
ಚಾಮರಾಜನಗರ: ‘ಯರಕನಗದ್ದೆ ಸರ್ಕಾರಿ ಶಾಲೆಯ ತೊಂಬೆಯ (ಕಿರು ನೀರಿನ ಟ್ಯಾಂಕ್) ಬಳಿ ರಾತ್ರಿಯ ಹೊತ್ತು ಮದ್ಯ ಸೇವಿಸಿ ಖಾಲಿ ಪೌಚ್‌ಗಳನ್ನು ಶಾಲೆ ಆವರಣದಲ್ಲೇ ಬಿಸಾಡಿ ಹೋಗುತ್ತಾರೆ, ಬೆಳಿಗ್ಗೆ ಶಾಲೆಯ ವಾತಾವರಣ ನೋಡಿ ವಾಕರಿಕೆ ಹುಟ್ಟಿಸುತ್ತದೆ, ದಯವಿಟ್ಟು ಶಾಲಾ ಆವರಣದಲ್ಲಿ ಮದ್ಯ ಸೇವನೆ ಮಾಡದಂತೆ ಕ್ರಮ ಕೈಗೊಳ್ಳಿ ಸರ್’....
‘ಶಾಲೆಯಿಂದ ಮನೆಗೆ ಹೋಗುವ ರಸ್ತೆಯಲ್ಲಿ ಕುಡುಕರು ಮದ್ಯದ ಅಮಲಿನಲ್ಲಿ ತೇಲಾಡುತ್ತಾ ಬರುವಾಗ ಭಯವಾಗುತ್ತದೆ, ಹಾಡಿಗಳಲ್ಲಿ ಪ್ರತಿ ದಿನ ಮದ್ಯವಸ್ಯನಿಗಳು ಜಗಳವಾಡುವುದರಿಂದ ಗಲಾಟೆಯಲ್ಲಿ ಓದಲು ತೊಂದರೆಯಾಗುತ್ತಿದ್ದು ದಯವಿಟ್ಟು ಸಮಸ್ಯೆ ಬಗೆಹರಿಸಿ..
ಹೀಗೆ, ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಚೆಗೆ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ಸಮಸ್ಯೆ ಹೇಳಿಕೊಂಡಿದ್ದಾರೆ. ಮಕ್ಕಳ ಅಳಲು ಹಾಡಿಗಳಲ್ಲಿ ಅವ್ಯಾಹತವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದಕ್ಕೆ ನಿದರ್ಶನವಾಗಿದೆ. ಇಷ್ಟಾದರೂ ಸಂಬಂಧಪಟ್ಟ ಇಲಾಖೆ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ವಿಫಲವಾಗಿದೆ ಎಂದು ದೂರುತ್ತಾರೆ ಗ್ರಾಮಸ್ಥರು.
ಬಿ.ಆರ್ ಹಿಲ್ಸ್ ವ್ಯಾಪ್ತಿಯ ಪೋಡುಗಳಲ್ಲಿರುವ ಸಣ್ಣ ಕಿರಾಣಿ ಅಂಗಡಿ ಹಾಗೂ ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದ್ದು, ಆದಿವಾಸಿಗಳು ದುಶ್ಚಟಗಳಿಗೆ ಸಿಲುಕುತ್ತಿದ್ದಾರೆ. ದುಡಿದ ಬಹುಪಾಲು ಹಣ ಮದ್ಯವ್ಯಸನಕ್ಕೆ ವ್ಯಯವಾಗುತ್ತಿರುವುದರಿಂದ ಹಾಡಿಗಳಲ್ಲಿ ನೆಮ್ಮದಿಯ ವಾತಾವರಣ ಇಲ್ಲವಾಗಿದೆ. ಪ್ರತಿನಿತ್ಯ ಜಗಳ, ವೈಷಮ್ಯಗಳು ನಡೆಯುತ್ತಿದ್ದು ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು ಮಕ್ಕಳ ಮನಸ್ಸಿನ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ.
‘ದುಶ್ಚಟಗಳಿಗೆ ಸಿಲುಕು ಹಾಡಿಯ ಯುವಜನತೆ ದಾರಿ ತಪ್ಪುತ್ತಿದ್ದು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈಗಾಗಲೇ ವರ್ಷದಿಂದ ವರ್ಷಕ್ಕೆ ಸೋಲಿಗರ ಜನಸಂಖ್ಯೆ ಕ್ಷೀಣಿಸುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಕೆಲವೇ ದಶಕಗಳಲ್ಲಿ ಸಮುದಾಯ ಅವನತಿ ಹೊಂದಲಿದೆ’ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ.
ಜಿಲ್ಲೆಯ ಚಾಮರಾಜನಗರ, ಯಳಂದೂರು, ಹನೂರು ಹಾಗೂ ಕೊಳ್ಳೇಗಾಲ ತಾಲ್ಲೂಕು ವ್ಯಾಪ್ತಿಯಲ್ಲಿ 148 ಪೋಡುಗಳಿದ್ದು ಆದಿವಾಸಿಗಳು ಬಹುಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹೆಚ್ಚಿನ ಹಾಡಿಗಳಲ್ಲಿ ರಾಜಕೀಯವಾಗಿ ಪ್ರಭಾವಿಗಳು, ಪ್ರಬಲ ಕೋಮಿನ ಮುಖಂಡರು ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿಸಿಕೊಂಡಿದ್ದು, ನಗರ ಹಾಗೂ ಪಟ್ಟಣಗಳಲ್ಲಿರುವ ಮದ್ಯದ ಅಂಗಡಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮದ್ಯವನ್ನು ಖರೀದಿಸಿ ಪೋಡುಗಳಿಗೆ ತಂದು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.
ಬಹುತೇಕ ಕಡೆ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಗಳಿದ್ದರೂ ಪರಿಣಾಮಕಾರಿಯಾಗಿ ತಪಾಸಣೆ ನಡೆಯುತ್ತಿಲ್ಲ. ಆಹಾರ ಪದಾರ್ಥಗಳ ಮಧ್ಯೆ ಮದ್ಯದ ಬಾಟಲಿಗಳನ್ನು ಇರಿಸಿ ಸಾಗಿಸಲಾಗುತ್ತಿದೆ. ಕೆಲವು ಕಡೆ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರೇ ನೆರವು ನೀಡುತ್ತಿದ್ದಾರೆ ಎಂದು ದೂರುತ್ತಾರೆ ಸ್ಥಳೀಯ ಮುಖಂಡರು.
‘ಅತಿಯಾದ ಮದ್ಯವ್ಯಸನದ ಗೀಳಿಗೆ ಬಿದ್ದವರು ಮದ್ಯ ಸೇವನೆಗೆ ಮೀಟರ್ ಬಡ್ಡಿಗೆ ಸಾಲ ಪಡೆಯುತ್ತಿದ್ದು ಸಾಲದ ಶೂಲದಿಂದ ಹೊರಬರಲಾಗದೆ ಇರುವ ಅಂಗೈ ಅಗಲ ಭೂಮಿ ಮಾರಿಕೊಳ್ಳುತ್ತಿದ್ದಾರೆ. ಗಂಭೀರ ಕಾಯಿಲೆಗಳಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ತಡೆಯೊಡ್ಡದಿದ್ದರೆ ಆದಿವಾಸಿಗಳ ಸಂಸ್ಕೃತಿ, ಆಚಾರ, ವಿಚಾರಗಳು ನಶಿಸಿ ಹೋಗುತ್ತವೆ’ ಎಂದು ಮುಖಂಡ ಸಿ.ಮಾದೇಗೌಡ ತಿಳಿಸಿದರು.
ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ತಕ್ಷಣ ದಾಳಿ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಠಾಣೆಯ ಪೊಲೀಸರಿಗೆ ನಿರ್ದೇಶನ ನೀಡಲಾಗುವುದು.ಎಂ.ಮುತ್ತುರಾಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
‘ಪೊಲೀಸರ ತಪಾಸಣೆ ಇಲ್ಲ’
ಬಿಳಿಗಿರಿ ರಂಗನಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಡುಗಳಲ್ಲಿರುವ ಕಿರಾಣಿ ಅಂಗಡಿಗಳಿಗೆ ಹಿಂದೆ ಪೊಲೀಸರು ಪ್ರತಿದಿನ ಭೇಟಿ ನೀಡಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆಯೇ ಎಂದು ಪರಿಶೀಲಿಸಿ ಲಾಗ್‌ಬುಕ್‌ನಲ್ಲಿ ವಿವರ ದಾಖಲಿಸುತ್ತಿದ್ದರು. ಈಚೆಗೆ ಪೊಲೀಸರು ಭೇಟಿನೀಡದ ಪರಿಣಾಮ ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಹರಿಸಬೇಕು ಎಂದು ಮಕ್ಕಳ ಗ್ರಾಮ ಸಭೆಯಲ್ಲಿ ಆದಿವಾಸಿ ಮಹಿಳೆಯೊಬ್ಬರು ಒತ್ತಾಯಿಸಿದರು.
ಮದ್ಯ ಮಾರಾಟದ ಅಂಗಡಿ ಮುಂದೆ ಪ್ರತಿಭಟನೆ
ಸೋಲಿಗ ಸಮುದಾಯದ ಮುಖಂಡರು ಮಹಿಳೆಯರು ಹಾಗೂ ಸಮುದಾಯದ ಸಂಘಟನೆಗಳು ಸೇರಿಕೊಂಡು ಹಾಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವ ಅಂಗಡಿಗಳ ಮುಂದೆ ಧರಣಿ ಸತ್ಯಾಗ್ರಹ ಮಾಡಲು ನಿರ್ಧರಿಸಲಾಗಿದೆ. ಮದ್ಯ ಮಾರಾಟ ನಿಲ್ಲುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು’ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.