ADVERTISEMENT

ಮೈಸೂರು ಮೇಯರ್‌ ಸ್ಥಾನ ಕಾಂಗ್ರೆಸ್‌ಗೆ ನೀಡಿ: ಆರ್‌ ಧ್ರುವನಾರಾಯಣ

ಪಕ್ಷದ ನಿಲುವು ಸ್ಪಷ್ಟವಾಗಿದೆ, ಜೆಡಿಎಸ್‌ಗೆ ತಿಳಿಸಿದ್ದೇವೆ–ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 11:52 IST
Last Updated 10 ಜೂನ್ 2021, 11:52 IST
ಆರ್‌.ಧ್ರುವನಾರಾಯಣ
ಆರ್‌.ಧ್ರುವನಾರಾಯಣ   

ಚಾಮರಾಜನಗರ: ‘ಮೈಸೂರು ಮೇಯರ್‌ ಚುನಾವಣೆಗೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟವಾಗಿದೆ. ಈ ಬಾರಿ ಮೇಯರ್‌ ನಮಗೆ ಕೊಡಿ. ಮುಂದಿನ ವರ್ಷ ಮೇಯರ್‌, ಉಪ ಮೇಯರ್‌ ಸ್ಥಾನವನ್ನು ತೆಗೆದುಕೊಳ್ಳಿ ಎಂದು ಜೆಡಿಎಸ್‌ಗೆ ತಿಳಿಸಿದ್ದೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಅವರು ಗುರುವಾರ ಹೇಳಿದರು.

ಸಂತೇಮರಹಳ್ಳಿಯಲ್ಲಿ ಮಾತನಾಡಿದ ಅವರು, ‘ಇದು ಸ್ಥಳೀಯ ಚುನಾವಣೆಯಾಗಿರುವುದರಿಂದ ಹೈಕಮಾಂಡ್‌ ಜೊತೆಗೆ ಮಾತುಕತೆಯ ಅಗತ್ಯವಿಲ್ಲ. ಅವರ ಮುಖಂಡರು ಕೂಡ ನಾವು ನಾವೇ ಮಾತನಾಡಿಕೊಳ್ಳೋಣ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ನಿರ್ಧಾರ ಮಾಡುವುದನ್ನು ಕಾಂಗ್ರೆಸ್‌ಗೆ ಬಿಟ್ಟು ಬಿಟ್ಟಿದ್ದೇವೆ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಅವರು ಎರಡು ಮೂರು ದಿನಗಳ ಹಿಂದೆ ಘೋಷಿಸಿದ್ದಾರೆ. ಒಪ್ಪಂದದ ಪ್ರಕಾರ, ಈ ಬಾರಿ ನಮಗೇ ಮೇಯರ್‌ ಸ್ಥಾನ ಸಿಗಬೇಕು. ಅದನ್ನು ಜೆಡಿಎಸ್‌ಗೆ ತಿಳಿಸಿದ್ದೇವೆ. ನಮ್ಮ ವರಿಷ್ಠರು ಕೂಡ ಅದೇ ಮಾತನ್ನು ಹೇಳಿದ್ದಾರೆ’ ಎಂದರು.

ಅಧಿಕಾರ ಪಡೆಯುವ ವಿಶ್ವಾಸ: ‘ಮೈಸೂರಿನ ಇತಿಹಾಸದಲ್ಲಿ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿಲ್ಲ. ಜಾತ್ಯತೀತ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜೊತೆಯಾಗಿ ಈ ಬಾರಿಯೂ ಅಧಿಕಾರ ಹಿಡಿಯುತ್ತೇವೆ ಎಂಬ ವಿಶ್ವಾಸ ಇದೆ’ ಎಂದು ಅವರು ಹೇಳಿದರು.

ADVERTISEMENT

ತನಿಖೆಯಾಗಲಿ: ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಮತ್ತು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಆರೋಪ ಪ್ರತ್ಯಾರೋಪದ ಬಗ್ಗೆ ಪ್ರತಿಕ್ರಿಯಿಸಿದ ಧ್ರುವನಾರಾಯಣ ಅವರು, ‘ಜವಾಬ್ದಾರಿಯುತ ಐಎಎಸ್‌ ಅಧಿಕಾರಿ ಆರೋಪಗಳನ್ನು ಮಾಡುತ್ತಿದ್ದಾರೆ. ಪರಸ್ಪರ ಆರೋಪಗಳನ್ನು ಮಾಡುವುದರ ಬದಲು ಇದರ ಬಗ್ಗೆ ನ್ಯಾಯಾಂಗ ತನಿಖೆಯಾಗಲಿ. ತನಿಖೆಯಿಂದ ನಿಜಾಂಶ ಗೊತ್ತಾಗಲಿದೆ. ರೋಹಿಣಿ ಅವರ ಬಳಿ ದಾಖಲೆಗಳು ಇವೆಯೇ ಎಂಬುದು ಗೊತ್ತಿಲ್ಲ. ಹೀಗಾಗಿ ಸಮಗ್ರ ತನಿಖೆಯಾಗಲಿ’ ಎಂದು ಒತ್ತಾಯಿಸಿದರು.

‘ಬಿಜೆಪಿ ಹೈಕಮಾಂಡ್‌ ಕುಮ್ಮಕ್ಕು’

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಲು ನರೇಂದ್ರ ಮೋದಿ , ಅಮಿತ್‌ ಶಾ ಅವರಿಗೆ ಇಷ್ಟವಿಲ್ಲ. ಹಾಗಾಗಿ, ಮುಖ್ಯಮಂತ್ರಿ ಅವರನ್ನು ಕೆಳಗಿಳಿಸಲು ಬಿಜೆಪಿ ಹೈಕಮಾಂಡ್‌ ಕುಮ್ಮಕ್ಕು ನೀಡುತ್ತಿದೆ. ಇದೇ ಕಾರಣಕ್ಕೆ ಯಡಿಯೂರಪ್ಪ ವಿರುದ್ಧ ಯಾರೇ ಮಾತನಾಡಿದರೂ ಅವರ ವಿರುದ್ಧ ಬಿಜೆಪಿ ವರಿಷ್ಠರು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಧ್ರುವನಾರಾಯಣ ಹೇಳಿದರು.

‘ಬಸನಗೌಡ ಪಾಟೀಲ ಯತ್ನಾಳ್‌, ಎಚ್‌.ವಿಶ್ವನಾಥ್‌, ಕೆ.ಎಸ್‌.ಈಶ್ವರಪ್ಪ, ಸಿ.ಪಿ.ಯೋಗೇಶ್ವರ್‌.. ಹೀಗೆ ಯಾರ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ. ಹೈಕಮಾಂಡ್‌ ಕುಮ್ಮಕ್ಕಿಲ್ಲದೆ ಇವರು ಮಾತನಾಡಿಲ್ಲ’ ಎಂದರು.

‘ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬರಬೇಕಾದ ಅನುದಾನ ನೀಡುವುದರಲ್ಲಿ ತಾರತಮ್ಯ ಮಾಡುತ್ತಿದೆ’ ಎಂದುಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.