ADVERTISEMENT

ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ, ಜಿಲ್ಲಾಡಳಿತದಿಂದ ಸಿದ್ಧತೆ

ಭಾನುವಾರ: ಜಾನಪದ ಅಕಾಡೆಮಿ ಪ್ರಶಸ್ತಿ ಪ್ರದಾನ, ಜಿಲ್ಲಾಡಳಿತದಿಂದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 15:55 IST
Last Updated 5 ಫೆಬ್ರುವರಿ 2021, 15:55 IST
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿದರು. ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಸದಸ್ಯ ಸಿ.ಎಂ.ನರಸಿಂಹಮೂರ್ತಿ ಇದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿದರು. ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ, ಸದಸ್ಯ ಸಿ.ಎಂ.ನರಸಿಂಹಮೂರ್ತಿ ಇದ್ದಾರೆ   

ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, ತಜ್ಞ ಪ್ರಶಸ್ತಿ ಪ್ರದಾನ ಹಾಗೂ 2018–19ನೇ ಸಾಲಿನ ಪುಸ್ತಕ ಬಹುಮಾನ ವಿತರಣೆ ಸಮಾರಂಭ ಭಾನುವಾರ (ಫೆ.7) ನಗರದ ಡಾ.ಬಿ.ಆರ್‌.ಅಂಬೇಡ್ಕರ್‌ ಭವನದಲ್ಲಿ ನಡೆಯಲಿದ್ದು, ಅಂದು ಜಿಲ್ಲೆಯ ಜಾನಪದ ಸಂಸ್ಕೃತಿಯೇ ಅನಾವರಣಗೊಳ್ಳಲಿದೆ.

ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಬಿ.ಮಂಜಮ್ಮ ಜೋಗತಿ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಪತ್ರಿಕಾಗೋಷ್ಠಿ ನಡೆಸಿ ಸಮಾರಂಭದ ಸಿದ್ಧತೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ವಿವರ ನೀಡಿದರು.

ಬೆಳಿಗ್ಗೆ 11 ಗಂಟೆಗೆ ನಗರದ ಸಮಾರಂಭ ನಡೆಯುವುದಕ್ಕೂ ಮುನ್ನ, ಬೆಳಿಗ್ಗೆ 9‌ ಗಂಟೆಗೆ ಜಿಲ್ಲಾಡಳಿತ ಭವನದಿಂದ ಅಂಬೇಡ್ಕರ್‌ ಭವನದವರೆಗೆ ಕಲಾ ತಂಡಗಳ ಮೆರವಣಿಗೆ ನಡೆಯಲಿದೆ. ಎಲ್ಲ ಪ್ರಶಸ್ತಿ ಪುರಸ್ಕೃತರನ್ನು ಅಲಂಕೃತ ಎತ್ತಿನ ಬಂಡಿಗಳಲ್ಲಿ ಕುಳ್ಳಿರಿಸಿ, ಅದ್ಧೂರಿ ಮೆರವಣಿಗೆ ಮೂಲಕ ಸಮಾರಂಭದ ಸ್ಥಳದವರೆಗೆ ಕರೆದೊಯ್ಯಲಾಗುವುದು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ADVERTISEMENT

‘ಬಿ.ರಾಚಯ್ಯ ಜೋಡಿ ರಸ್ತೆ, ಭುವನೇಶ್ವರಿ ವೃತ್ತ, ಡೀವಿಯೇಷನ್‌ ರಸ್ತೆ, ಸತ್ಯಮಂಗಲ ರಸ್ತೆ, ಕರಿನಂಜನಪುರ ರಸ್ತೆ ಮಾರ್ಗವಾಗಿ ಅಂಬೇಡ್ಕರ್‌ ಭವನಕ್ಕೆ ಮೆರವಣಿಗೆ ತಲುಪಲಿದೆ.ಮೆರವಣಿಗೆಯಲ್ಲಿ ಕಂಸಾಳೆ, ಗೊರವರ ಕುಣಿತ, ನಗಾರಿ, ತಮಟೆ, ಮರಗಾಲು ಕುಣಿತ, ಕಂಡಾಯ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಜಿಲ್ಲೆಯ ದೇಸಿ ಸಂಸ್ಕೃತಿಯ ವೈಭವ ಬಿಂಬಿತವಾಗಲಿದೆ’ ಎಂದರು.

ವಾಸ್ತವ್ಯಕ್ಕೆ ವ್ಯವಸ್ಥೆ: ‘ಪ್ರಶಸ್ತಿ ಪುರಸ್ಕೃತರು ಶನಿವಾರವೇ ನಗರಕ್ಕೆ ಬರಲಿದ್ದು, ಅವರ ವಾಸ್ತವ್ಯಕ್ಕೆ ನಿಜಗುಣ ರೆಸಾರ್ಟ್‌, ರತ್ನೇಶ್ವರಿ ರೆಸಿಡೆನ್ಸಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಜೆಎಸ್‌ಎಸ್‌ನ ರುಡ್‌ಸೆಟ್‌ನಲ್ಲೂ ವ್ಯವಸ್ಥೆಗೆ ಅವಕಾಶ ಇದೆ. ಜಿಲ್ಲಾಡಳಿತದಿಂದ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದರು.

ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವರಾದ ಅರವಿಂದ ಲಿಂಬಾವಳಿ ಅವರುಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡುವರು.

‘ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಡುವ ‘ಜಾನಪದ ರತ್ನ’ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‌ಕುಮಾರ್ ಅವರು ಬಿಡುಗಡೆ ಮಾಡಲಿದ್ದಾರೆ.ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಸಂಗೀತ ನಿರ್ದೇಶಕರು ನಾದಬ್ರಹ್ಮ ಡಾ. ಹಂಸಲೇಖ ಅವರು ಅಭಿನಂದನಾ ನುಡಿಗಳನ್ನಾಡುವರು’ ಎಂದು ಅವರು ಮಾಹಿತಿ ನೀಡಿದರು.

ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಅವರು ಮಾತನಾಡಿ, ‘ರಾಜ್ಯದ 30 ಜಿಲ್ಲೆಗಳಿಂದ ಆಯ್ಕೆಯಾಗಿರುವ ಪ್ರಶಸ್ತಿ ಪುರಸ್ಕೃತರು, ಇಬ್ಬರು ತಜ್ಞ ಪ್ರಶಸ್ತಿ ಪುರಸ್ಕೃತರು, ಇಬ್ಬರು ಪುಸ್ತಕ ಬಹುಮಾನಿತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಪ್ರಶಸ್ತಿ ಪುರಸ್ಕೃತರಿಗೆ ₹25 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ನೀಡಿ ಸನ್ಮಾನಿಸಲಾಗುತ್ತದೆ’ ಎಂದರು.

ಜಾನಪದ ಅಕಾಡೆಮಿಯ ಸದಸ್ಯರಾದ ಸಿ.ಎಂ.ನರಸಿಂಹಮೂರ್ತಿ, ಎಸ್.ಜಿ ಲಕ್ಷ್ಮಿದೇವಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್ ಇದ್ದರು.

ಜಿಲ್ಲೆಗೆ ಬಂದು ಒಳ್ಳೆಯದಾಗಿದೆ: ಮಂಜಮ್ಮ ಜೋಗತಿ

ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಯಾದ ಮಂಜಮ್ಮ ಜೋಗತಿ ಅವರನ್ನು ಜಿಲ್ಲಾಧಿಕಾರಿ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.

‘ಚಾಮರಾಜನಗರದ ಮಣ್ಣಿನ ಗುಣ ದೊಡ್ಡದು. ಜಾನಪದ ಅಕಾಡೆಮಿ ಅಧ್ಯಕ್ಷರು ತಿಂಗಳ ಹಿಂದೆ ಇಲ್ಲಿಗೆ ಬಂದಾಗ ಕೇವಲ ಮಂಜಮ್ಮ ಜೋಗತಿ ಆಗಿದ್ದರು. ಈಗ ಪದ್ಮಶ್ರೀ ಮಂಜಮ್ಮ ಜೋಗತಿ ಆಗಿದ್ದಾರೆ’ ಎಂದರು.

ಇದೇ ಮಾತನ್ನು ಪುನರುಚ್ಚರಿಸಿದ ಮಂಜಮ್ಮ ಅವರು, ‘ಚಾಮರಾಜನಗರಕ್ಕೆ ಹೋಗಿದ್ದೆ ಎಂದು ಪರಿಚಿತರೊಬ್ಬರಲ್ಲಿ ಹೇಳಿದಾಗ, ‘ಅಲ್ಲಿಗೆ ಯಾಕೆ ಹೋಗಿದ್ದೆ? ಅಧಿಕಾರ ಹೋಗುತ್ತದೆ’ ಎಂದೆಲ್ಲ ಹೇಳಿದ್ದರು. ನನಗೆ ಹಿಂದೆ ಇಲ್ಲ ಮುಂದೆ ಇಲ್ಲ. ಆಗುವುದು ಆಗಲಿ ಎಂದು ಹೇಳಿದ್ದೆ. ಈಗ ನೋಡಿದರೆ, ರಾಷ್ಟ್ರದ ಅತ್ಯುನ್ನತ ನಾಗರಿಕ ಪುರಸ್ಕಾರಕ್ಕೆ ಆಯ್ಕೆಯಾಗಿದ್ದೇನೆ. ಹಾಗಾಗಿ, ಜಿಲ್ಲೆಗೆ ಬಂದು ಒಳ್ಳೆಯದೇ ಆಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.