ADVERTISEMENT

ಅಂತರರಾಷ್ಟ್ರೀಯ ಹುಲಿ ದಿನ: ದೇಶದ ಹುಲಿಗಳಿಗೆ ಸಾಂಸ್ಕೃತಿಕ ಮೆರುಗು

ಹುಲಿಗೆ ಉರುಳಾಗದಿರಲಿ ಕಳ್ಳಬೇಟೆ, ಅಕ್ರಮ ಸಾಗಣೆ, ಆವಾಸ ನಷ್ಟ

ಎನ್.ಮಂಜುನಾಥಸ್ವಾಮಿ
Published 29 ಜುಲೈ 2024, 7:38 IST
Last Updated 29 ಜುಲೈ 2024, 7:38 IST
ವನ್ಯಜೀವಿ ಛಾಯಾಗ್ರಾಹಕ ಮತ್ತು ಸಂಪನ್ಮೂಲ ವ್ಯಕ್ತಿ ನವೀನ್ ಜಗಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಹುಲಿ
ವನ್ಯಜೀವಿ ಛಾಯಾಗ್ರಾಹಕ ಮತ್ತು ಸಂಪನ್ಮೂಲ ವ್ಯಕ್ತಿ ನವೀನ್ ಜಗಲಿ ಕ್ಯಾಮೆರಾ ಕಣ್ಣಿಗೆ ಸೆರೆಯಾದ ಹುಲಿ   

ಯಳಂದೂರು: ಕಾನನಗಳ ಸರ್ವಾಂಗ ಸುಂದರ ಜೀವಿ ಹುಲಿ ರಾಷ್ಟ್ರೀಯ ಪ್ರಾಣಿಯೂ ಹೌದು. ನಮ್ಮ ಸುತ್ತಮುತ್ತಲ ದೈವಗಳಿಗೂ ಹುಲಿಯೇ ವಾಹನ. ಅಮೋಘ ನಡಿಗೆ ಮತ್ತು ಬೇಟೆಯ ವೈವಿಧ್ಯಮಯ ಶೈಲಿಯ ಕಾರಣದಿಂದ ಚಾರಿತ್ರಿಕ ಮತ್ತು ಐತಿಹಾಸಿಕವಾಗಿ ಗುರುತಿಸಿಕೊಳ್ಳುವ ವ್ಯಾಘ್ರಗಳಿಗೆ ಸಾಂಸ್ಕೃತಿಕ ಮೆರಗು ಸೇರಿಕೊಂಡಿದೆ. ಹುಲಿಗಳ ಪ್ರಭೇದ ಅವಸಾನದ ಅಂಚಿನಲ್ಲಿರುವ ಈ ಹೊತ್ತಿನಲ್ಲಿ ವನ್ಯಜೀವಿ ಉಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಸಂಸ್ಥೆಗಳು ಹುಲಿ ಉಳಿಸುವ ಅಭಿಯಾನಕ್ಕೆ ಮುಂದಾಗಿವೆ.

ತಾಲ್ಲೂಕು ಸುಮಾರು 550 ಚ.ಕಿ.ಮೀ ಕಾಡಿನಿಂದ ಆವೃತವಾಗಿದೆ. ಇಲ್ಲಿನ ನಿಸರ್ಗ ಹುಲಿಗಳ ವಂಶಾಭಿವೃದ್ಧಿಗೆ ವರವಾಗಿದೆ. ಆದರೆ, ಬ್ರಿಟಿಷರ ಆಡಳಿತದಲ್ಲಿ ರಾಜರ ಮತ್ತು ಇಂಗ್ಲಿಷ್ ಅಧಿಕಾರಿಗಳ ಮೋಜು ಮಸ್ತಿಗೆ ಬಹಳಷ್ಟು ಸಂಖ್ಯೆಯ ಹುಲಿಗಳು ಬಲಿಯಾದವು. ಬಹಳಷ್ಟು ರೋಗ, ಕಳ್ಳದಂಧೆಗೆ ಅಳಿದವು. ಸ್ವಾತಂತ್ರ್ಯ ನಂತರ 1973ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ‘ಹುಲಿ ಸಂರಕ್ಷಣಾ ಯೋಜನೆ’ ಹುಲಿ ಸಂತತಿ ರಕ್ಷಣೆಗೆ ಮೊದಲಾಯಿತು. ಹುಲಿಗಳ ಜೀವ ಸಂಕುಲ ಹೆಚ್ಚಳದೊಂದಿಗೆ ಅರಣ್ಯ ವನ ವಿಸ್ತಾರವೂ ಪಸರಿಸಿತು.

ಇಂದು ಬಿಆರ್‌ಟಿಯಲ್ಲಿ ಬಲಿ ಜೀವಿಗಳ ಸಂಖ್ಯೆಯೂ ಹೇರಳವಾಗಿದ್ದು ಹುಲಿ ಆವಾಸದಲ್ಲಿ ಹೆಚ್ಚಳವಾಗಿದೆ. ವರ್ಷದಿಂದ ಈಚೆಗೆ ಮಾನವ ವನ್ಯಜೀವಿ ಸಂಘರ್ಷ ಮತ್ತು ಬೇಟೆಯ ಘಟನೆಗಳು ಕಡಿಮೆಯಾಗಿವೆ. ಇದರಿಂದ ವನ್ಯಜೀವಿ ಅಪರಾಧ ಪ್ರಕರಣಗಳು ಗಣನೀಯವಾಗಿ ತಗ್ಗಿದೆ. ರಕ್ಷಿತ ಪ್ರದೇಶಗಳಲ್ಲಿ ಕೈಗೊಂಡ ಕಠಿಣ ಕ್ರಮ, ಕಾಡಂಚಿನ ಜನರ ಸುಸ್ಥಿರ ಜೀವನೋಪಾಯ ವಿಧಾನಗಳಿಂದ ಹುಲಿ ಜೀವಾವರ ಉಳಿಸುವ ದೆಸೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಆರ್‌ಎಫ್‌ಒ ನಾಗೇಂದ್ರ ನಾಯಕ್ ಹೇಳಿದರು.

ADVERTISEMENT

ಭಾರತದಲ್ಲಿ ಅತಿ ಹೆಚ್ಚು ಹುಲಿ: ಭಾರತ ವ್ಯಾಘ್ರಗಳ ಪಾಲಿಗೆ ಮಹತ್ವದ ನೆಲೆ. ವೈಜ್ಞಾನಿಕ ಹೆಸರು ಪ್ಯಾಂಥೆರಾ ಟೈಗ್ರಿಸ್. ಹುಲಿಗಳು ಅಳಿವಿನಂಚಿನ ಪ್ರಾಣಿ ವರ್ಗದಲ್ಲಿದ್ದು ವಿಶ್ವದಲ್ಲಿನ 6 ಉಪಜಾತಿಗಳಲ್ಲಿ ಬಂಗಾಳದ ಹುಲಿಯೂ ಸೇರಿದೆ. ಪ್ರಪಂಚದಲ್ಲಿ ಹುಲಿಗಳ ಸಂಖ್ಯೆ ಸುಮಾರು 5,574. ಹುಲಿ ಗಣತಿಯಲ್ಲಿ ಭಾರತದಲ್ಲಿ ಶೇ 75 ಅಂದರೆ 3,682 ಹುಲಿಗಳನ್ನು ಗುರುತಿಸಲಾಗಿದೆ. ಆದರೆ, ವಿಶ್ವ ವನ್ಯಜೀವಿ ನಿಧಿಯ ಪ್ರಕಾರ ದತ್ತಾಂಶ ನೀಡುವ ಮಾಹಿತಿಗಳಲ್ಲಿ ವ್ಯತ್ಯಾಸವಿದೆ ಎಂದು ವನ್ಯಜೀವಿ ಛಾಯಾಗ್ರಾಹಕ ನವೀನ್ ಜಗಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಯಳಂದೂರು ವನ್ಯಜೀವಿ ವಲಯ ವಿಭಾಗದದಲ್ಲಿ 40 ಹುಲಿಗಳಿವೆ. ಇಲ್ಲಿಗೆ ಹೊಂದಿಕೊಂಡ ಬಂಡಿಪುರ ಮತ್ತು ಬಿಳಿಗಿರಿರಂಗನಬೆಟ್ಟ ವ್ಯಾಘ್ರ ಸಂರಕ್ಷಣಾ ತಾಣಗಳಾಗಿ ವಿಶ್ವಮಾನ್ಯವಾಗಿವೆ. ಮಹದೇಶ್ವರಬೆಟ್ಟ ಮತ್ತು ಕಾವೇರಿ ವನ್ಯಜೀವಿ ಧಾಮಗಳಲ್ಲೂ ಹುಲಿ ನೆಲೆ ವಿಸ್ತರಿಸಿದೆ. ಭಾರತದಲ್ಲಿ ಹೆಚ್ಚಿನ ಹುಲಿ ಕುಟುಂಬ ನಮ್ಮ ಸುತ್ತಮುತ್ತಲ ಅಡವಿಗಳಲ್ಲಿಯೇ ಇದೆ ಎನ್ನುತ್ತಾರೆ ಬಿಆರ್‌ಟಿ ಅರಣ್ಯ ವಲಯದ ಆರ್‌ಎಫ್‌ಒ ನಾಗೇಂದ್ರನಾಯಕ್.

ಭಾರತದಲ್ಲಿ 1973ರಲ್ಲಿ ಹುಲಿ ಯೋಜನೆ ಜಾರಿಗೆ ತಂದು ಅವುಗಳ ಮೂಲ ನೆಲೆ ಗುರುತಿಸಲಾಯಿತು. 53 ಹುಲಿ ರಕ್ಷಿತ ತಾಣಗಳು, 71 ಸಾವಿರ ಚದರ ಕಿ.ಮೀನಲ್ಲಿ ವಿಸ್ತರಿಸಿದೆ. ಮಧ್ಯಪ್ರದೇಶ (526), ಕರ್ನಾಟಕ (524), ಉತ್ತರಾಖಂಡ್ (442) ಹುಲಿಗಳಿಗೆ ಆಸರೆ ಒದಗಿಸಿವೆ. ಸ್ಥಳೀಯ ಸಮುದಾಯಗಳ ಸಹಕಾರದಲ್ಲಿ ಹುಲಿ ಸಫಾರಿಗೆ ಆದ್ಯತೆ ನೀಡಲಾಗಿದೆ.  ಟೈಗರ್ ಪ್ರಾಜೆಕ್ಟ್ ಮೂಲಕ ಹುಲಿ ಸಂಶೋಧಕರಿಗೂ ಅವಕಾಶ ಸಿಕ್ಕಿದೆ.

ಯಳಂದೂರು: 550 ಚ.ಕಿ.ಮೀ ವ್ಯಾಪ್ತಿಯಲ್ಲಿ ಕಾಡು ಯಳಂದೂರು ವಿಭಾಗದದಲ್ಲಿ 40 ಹುಲಿಗಳು ವಾಸ ಹುಲಿಗಳ ವಂಶಾಭಿವೃದ್ಧಿಗೆ ಪೂರಕ ವಾತಾವರಣ
ಅಂತರರಾಷ್ಟ್ರೀಯ ಹುಲಿ ದಿನ
ಇಂದು  ಅಂತರರಾಷ್ಟ್ರೀಯ ಹುಲಿ ದಿನವನ್ನು 2010 ಜು 29ರಿಂದ ಆಚರಿಸಲಾಗುತ್ತಿದೆ. ಜಾಗತಿಕವಾಗಿ ಅಳಿಯುತ್ತಿರುವ ಹುಲಿ ಸಂತತಿಯನ್ನು ಉಳಿಸಲು ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಹುಲಿ ಶೃಂಗ ಸಭೆ ನೆರವಾಯಿತು. 13 ದೇಶಗಳು ಹುಲಿ ರಕ್ಷಣಾ ಅಗತ್ಯದ ಬಗ್ಗೆ ಉಪಕ್ರಮ ಆರಂಭಿಸಿದವು. ಇದರ ಫಲವಾಗಿ ಇಂದು ವನ್ಯಜೀವಿ ಕಾಯ್ದೆಗಳು ರೂಪುಗೊಂಡಿವೆ. ಹುಲಿ ಬೇಟೆ ಕಳ್ಳ ಸಾಗಣೆ ಮೂಳೆ ಕೂದಲು ಚರ್ಮ ಮತ್ತಿತರ ಭಾಗಗಳನ್ನು ಹೊಂದುವುದು 1972ರ ವನ್ಯಜೀವಿ (ರಕ್ಷಣಾ) ಕಾಯ್ದೆ ನಿರ್ಬಂಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.