ADVERTISEMENT

ಚಾಮರಾಜನಗರ | 7,698 ಪ್ರಯಾಣಿಕರು, ₹ 2.75 ಲಕ್ಷ ಆದಾಯ

ಕೆಎಸ್‌ಆರ್‌ಟಿಸಿ ಅಂತರ ಜಿಲ್ಲೆ ಸೇವೆ: ಮೊದಲ ದಿನ 75 ಬಸ್‌ ಸಂಚಾರ, ಜನರ ಸಂಖ್ಯೆ ಕಡಿಮೆ

ಸೂರ್ಯನಾರಾಯಣ ವಿ
Published 20 ಮೇ 2020, 20:00 IST
Last Updated 20 ಮೇ 2020, 20:00 IST
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಗರಿಷ್ಠ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಗರಿಷ್ಠ 30 ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುತ್ತಿದೆ   

ಚಾಮರಾಜನಗರ: ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗವು ಅಂತರ ಜಿಲ್ಲೆ ಬಸ್‌ ಸೇವೆ ಆರಂಭಿಸಿದ ಮೊದಲ ದಿನವಾದ ಮಂಗಳವಾರ ₹ 2.75 ಲಕ್ಷ ಆದಾಯ ಗಳಿಸಿದೆ. ಹೊರ ಜಿಲ್ಲೆಗಳಿಗೆ ಹಾಗೂ ಜಿಲ್ಲೆಯ ಒಳಗೆ 7,798 ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ಅಂತರಜಿಲ್ಲೆಗಳಿಗೆ ಬಸ್‌ ಸಂಚಾರ ಕಲ್ಪಿಸಲಾಗಿತ್ತು. ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿ 120 ಬಸ್‌ಗಳನ್ನು ಸಜ್ಜುಗೊಳಿಸಿತ್ತು. ಆದರೆ, ಪ್ರಯಾಣಿಕರ ಕೊರತೆಯಿಂದಾಗಿ 75 ಬಸ್‌ಗಳು ಮಾತ್ರ ಸಂಚರಿಸಿವೆ. ಈ ಬಸ್‌ಗಳು 185 ಟ್ರಿಪ್‌ಗಳನ್ನು ಮಾಡಿವೆ.

‘ಮೈಸೂರು ಮತ್ತು ಬೆಂಗಳೂರಿಗೆ ಮಾತ್ರ ಬಸ್‌ಗಳನ್ನು ಹಾಕಲಾಗಿದ್ದು, ಮೊದಲ ದಿನ 40 ಬಸ್‌ಗಳು ಮೈಸೂರಿಗೆ, 20 ಬಸ್‌ಗಳು ಬೆಂಗಳೂರು ಹಾಗೂ ಉಳಿದ ಬಸ್‌ಗಳು ತಾಲ್ಲೂಕು ಕೇಂದ್ರಗಳ ನಡುವೆ ಸಂಚರಿಸಿವೆ. ₹ 2.75 ಲಕ್ಷ ಆದಾಯ ಬಂದಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಚ್‌.ಶ್ರೀನಿವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಎರಡನೇ ದಿನವಾದ ಬುಧವಾರವೂ 120 ಬಸ್‌ಗಳ ಸಂಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬುಧವಾರ ಜಿಲ್ಲೆಯಿಂದ ಮೈಸೂರಿಗೆ ಹಾಗೂ ಬೆಂಗಳೂರಿಗೆ ಹೋಗುವುದಕ್ಕೆ ಪ್ರಯಾಣಿಕರು ಇದ್ದರು. ಆದರೆ, ಅಲ್ಲಿಂದ ಜಿಲ್ಲೆಗೆ ಬರುವವರು ಇರಲಿಲ್ಲ. ಹಾಗಾಗಿ, ಆ ಕಡೆಯಿಂದ ಬಸ್‌ಗಳು ಬರುವುದು ವಿಳಂಬವಾಗುತ್ತಿತ್ತು. ಬೆಂಗಳೂರಿನಿಂದ ನೇರವಾಗಿ ಜಿಲ್ಲೆಗೆ ಬರುವವರು ಇಲ್ಲದಿದ್ದರೂ, ದಾರಿ ಮಧ್ಯದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಬರುವಂತೆ ಅಧಿಕಾರಿಗಳು ಸಿಬ್ಬಂದಿಗೆ ಸೂಚಿಸಿದರು.

‘ಬುಧವಾರ ಜನರ ಸ್ಪಂದನೆ ಸಮಾಧಾನಕರವಾಗಿತ್ತು. ಬೆಳಿಗ್ಗೆ ಹೊತ್ತು ಬೆಂಗಳೂರು, ಮೈಸೂರಿಗೆ ಹೋಗಲು ಪ್ರಯಾಣಿಕರಿದ್ದರು. ಆಮೇಲೆ ಕಡಿಮೆಯಾಯಿತು. ಸದ್ಯ ಒಂದು ಬದಿಗೆ ಹೋಗುವುದಕ್ಕೆ ಮಾತ್ರ ಪ್ರಯಾಣಿಕರಿದ್ದಾರೆ’ ಎಂದು ಶ್ರೀನಿವಾಸ್‌ ತಿಳಿಸಿದರು.

‘ಸಮಾರಂಭಗಳು, ಪ್ರವಾಸೋದ್ಯಮ ಸೇರಿದಂತೆ ಯಾವುದೇ ಚಟುವಟಿಕೆ ಇಲ್ಲದಿರುವುದರಿಂದ ಜನರಿಗೆ ಬೇರೆ ಊರುಗಳಿಗೆ ಪ್ರಯಾಣಿಸಲು ಕಾರಣಗಳಿಲ್ಲ. ಕೆಲಸಕ್ಕೆ ಹೋಗುವವರು ಹಾಗೂ ಲಾಕ್‌ಡೌನ್‌ ಅವಧಿಯಲ್ಲಿ ಇಲ್ಲಿ ಸಿಕ್ಕಿ ಹಾಕಿಕೊಂಡವರು ಸದ್ಯ ಪ್ರಯಾಣಿಸುತ್ತಿದ್ದಾರೆ. ಎರಡು ಮೂರು ದಿನಗಳ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಅವರು ಹೇಳಿದರು.

ಇಂದಿನಿಂದ ನಂಜನಗೂಡಿಗೆ ಬಸ್‌?: ಸದ್ಯ ನಂಜನಗೂಡಿಗೆ ಜಿಲ್ಲೆಯಿಂದ ಬಸ್‌ ಹೋಗುತ್ತಿಲ್ಲ. ಮೈಸೂರಿಗೆ ಹೋಗುವ ಬಸ್‌ಗಳು ಕೂಡ ಅಲ್ಲಿ ನಿಲ್ಲಿಸುತ್ತಿಲ್ಲ. ನಂಜನಗೂಡಿಗೆ ಬಸ್‌ ಸೌಲಭ್ಯ ಕಲ್ಪಿಸಲು ಜನರಿಂದ ಒತ್ತಡ ಬರುತ್ತಿದ್ದು, ಗುರುವಾರದಿಂದ ಚಾಮರಾಜನಗರ–ನಂಜನಗೂಡು ನಡುವೆ ಬಸ್‌ ಸಂಚಾರ ಆರಂಭಿಸಲು ಅಧಿಕಾರಿಗಳು ಯೋಚಿಸುತ್ತಿದ್ದಾರೆ.

ಗ್ರಾಮಾಂತರ ಪ್ರದೇಶಗಳಿಗೆ ಸಂಚರಿಸುತ್ತಿಲ್ಲ ಬಸ್‌
ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳ ನಡುವೆ ಈಗಾಗಲೇ ಬಸ್‌ಗಳು ಸಂಚರಿಸುತ್ತಿದ್ದು, ಗ್ರಾಮಾಂತರ ಪ್ರದೇಶಗಳಿಗೂ ಸಂಚಾರ ನಡೆಸಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹಾಕಲು ಸಿದ್ಧತೆ ಮಾಡಿಕೊಂಡಿದೆ. ಆದರೆ, ಪ್ರಯಾಣಿಕರು ಇಲ್ಲದ ಕಾರಣಕ್ಕೆ ಗ್ರಾಮಾಂತರ ಪ್ರದೇಶಗಳಿಗೆ ಇನ್ನೂ ಸಂಚರಿಸಿಲ್ಲ.

’ಪ್ರಯಾಣಿಕರ ಬೇಡಿಕೆ ನೋಡಿಕೊಂಡು ಬಸ್‌ ವ್ಯವಸ್ಥೆ ಮಾಡಲಾಗುವುದು’ ಎಂದು ಶ್ರೀನಿವಾಸ್‌ ಹೇಳಿದರು.

ಈ ಮಧ್ಯೆ, ಗ್ರಾಮೀಣ ಜನರ ಓಡಾಟಕ್ಕೆ ಅನುಕೂಲ ಕಲ್ಪಿಸಲು ಗ್ರಾಮಾಂತರ ಪ್ರದೇಶಗಳಿಗೆ ಬಸ್‌ ಸೌಕರ್ಯ ಕಲ್ಪಿಸಬೇಕು ಎಂದು ಪರಿಸರವಾದಿ ಪುಣಜನೂರು ದೊರೆಸ್ವಾಮಿ ಒತ್ತಾಯಿಸಿದ್ದಾರೆ.

‘ಮಳೆ ‌ಬಂದು ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಈಗ ಅಗತ್ಯ ವಸ್ತುಗಳ ಖರೀದಿಗೆ ನಗರ, ಪಟ್ಟಣ ಪ್ರದೇಶಗಳಿಗೆ ಬರಲು ಅವರಿಗೆ ವಾಹನ ಸೌಕರ್ಯ ಬೇಕಿದೆ. ಬಸ್‌ ಹಾಕದಿದ್ದರೆ ಅವರು ಬರುವುದಾದರೂ ಹೇಗೆ? ತಕ್ಷಣವೇ ಸಂಚಾರ ಆರಂಭಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

*
ಅಂಕಿ– ಅಂಶ

550: ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗದಲ್ಲಿರುವ ಬಸ್‌ಗಳ ಸಂಖ್ಯೆ

₹ 55 ಲಕ್ಷದಿಂದ ₹ 60 ಲಕ್ಷ: ಸಂಸ್ಥೆಯ ಪ್ರತಿ ದಿನದ ಆದಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.