತ್ತರಿಸಿದ್ದರು. ಜಗಳವನ್ನು ಬಿಡಿಸಲು ಬಂದಿದ್ದ ಮಂಜುಳಾ ತಾಯಿಯ ಮೇಲೂ ಹಲ್ಲೆ ಮಾಡಿದ್ದರು.

ADVERTISEMENT

2017ರ ಆಗಸ್ಟ್‌ 31ರಂದು ಮಂಜುಳಾ ಅವರು ಕೊಳ್ಳೇಗಾಲದ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದರು. ಅಂದಿನ ಸಬ್‌ ಇನ್‌ಸ್ಪೆಕ್ಟರ್ ಆಗಿದ್ದ ವನರಾಜು ಅವರು ಆರೋಪಿಯನ್ನು ಬಂಧಿಸಿ, ತನಿಖೆ ಕೈಗೊಂಡಿದ್ದರು. ಆರೋಪಿ ವಿರುದ್ಧ ಇಲ್ಲಿನ ಜಿಲ್ಲಾ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿನಯ್‌ ಅವರು ಮಹದೇವ ಅವರು ತಪ್ಪಿತಸ್ಥ ಎಂದು ಘೋಷಿಸಿದ್ದು, ಐದು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ₹1.35 ಲಕ್ಷ ದಂಡ ವಿಧಿಸಿ ಆದೇಶ ಹೊರಡಿದ್ದಾರೆ.ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಉಷಾ ಅವರು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.