ADVERTISEMENT

ಸಂತೇಮರಹಳ್ಳಿ| ಕಾನೂನು ಅರಿವಿನಿಂದ ಅಪರಾಧಕ್ಕೆ ಕಡಿವಾಣ: ನ್ಯಾಯಾದೀಶ ಈಶ್ವರ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 2:23 IST
Last Updated 13 ಅಕ್ಟೋಬರ್ 2025, 2:23 IST
ಸಂತೇಮರಹಳ್ಳಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಿಎಸ್‌ಐ ತಾಜುದ್ಧೀನ್ ಮಾತನಾಡಿದರು
ಸಂತೇಮರಹಳ್ಳಿ ಸಮೀಪದ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಿಎಸ್‌ಐ ತಾಜುದ್ಧೀನ್ ಮಾತನಾಡಿದರು   

ಸಂತೇಮರಹಳ್ಳಿ: ಕಾನೂನು ಅರಿವಿನಿಂದ ಸಮಾಜದಲ್ಲಾಗುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ಸಿವಿಲ್ ನ್ಯಾಯಾದೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ತಿಳಿಸಿದರು.

ಸಮೀಪದ ಉಮ್ಮತ್ತೂರು ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಈಚೆಗೆ ನಡೆದ ಪೋಷಣ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಆಧುನಿಕತೆ ಮುಂದುವರಿದಿದ್ದರೂ ಬಾಲ್ಯ ವಿವಾಹ ಪಿಡುಗು ಹೆಚ್ಚಾಗಿದೆ. ಪೋಷಕರು ಇದರ ಬಗ್ಗೆ ಅರಿವು ಹೊಂದಿ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಬೇಕು. ಜಿಲ್ಲೆಯಲ್ಲಿ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ಅಲ್ಲಲ್ಲಿ ಸಂಭವಿಸುತ್ತಲೆ ಇವೆ. ಇದಕ್ಕೆ ಮುಕ್ತಿ ಸಿಗಬೇಕಾದರೇ ಬಾಲ್ಯ ವಿವಾಹದಿಂದಾಗುವ ದುಷ್ಪರಿಣಾಗಳ ಬಗ್ಗೆ ತಿಳಿದುಕೊಳ್ಳಬೇಕು. ಜತೆಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ADVERTISEMENT

ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಕೌಟುಂಬಿಕ ಕಲಹಗಳಿಗೆ ಯಾವುದೇ ಆಸ್ಪದ ಕೊಡದೇ ಸಾಮೂಹಿಕವಾಗಿ ಕುಟುಂಬದ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಲು  ಮುಂದಾಗಬೇಕು. ಆದಷ್ಟು ಕುಟುಂಬದಲ್ಲಿ ವೈರತ್ವ ಬೆಳೆಸದೇ ಉತ್ತಮ ಬಾಂಧವ್ಯ ಹೊಂದಿ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಬೇಕು. ಈಚಿನ ದಿನಗಳಲ್ಲಿ ಪೋಕ್ಸೊ ಕಾಯ್ದೆ ಪ್ರಕರಣ ಹೆಚ್ಚಾಗುತ್ತಿವೆ. ಎಲ್ಲರೂ ಒಗ್ಗೂಡಿ ಕಾನೂನು ಅರಿವು ಮೂಲಕ ಅಪರಾಧ ಚಟುವಟಿಕೆಗಳನ್ನು ತಡೆ ಹಿಡಿಯಬೇಕು ಎಂದು ತಿಳಿಸಿದರು.

ಪಿಎಸ್‌ಐ ತಾಜುದ್ಧೀನ್ ಮಾತನಾಡಿ, ಸಮಾಜದಲ್ಲಿ ದುಶ್ಚಟಗಳು ಹೆಚ್ಚಾಗುತ್ತಿದ್ದು, ತಡೆಗಟ್ಟುವಲ್ಲಿ ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿದೆ. ಕಾನೂನು ಉಲ್ಲಂಘನೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಯಶೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಅಭಿವೃದ್ಧಿ ಅಧಿಕಾರಿ ಪ್ರಭು, ಡಾ. ರವಿಕುಮಾರ್ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.